Children: ಅಮಾರೈಟ್; ನಮ್ಮ ಮಕ್ಕಳು ಮ್ಯಾಜೀಷಿಯನ್ ಆಗುತ್ತಿದ್ದಾರಾ?

Parents Expectations : ವಿಚಿತ್ರವಾದ ಕಾಲಘಟ್ಟವಿದು. ಪ್ರೆಷರ್ ಕುಕ್ಕರಿನ ಸೀಟಿಯ ಹಾಗೆ ಮಕ್ಕಳು ಏದುಸಿರು ಬಿಡುತ್ತಾ ಮತ್ತೆ ಮತ್ತೆ ಬೇಯುತ್ತಲೇ ಇದ್ದಾರೆ. ನಮಗೆ ಅದೇನು ಅಟ್ಟಡಿಗೆಯ ಸಂಭ್ರಮವೊ, ಮಕ್ಕಳನ್ನು ಬೇಯಿಸುತ್ತಲೇ ಇದ್ದೇವೆ.

Children: ಅಮಾರೈಟ್; ನಮ್ಮ ಮಕ್ಕಳು ಮ್ಯಾಜೀಷಿಯನ್ ಆಗುತ್ತಿದ್ದಾರಾ?
ಫೋಟೋ : ಕೃಷ್ಣ ದೇವಾಂಗಮಠ
ಶ್ರೀದೇವಿ ಕಳಸದ | Shridevi Kalasad

|

Mar 22, 2022 | 10:46 AM

ಅಮಾರೈಟ್ | Amaright : ನಿತ್ಯವೂ ಕ್ವೆಷ್ಟನ್‌ ಪೇಪರ್‌ಗಳಿಲ್ಲದ ನೆಗೆಟಿವ್‌ ಮಾರ್ಕಿಂಗ್‌ ಪರೀಕ್ಷೆ ಬರೆಯುತ್ತಲೇ ಇರುವ ನಾವು ನಮ್ಮ ಫಲಿತಾಂಶವನ್ನು ನಮ್ಮ ನಗು, ಮಾತು, ನೆಮ್ಮದಿ ಮತ್ತು ಖುಷಿಯಲ್ಲಿ ಗುರುತಿಟ್ಟುಕೊಳ್ಳುವ ಅಭ್ಯಾಸವಿಲ್ಲದ್ದಕ್ಕೇ ಪಾಸು ಫೇಲುಗಳು ಟೆಕ್ನಿಕಲಿ ನಮ್ಮ ಡಿಸೈಡಿಂಗ್‌ ಫ್ಯಾಕ್ಟರ್‌ ಆಗಿಹೋಗಿವೆ. ಕಳೆದ ಬಾರಿಯ ಅಂಕಣದಲ್ಲಿ ಯುದ್ಧವನ್ನು, ನಮ್ಮ ನಿತ್ಯದ ಯುದ್ಧಗಳೊಂದಿಗೆ ಬರೆದಾಗ ಆಪ್ತರೊಬ್ಬರು ಅಂತಹ ಮಾತೆಲ್ಲಾ ʼಬರೀ ಬುದ್ಧಿವಂತಿಕೆʼಯೇ ಹೊರತು ಯುದ್ಧದ ತೀವ್ರತೆ ಮಾತಾಡುವಂತದ್ದಲ್ಲ ಅಂದರು. ಆದರೆ ʼಬುದ್ಧಿವಂತಿಕೆʼಯ ಡಿಸೈಡಿಂಗ್‌ ಫ್ಯಾಕ್ಟರ್‌ ಓದಿದ ಡಿಗ್ರಿಯಿಂದಲ್ಲದೆ, ಅನುಭವದಿಂದ ಬಂದಿದ್ದಾದರೆ ಅದೇ ತಾನೇ ಅನ್ವಯಿಕ ಶಿಕ್ಷಣ. ನಿಜ ಹೇಳಬೇಕೆಂದರೆ, ಕೆಲವೊಂದು ವಿಷಯಗಳು ಮಾತಾಡಿದರೆ ದೊಡ್ಡದು ಅನ್ನಿಸುವುದಿಲ್ಲ. ಪರಿಣಾಮಗಳೂ ನೇರವಾಗಿರುವುದಿಲ್ಲ. ಹಾಗಂತ ಸರಳವಾದ ವಿಷಯಗಳನ್ನು ಸರಳವಾಗೆ ಆಡಿ ತಿಳಿಸಬೇಕಾದ್ದು, ಮುಗಿಸಬೇಕಾದ್ದೂ ಮುಖ್ಯ ಅಂದುಕೊಂಡಾಗ ವಾವ್‌ ಫ್ಯಾಕ್ಟರ್‌ಗಳು ಸಿಗದೇ ಹೋದರೂ ‘ಕಲಿಕೆʼ ಮುಖ್ಯವಾಗುತ್ತದಲ್ಲ. ಭವ್ಯಾ ನವೀನ, ಕವಿ, ಲೇಖಕಿ (Bhavya Naveen)

(ಬಿಲ್ಲೆ 6, ಭಾಗ 1)

ಅತ್ಯಂತ ಸುಡು ಸುಡು ದಿನಗಳು ಮಾರ್ಚಿ ಏಪ್ರಿಲ್​ನಲ್ಲಿರುತ್ತವೆ ಅನ್ನುವುದು ಬೇಸಿಗೆಕಾಲದ ಕಾರಣಕ್ಕಲ್ಲ. ಇವು ಪರೀಕ್ಷೆಯ ಕಾಲ ಮತ್ತು ಅದಕ್ಕೂ ಮುಖ್ಯವಾಗಿ ಫಲಿತಾಂಶಗಳ ಕಾಲ.  ಒಂದನೇ ತರಗತಿಯ ಮಗನ ಎಸ್‌ಎ 2 ರಿಸಲ್ಟ್ ಮುಗಿಸಿಕೊಂಡು ಬಂದ ಗೆಳತಿಯೊಬ್ಬಳು ಅವನ ಶೇ. 95.6 ಮಾರ್ಕ್ಸ್ ಅನ್ನು ಏನೂ ಅಲ್ಲ ಅನ್ನುವ ಹಾಗೇ ಹೇಳುವಾಗ ದಿಗಿಲಾಯಿತು. ತರಗತಿಯ ರ್ಯಾಕಿಂಗ್ ಲಿಸ್ಟ್‌ನಲ್ಲಿದ್ದ ಟಾಪ್ ಸ್ಟೂಡೆಂಟ್‌ಗಳ ಹೆಸರು ಮತ್ತು ಸ್ಕೋರ್‌ಗಳನ್ನು ನೋಡಿ ಕಂಗಾಲಾಗಿದ್ದ ಅವಳು “ಇವ್ನ ಕ್ಲಾಸ್‌ನಲ್ಲಿ ಟಾಪರ್ ಶೇ 99.8 ಕಣೇ, ಆ್ಯವರೇಜ್ ಮಕ್ಕಳ ಸ್ಕೋರೇ 9೦ ಪರ್ಸೆಂಟಿರತ್ತೆ” ಅಂತ ಅಲವತ್ತು ಕೊಳ್ಳುವಾಗ  ನಾವೆಲ್ಲಾ 8೦ ಪರ್ಸೆಂಟಿಗೇ ರ್ಯಾಂಕ್ ಸ್ಟೂಡೆಂಟ್ ಥರ ಪೋಝು ಕೊಡುತ್ತಿದ್ದ ದಿನಗಳು ನೆನಪಾದವು. “ಸಾಧ್ಯವಿದ್ರೆ ಅಷ್ಟೊಳ್ಳೆ ಮಾರ್ಕ್ಸಿಗೆ ಖುಷಿ ಪಡಬೇಕು. ಇಲ್ಲಾಂದ್ರೆ ಮಾರ್ಕ್ಸ್‌ಕಾರ್ಡ್ ಅನ್ನುವ ಪ್ರಪಂಚದ ಅತ್ಯಂತ ಕೆಟ್ಟ ಪೇಪರ್ ತುಂಡಿನ ವಿರುದ್ಧ ಸತ್ಯಾಗ್ರಹ ಮಾಡಬೇಕು, ಹೀಗೆ ಅವನಿಗೆ ಮಾತ್ರ ಟೆನ್ಷನ್ ಕೊಡ್ಬೇಡ ಮಾರಾಯ್ತಿ” ಅಂದಿದ್ದೆ. ಉಪದೇಶ ಅಂತಲ್ಲ, ಸತ್ಯವಾಗಲೂ ಮಾರ್ಕ್ಸ್‌ ವಿಚಾರದಲ್ಲಿ ನನ್ನ ಮಕ್ಕಳ ವಿಷಯದಲ್ಲೂ ನನ್ನದು ಇದೇ ನಿಲುವು. ಮೊದಲು ಕಲಿತು, ಕಲಿತದ್ದನ್ನ ವಿವರಿಸಿ, ವಿವರಿಸಿದ್ದನ್ನ ಅನ್ವಯಿಸುವಷ್ಟು ಬುದ್ಧಿ ಬಂದರೆ ಹೇಗೋ ಬದುಕು ಕಟ್ಟಿಕೊಳ್ಳುತ್ತಾರೆ ಅನ್ನುವುದು ನನ್ನ ಆಶಯವೂ, ಅನುಭವವೂ.

ಇದನ್ನೂ ಓದಿ : War: ಅಮಾರೈಟ್; ಈ ತುದಿಯಲ್ಲಿ ಬಿದ್ದ ಬಾಂಬಿನ ದಟ್ಟಹೊಗೆ ಗಡಿಯಾಚೆಯ ದೇಶಕ್ಕೆ ಬೀಸದಂತೆ ತಡೆಯಬಹುದಾ?

ವಿಚಿತ್ರವಾದ ಕಾಲಘಟ್ಟವಿದು. ಪ್ರೆಷರ್ ಕುಕ್ಕರಿನ ಸೀಟಿಯ ಹಾಗೆ ಮಕ್ಕಳು ಏದುಸಿರು ಬಿಡುತ್ತಾ ಮತ್ತೆ ಮತ್ತೆ ಬೇಯುತ್ತಲೇ ಇದ್ದಾರೆ. ನಮಗೆ ಅದೇನು ಅಟ್ಟಡಿಗೆಯ ಸಂಭ್ರಮವೋ ಮಕ್ಕಳನ್ನು ಬೇಯಿಸುತ್ತಲೇ ಇದ್ದೇವೆ. ಮೊದಲೇ ಇನ್‌ಸ್ಟಂಟ್ ಫುಡ್‌ಗಳ ಕಾಲವಿದು, ಮಕ್ಕಳನ್ನೂ ಇನ್‌ಸ್ಟಂಟ್ ಆಗಿಯೇ ನಮಗೆ ಬೇಕಾದ ಹಾಗೇ ಪ್ಲ್ಯಾಂಟಿಂಗ್ ಮಾಡುವ ಉಮೇದು ತಲೆಗೆ ಹತ್ತಿಸಿಕೊಂಡಿದ್ದೇವೆ. ಒಂದು ಕಡೆ ಮಕ್ಕಳ ಅಲ್ಟಿಮೇಟ್ ಸಾಧನೆ ಎಂದರೆ ಮಾರ್ಕ್ಸ್​ಕಾರ್ಡಿನ ಅಂಕಿಗಳಷ್ಟೇಯಾ ಅಂತ ತೀರ್ಮಾನಿಸಿಕೊಂಡಿದ್ದರೆ, ಮತ್ತೊಂದು ಕಡೆ ಅತ್ಯಂತ ಜೋಪಾನವಾಗಿ ಅವರನ್ನು ಜಗತ್ತಿನೆದುರಿಗೆ ನಿಲ್ಲಿಸಿ ಹಾಡಿಸಿ, ಕುಣಿಸಿ ಜಗತ್ತಿನ ಅವಶ್ಯಕತೆಗೆ ತಕ್ಕಂತೆ ಮೌಲ್ಡ್ ಮಾಡುತ್ತಾ ಸೆಲೆಬ್ರಿಟಿಯನ್ನಾಗಿಸುವ ಆಸೆಯಲ್ಲಿ ಅವರ ಅಂತಃಸತ್ವವನ್ನು ಹಾಳುಗೆಡವುತ್ತಿದ್ದೇವೆ. ಇನ್ನೂ ಎಳೆಯ  ಜೀವಗಳ ಖಾಸಗೀತನಕ್ಕೆ ಅರಿವೇ ಆಗದ ಹಾಗೇ ನಾವೇ ಎರವಾಗುತ್ತಿದ್ದೇವೆ!

ಈಗಿನ ಮಕ್ಕಳಾ! ನಿಮಿಷಗಳಲ್ಲಿ ಎಂಟಂಕಿಗಳ ಲೆಕ್ಕ ಬರೆದು ಮುಗಿಸುತ್ತಾರೆ, ಯಾವ್ಯಾವುದೋ ದೇಶಗಳ ಬಾವುಟ, ಭಾಷೆಗಳನ್ನು ಒಂದೇ ಗುಕ್ಕಿಗೆ ಹೇಳಿ ದಂಗು ಬಡಿಸುತ್ತಾರೆ, ವರ್ಷಾನುವರ್ಷಗಳ ತಪಸ್ಸಿನಂಥ ರಾಗಗಳನ್ನು ಈಗ ಎಳೆ ಹುಡುಗಿಯೊಬ್ಬಳು ಹಾಗೇ ಹಾಗೇ ಒಪ್ಪಿಸುತ್ತಾಳೆ, ಮೈಯಲ್ಲಿ ಮೂಳೆಗಳೇ ಇಲ್ಲದ ಹಾಗಿನ ಡ್ಯಾನ್ಸ್ ಒಂದನ್ನು ಆ ಮಗು ತಾಳಬದ್ಧವಾಗಿ ಮಾಡಿ ತೋರಿಸುತ್ತದೆ, ಯಾರೋ ನಾಯಕನೊಬ್ಬನ ಉದ್ದುದ್ದದ ಡೈಲಾಗ್ ಅನ್ನು ಪುಟಾಣಿಯೊಂದು ಅದೇ ಶೈಲಿಯಲ್ಲಿ ಕಿವಿಗಡಚಿಕ್ಕುವ ಹಾಗೆ ಅಭಿನಯಿಸುತ್ತದೆ. ಮತ್ತೆ ಅವೇ ಮಕ್ಕಳು ಶಾಲೆಯಲ್ಲೂ ನೂರಕ್ಕೆ ನೂರಕ್ಕಿಂತ ಸ್ವಲ್ಪ ಕಡಿಮೆ ಅಂಕ ಗಳಿಸುತ್ತವೆ ಅಂದರೆ ವಾವ್! ನಮ್ಮ ಮಕ್ಕಳೀಗ ಮ್ಯಾಜಿಷಿಯನ್ ಆಗುತ್ತಿದ್ದಾರಾ? ಅನ್ನುವ ಅನುಮಾನ. ಅಥವಾ ನಾವು ಮ್ಯಾಜಿಷಿಯನ್ ಮಾಡಲು ಹೊರಟಿದ್ದೇವಾ ಅನ್ನುವ ಆತಂಕ.

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)

ಹಿಂದಿನ ಬಿಲ್ಲೆ : War: ಅಮಾರೈಟ್; ವಿನಾಶವನ್ನು ಹೊತ್ತು ತರುವ ಮನುಷ್ಯನೂ ಬಾಂಬು ಮಿಸಾಯಿಲೇ ಆಗಿರುವಾಗ

ಈ ಅಂಕಣದ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/amaright

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada