Transgender Community : ಟ್ರಾನ್ಸ್ ಸಬ್ ಇನ್ಸ್ಪೆಕ್ಟರರನ್ನು ಸಮತೆಯಿಂದ ನೋಡಲು ಉಳಿದ ಪೊಲೀಸ್ ಸಿಬ್ಬಂದಿಗೆ ಸಂವೇದನಾ ತರಬೇತಿ ಬೇಕು
KSP Application : ‘ಈ ನಿರ್ಧಾರ ಟ್ರಾನ್ಸ್ ಸಮುದಾಯದ ಎಷ್ಟೋ ಪ್ರತಿಭಾವಂತರಿಗೆ ಅನುಕೂಲವಾಗುವುದರಲ್ಲಿ ಸಂಶಯವಿಲ್ಲ. ಆದರೆ, SRS (sex re-assignment surgery) ಆದವರು ಮಾತ್ರ ಟ್ರಾನ್ಸ್ ಜನರು ಎನ್ನುವ ಗ್ರಹಿಕೆಯಿದೆ. ಯಾವುದೇ ವ್ಯಕ್ತಿ ತನ್ನ ಸ್ವ ಇಚ್ಛೆಯಿಂದ ಟ್ರಾನ್ಸ್ ಎಂದು ಗುರುತಿಸಿಕೊಂಡರೆ ಮತ್ತು ಕೋರ್ಟ್ ಅಫಿಡವಿಟ್ ತಂದರೆ ಅವರು ಅರ್ಜಿಗೆ ಅರ್ಹರೆ? ಮತ್ತದಕ್ಕೆ ಪೂರಕವಾದ ದಾಖಲೆಗಳು ಏನು?’ ದಾದಾಪೀರ ಜೈಮನ್
Transgender’s Community : ಸಮಾನ ಅವಕಾಶಗಳನ್ನು ಪಡೆದುಕೊಂಡು ತನ್ನನ್ನು ತಾ ಉನ್ನತೀಕರಣಗೊಳಿಸಿಕೊಂಡು ಬದುಕುವ ಹಕ್ಕು ಮತ್ತು ಪ್ರಯತ್ನ ಪ್ರತೀ ಮಾನವಜೀವಿಗಳಲ್ಲೂ ಇದ್ದೇ ಇರುತ್ತದೆ. ಇದಕ್ಕೆ ಸಮಾಜ ಮತ್ತು ಸರ್ಕಾರದ ಪ್ರತಿಸ್ಪಂದನೆ ಅತ್ಯವಶ್ಯ. ಅಂದಾಗ ಮಾತ್ರ ಅಲ್ಲಿ ಒಂದಿಷ್ಟು ಬೆಳಕು ಮೂಡುತ್ತದೆ. ನಿನ್ನೆಯಷ್ಟೇ ರಾಜ್ಯ ಪೊಲೀಸ್ ಇಲಾಖೆಯು ಲೈಂಗಿಕ ಅಲ್ಪಸಂಖ್ಯಾತರಿಗೆ ಇಲಾಖೆಯ ನೇಮಕಾತಿಯಲ್ಲಿ ಶೇ.1 ರಷ್ಟು ಮೀಸಲಾತಿಯನ್ನು ಘೋಷಿಸಿದೆ. ಬೆಳಗಾವಿಯಲ್ಲಿ ಮಾತನಾಡಿದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ‘ಲೈಂಗಿಕ ಅಲ್ಪಸಂಖ್ಯಾತರು ಅಪರಾಧವೆಸಗಿದಾಗೆಲ್ಲಾ ಇಲಾಖೆಯು ಶಿಕ್ಷಿಸುತ್ತ ಬಂದಿದೆ. ಆದರೆ ಈಗ ಅವರೂ ಶಿಕ್ಷಣ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯ ನಿರ್ವಹಿಸಲು ಆಶಿಸಿದ್ದಾರೆ. ಹಾಗಾಗಿ ಅವರ ಮನವಿಯನ್ನು ಮಾನ್ಯ ಮಾಡುವುದು ನಮ್ಮ ಕರ್ತವ್ಯ. ಇನ್ನುಮುಂದೆ ಅರ್ಹತೆ ಇದ್ದ ಈ ಸಮುದಾಯದ ಯಾರೂ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ. ಈ ಹೆಜ್ಜೆ ಇಡೀ ದೇಶದಲ್ಲೇ ಮೊದಲು’ ಎಂದಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ನಿವಾಸಿ, ಲೇಖಕ, ಅನುವಾದಕ ದಾದಾಪೀರ್ ಜೈಮನ್ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದು ಇಲ್ಲಿದೆ.
ಕರ್ನಾಟಕ ಪೊಲೀಸ್ ಇಲಾಖೆ ತನ್ನ ‘ವಿಶೇಷ ಮೀಸಲು ಸಬ್ ಇನ್ಸ್ಪೆಕ್ಟರ್ ಹುದ್ದೆ’ಯಲ್ಲಿ ಟ್ರಾನ್ಸ್ ಜೆಂಡರ್ ಸಮುದಾಯದ ಜನರಿಗೆ ಮೀಸಲಾತಿ ಕಲ್ಪಿಸಿರುವುದು ಸ್ವಾಗತಾರ್ಹ ನಡೆಯಾಗಿದೆ. ಎಷ್ಟೋ ವಿಷಯಗಳಲ್ಲಿ ನಾವು ಪುಂಖಾನುಪುಂಖವಾಗಿ ಅವಕಾಶಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಅವಕಾಶಗಳ ಬಾಗಿಲನ್ನು ತೆರೆಯುವುದೇ ಇಲ್ಲ. ಆ ನಿಟ್ಟಿನಲ್ಲಿ ಈ ನಿರ್ಧಾರ ಟ್ರಾನ್ಸ್ ಸಮುದಾಯದ ಎಷ್ಟೋ ಪ್ರತಿಭಾವಂತರಿಗೆ ಅನುಕೂಲವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿಂದ ಹೊರಟು ಒಂದಿಷ್ಟು ಪ್ರಶ್ನೆಗಳಿವೆ. SRS (sex re-assignment surgery) ಆದವರು ಮಾತ್ರ ಟ್ರಾನ್ಸ್ ಜನರು ಎನ್ನುವ ಗ್ರಹಿಕೆಯಿದೆ. ಯಾವುದೇ ವ್ಯಕ್ತಿ ತನ್ನ ಸ್ವ ಇಚ್ಛೆಯಿಂದ ಟ್ರಾನ್ಸ್ ಎಂದು ಗುರುತಿಸಿಕೊಂಡರೆ ಮತ್ತು ಕೋರ್ಟ್ ಅಫಿಡವಿಟ್ ತಂದರೆ ಅವರನ್ನು ಅರ್ಜಿ ಹಾಕಲು ಅರ್ಹರನ್ನಾಗಿ ಪರಿಗಣಿಸುವುದೇ? ಟ್ರಾನ್ಸ್ ಸಮುದಾಯದವರು ಅರ್ಜಿ ಹಾಕಲು ಬೇಕಾಗಿರುವ ದಾಖಲೆಗಳು ಯಾವುವು?
ಹುದ್ದೆಗೆ ಆಯ್ಕೆಯಾದ ಟ್ರಾನ್ಸ್ ಸಬ್ ಇನ್ಸ್ಪೆಕ್ಟರರನ್ನು ಸಮತೆಯಿಂದ ನೋಡಲು ಉಳಿದ ಪೊಲೀಸ್ ಸಿಬ್ಬಂದಿಗಳಿಗೆ ಬೇಕಾದ ಸೆನ್ಸಿಟೈಜೇಶನ್ ಕಾರ್ಯಕ್ರಮಗಳನ್ನು ಕೂಡ ಇಲಾಖೆ ರೂಪಿಸಬೇಕು. ನಾನು ಈ ಪ್ರತಿಕ್ರಿಯೆ ಬರೆಯುವ ಮುಂಚೆ ಒಂದಿಬ್ಬರು ಟ್ರಾನ್ಸ್ ಸಮುದಾಯದ ಸಾಮಾಜಿಕ ಕಾರ್ಯಕರ್ತರ ಜೊತೆ ಮಾತನಾಡಿದೆ. ಅವರು ಹೇಳಿದ ಪ್ರಕಾರ ಪೊಲೀಸ್ ತರಬೇತಿಯ ಸಮಯದಲ್ಲಿ ಸೆನ್ಸಿಟೈಜೇಶನ್ ಕಾರ್ಯಕ್ರಮಗಳನ್ನು ಹೊರಗಿನ ಒತ್ತಡಗಳಿದ್ದಾಗ ಮಾತ್ರ ಎನ್ನುವಷ್ಟು ಕಡಿಮೆ ಪ್ರಮಾಣದಲ್ಲಿ ನಡೆಯುತ್ತವೆ ಎನ್ನುವ ಅಭಿಪ್ರಾಯ ಬಂದಿತು.
ಇನ್ನೊಂದು ಮುಖ್ಯ ವಿಷಯ, ಟ್ರಾನ್ಸ್ ಸಮುದಾಯದ ಅದೆಷ್ಟೋ ಜನಕ್ಕೆ ಭಿಕ್ಷಾಟನೆ ಮತ್ತು ಸೆಕ್ಸ್ ವರ್ಕ್ ಕೆಲಸ ಅನಿವಾರ್ಯವಾಗಿರುವ ಹೊತ್ತಿನಲ್ಲಿ, ಅವರಿಗೆ ಸಿಗಬೇಕಾದ ಮೂಲ ಸೌಕರ್ಯಗಳೇ ಸಿಗದೆ ಇರುವ ಹೊತ್ತಿನಲ್ಲಿ, ಲೈಂಗಿಕ ಅಸ್ಮಿತೆಯ ಹುಡುಕಾಟದ ಕಾರಣದಿಂದ ಅವರ ಶಿಕ್ಷಣ ಅರ್ಧಕ್ಕೆ ಮೊಟಕುಗಳಿಸಿರುವ ಹೊತ್ತಿನಲ್ಲಿ ಹುದ್ದೆಯ ಅರ್ಹತಾ ಪರೀಕ್ಷೆಗೆ ಬೇಕಾದ ತರಬೇತಿಯನ್ನು ಉಚಿತವಾಗಿ ಕೊಡುವ ಸೌಲಭ್ಯವು ಕೂಡ ಸಿಗುವಂತಾಗಬೇಕು. ಅದು ಕಾರ್ಯರೂಪಕ್ಕೆ ಬಂದಾಗ ಹೆಚ್ಚು ಜನರು ಈ ಹುದ್ದೆ ಪಡೆಯುವ ಧೈರ್ಯ ಮಾಡುತ್ತಾರೆ ಮತ್ತು ಕನಸು ಕಟ್ಟುತ್ತಾರೆ. ಇಲ್ಲವೆಂದರೆ ಈ ಅವಕಾಶ ಹಾಳೆಯಲ್ಲಿ ಮಾತ್ರ ಉಳಿದುಬಿಡುತ್ತದೆ. ಪೊಲೀಸ್ ಇಲಾಖೆಯಲ್ಲಿ ಟ್ರಾನ್ಸ್ ಸಮುದಾಯದವರ ಪ್ರಾತಿನಿಧ್ಯತೆ ಹಲವು ರೀತಿಯಲ್ಲಿ ಉಪಯೋಗವಾಗಲಿದೆ. ಸಮಾಜ ಸಮುದಾಯವನ್ನು ಹಾಗೂ ಸಮಾಜವನ್ನು ಈ ಸಮುದಾಯ ನೋಡುವ ದೃಷ್ಟಿಯಲ್ಲಿಯೇ ಒಂದು ಸೂಕ್ಷ್ಮತೆ ಒದಗಿಬರುತ್ತದೆ. ಆ ಮಟ್ಟಿಗೆ ಇದೊಂದು ದಿಟ್ಟಹೆಜ್ಜೆಯಾಗಿದೆ.
*
ಈ ವಿಷಯಕ್ಕೆ ಸಂಬಂಧಿಸಿ ನೀವೂ ನಿಮ್ಮ ಪ್ರತಿಕ್ರಿಯಿಸಬಹುದು. ಪದಮಿತಿ 200-300. ನಿಮ್ಮ ಭಾವಚಿತ್ರವೂ ಇರಲಿ. email – tv9kannadadigital@gmail.com
ಇದನ್ನೂ ಓದಿ : ಇನ್ನು ಮುಂದೆ ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರೂ ಕೆಲಸ ಮಾಡಬಹುದು; ಕೆಎಸ್‌ಪಿಯಿಂದ ಅರ್ಜಿ ಸಲ್ಲಿಸಲು ಆಹ್ವಾನ
Published On - 10:01 am, Wed, 22 December 21