ಬೆಂಗಳೂರು, ಏಪ್ರಿಲ್ 26: ಪ್ರಮುಖ ಇಂಜಿನಿಯರಿಂಗ್ ಕಾಲೇಜುಗಳಲ್ಲಿ (Engineering Colleges) ನಡೆಯುವ ಸೀಟ್ ಬ್ಲಾಕಿಂಗ್ (Seet Bloking) ಎಂಬ ಕರಾಳ ದಂಧೆಗೆ ಬ್ರೇಕ್ ಹಾಕಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮುಂದಾಗಿದ್ದು, ಈ ಬಾರಿ ಹೊಸ ತಂತ್ರ ಪ್ರಯೋಗ ಮಾಡಿದೆ. ಇಂಜಿನಿಯರಿಂಗ್ ಮಾಡಬೇಕು ಅಂತ ಕನಸು ಹೊತ್ತ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದು ಸೀಟು ಗಿಟ್ಟಿಸಿಕೊಳ್ಳುತ್ತಾರೆ. ಆದರೆ, ಕೊನೆ ಗಳಿಗೆಯಲ್ಲಿ ತಮ್ಮ ನಿರ್ಧಾರ ಬದಲಿಸಿ ಬಿಡುತ್ತಾರೆ. ಇದೇ ಕಾರಣಕ್ಕೆ ಸೀಟ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎಂಬ ಮಾತು ಕೇಳಿಬರುತ್ತಿತ್ತು. ಹೀಗಾಗಿ ಕೆಇಎ ಹೊಸ ರೂಲ್ಸ್ ತಂದಿದ್ದು, ಸೀಟ್ ಬ್ಲಾಕ್ ಮಾಡಿದರೆ ಅಥವಾ ನಿರ್ಲಕ್ಷ್ಯ ವಹಿಸಿದರೆ ವಿದ್ಯಾರ್ಥಿಗಳ ಭವಿಷ್ಯವೆ ಹಾಳಾಗಿ ಹೋಗುತ್ತದೆ ಎಂದು ಕೆಇಎ ಎಚ್ಚರಿಕೆ ಕೊಟ್ಟಿದೆ.
ಇಂಜಿನಿಯರಿಂಗ್ ಸೀಟ್ ಪಡೆದ ವಿದ್ಯಾರ್ಥಿ, ಅಂತಿಮ ಹಂತದಲ್ಲಿ ಸೀಟ್ ರದ್ದು ಪಡಿಸಿದರೆ, 5 ಪಟ್ಟು ಹೆಚ್ಚು ಶುಲ್ಕ ಕಟ್ಟಬೇಕು. ಜೊತೆಗೆ ಸಿಇಟಿ ಪರೀಕ್ಷೆಗಳಿಂದ 3 ವರ್ಷ ವಿದ್ಯಾರ್ಥಿಯನ್ನು ಬ್ಯಾನ್ ಮಾಡಲು ಕೆಇಎ ನಿರ್ಧರಿಸಿದೆ. ಇಷ್ಟು ದಿನ ಶುಲ್ಕ ಕಟ್ಟಿದ ನಂತರ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಅವಕಾಶವಿತ್ತು.
ಆದರೆ, ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಕೆಇಎಗೆ ಮಾಹಿತಿ ಸಿಗುತ್ತಿರಲಿಲ್ಲ. ಇದೇ ಕಾರಣಕ್ಕೆ ಈಗ ಪ್ರವೇಶ ಪತ್ರದ ಬದಲು, ಸೀಟು ಖಚಿತತೆ ಪತ್ರ ನೀಡಲು ಕೆಇಎ ತೀರ್ಮಾನಿಸಿದೆ. ಇದರಿಂದ ವಿದ್ಯಾರ್ಥಿಗಳು ಆಯ್ಕೆಯಾದ ಕಾಲೇಜಿಗೆ ಕಡ್ಡಾಯವಾಗಿ ಹೋಗಲೇಬೇಕಾಗುತ್ತದೆ. ಒಂದು ವೇಳೆ ವಿದ್ಯಾರ್ಥಿ ಆ ಕಾಲೇಜಿಗೆ ಹೋಗದಿದ್ದರೇ ಆ ಸೀಟನ್ನು ಉಳಿಕೆ ಸೀಟು ಅಂತ ಮುಂದಿನ ಸುತ್ತಿಗೆ ಪರಿಗಣಿಸಲಾಗುತ್ತೆ.
ಇದನ್ನೂ ಓದಿ: UPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅಭ್ಯರ್ಥಿಗಳಿಗೆ ಸಿಗುವ ಸಂಬಳ ಎಷ್ಟು?
ಈ ಹೊಸ ನಿಯಮದಿಂದ ಇತರೆ ಅರ್ಹ ವಿದ್ಯಾರ್ಥಿಗಳಿಗೆ ಬೇಕಾದ ಕಾಲೇಜಿನಲ್ಲಿ ಸೀಟು ಸಿಗಲು ಅವಕಾಶ ಸಿಗುತ್ತದೆ. ಆದರೆ, ಕೆಇಎ ತಂದಿರುವ ಈ ಹೊಸ ನಿಯಮದಿಂದ ಸೀಟ್ ಬ್ಲಾಕಿಂಗ್ ದಂಧೆಗೆ ಕಡಿವಾಣ ಬೀಳುತ್ತಾ ಕಾದು ನೋಡಬೇಕಿದೆ.
Published On - 6:57 pm, Sat, 26 April 25