ವಿಜಯಪುರ: ಇಟ್ಟಲ್ಲಿಯೇ ಸುಟ್ಟು ಹೋದ ಓರ್ವ ವಿದ್ಯಾರ್ಥಿನಿಯ ಮೂರು ಹಾಲ್ಟಿಕೆಟ್! ವಾಮಚಾರ ಶಂಕೆ
ವಿದ್ಯಾರ್ಥಿನಿಯೋರ್ವಳ ಮೂರು ಹಾಲ್ ಟಿಕೆಟ್ಗಳು ಸುಟ್ಟು ಹೋದ ಘಟನೆ ವಿಜಯಪುರದ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ವಿದ್ಯಾರ್ಥಿನಿ ಗೊಂದಲಕ್ಕೊಳಗಾಗಿದ್ದು, ಮೇಲ್ವಿಚಾರಕರು ಆಶ್ಚರ್ಯ ಹಾಗೂ ಸಂಶಯಕ್ಕೊಳಗಾಗಿದ್ದಾರೆ.
ವಿಜಯಪುರ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂದಿನಿಂದ ಅಂತಿಮ ಪರೀಕ್ಷೆಗಳು (karnataka Second PUC Exams 2023) ಆರಂಭವಾಗಿದೆ. ಮೊದಲ ದಿನವೇ ವಿಜಯಪುರ (Vijayapuara) ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿನಿಯೋರ್ವಳ ಮೂರು ಹಾಲ್ ಟಿಕೆಟ್ಗಳು ಸುಟ್ಟು ಹೋದ ಘಟನೆ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ವಿದ್ಯಾರ್ಥಿನಿ ಗೊಂದಲಕ್ಕೊಳಗಾಗಿದ್ದು, ಮೇಲ್ವಿಚಾರಕರು ಆಶ್ಚರ್ಯ ಹಾಗೂ ಸಂಶಯಕ್ಕೊಳಗಾಗಿದ್ದಾರೆ. ಮಾತ್ರವಲ್ಲದೆ ವಿದ್ಯಾರ್ಥಿನಿ ಭವಿಷ್ಯದ ಮೇಲೆ ವಾಮಾಚಾರ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ. ಪವಿತ್ರಾ ಪುಂಡಲೀಕ ಗುಡ್ಡರ್ (18) ವರ್ಷದ ಹಿಂದೆ ತಂದೆ ತಾಯಿಯನ್ನು ಕಳೆದುಕೊಂಡಿದ್ದು, ಗೊಳಸಂಗಿಯ ಬಿ ಎಸ್ ಪವಾರ್ ಪಿಯು ಕಾಲೇಜಿನಲ್ಲಿ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ. ಅದರಂತೆ ಪವಿತ್ರಾಗೆ ಮುಂಚಿತವಾಗಿ ಹಾಲ್ಟಿಕೆಟ್ ನೀಡಲಾಗಿತ್ತು. ಆದರೆ ಈ ಹಾಲ್ಟಿಕೆಟ್ ಇಟ್ಟಲ್ಲಿಯೇ ಸುಟ್ಟು ಭಸ್ಮವಾಗಿದ್ದು, ಅಚ್ಚರಿಗೆ ಕಾರಣವಾಗಿದೆ.
ಘಟನೆಯಿಂದ ವಿಚಲಿತಳಾದ ಪವಿತ್ರಾ ನಡೆದ ಘಟನೆಯನ್ನು ವಿವರಿಸಿ ಕಾಲೇಜು ಪ್ರಾಂಶುಪಾಲರಿಗೆ ಮನವಿ ಮಾಡಿಕೊಂಡು ಎರಡನೇ ಹಾಲ್ ಟಿಕೇಟ್ ಪಡೆದಿದ್ದಾಳೆ. ಈ ಪ್ರವೇಶ ಪತ್ರವೂ ಮನೆಯಲ್ಲಿ ಹರಿದು ಚೂರು ಚೂರಾಗಿ ಬಿದ್ದಿದೆ. ವಿಧಿಯಿಲ್ಲದೆ ಮತ್ತೆ ಪ್ರಾಂಶುಪಾಲರ ಕಚೇರಿಗೆ ತೆರಳಿದ ಪವಿತ್ರಾ ಮೂರನೇ ಪ್ರವೇಶ ಪತ್ರ ಪಡೆದುಕೊಂಡು ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ತೆರಳಿದ್ದಾಳೆ. ಅಚ್ಚರಿ ಎಂಬಂತೆ ಪರೀಕ್ಷಾ ಕೇಂದ್ರದಲ್ಲೇ ಮೂರನೇ ಹಾಲ್ಟಿಕೆಟ್ ಹರಿದುಬಿದ್ದಿದೆ. ವಿದ್ಯಾರ್ಥಿನಿ ಪವಿತ್ರಾ ಸಮಸ್ಯೆ ಅರಿತ ಪರೀಕ್ಷಾ ಮೇಲ್ವಿಚಾರಕರು, ಮೂರು ಹಾಲ್ ಟಿಕೇಟ್ ಹಾಳಾದ ಬಳಿಕವೂ ಕನ್ನಡ ವಿಷಯ ಪರೀಕ್ಷೆ ಬರೆಯಲು ಅನುಮತಿ ನೀಡಿದ್ದಾರೆ. ಒಂದಲ್ಲ, ಎರಡಲ್ಲ, ಮೂರು ಹಾಲ್ಟಿಕೆಟ್ಗಳಿಗೆ ಹಾನಿಯಾಗಿರುವುದು ಆಶ್ಚರ್ಯ ಹಾಗೂ ಸಂಶಯಕ್ಕೆ ಕಾರಣವಾಗಿದ್ದು, ವಾಮಾಚಾರವಾಗಿರುವ ಶಂಕೆಯೂ ವ್ಯಕ್ತವಾಗಿದೆ. ಮಾತ್ರವಲ್ಲದೆ ಘಟನೆಯಿಂದಾಗಿ ಪವಿತ್ರಾ ಗೊಂದಲಕ್ಕೂ ಈಡಾಗಿದ್ದಾಳೆ.
ಇದನ್ನೂ ಓದಿ: ನಿನ್ನೆ ಹಾಲ್ ಟಿಕೆಟ್ ನೀಡಿದ ಕಾಲೇಜ್ ಆಡಳಿತ ಮಂಡಳಿ, ಇಂದು ಪರೀಕ್ಷೆ ಬರೆಯಲು ಬಂದ 48 ವಿದ್ಯಾರ್ಥಿಗಳನ್ನ ಹೊರ ಹಾಕಿದ ಸಿಬ್ಬಂದಿ
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿದೆ. ರಾಜ್ಯದ 1,109 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಒಟ್ಟು 5,716 ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಈ ಬಾರಿ 7,26,195 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದು, ಕಲಾ ವಿಭಾಗದಲ್ಲಿ 2,34,815 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 2,47,260 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 2,44,120 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾಗುವ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವಂತಿಲ್ಲ. ಕಳೆದ ವರ್ಷದ ನಿಯಮ ಈ ಬಾರಿಯೂ ಮುಂದುವರಿಯಲಿದ್ದು, ಒಂದೊಮ್ಮೆ ಹಿಜಾಬ್ ಧರಿಸಿ ಬಂದರೆ ಅಂತಹ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ.
ಅಲ್ಲದೆ, ಪರೀಕ್ಷೆಗೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಸ್ತ್, ಸಿಸಿ ಕ್ಯಾಮೆರಾ ಕಣ್ಗಾವಲು, ಪರೀಕ್ಷಾ ಕೇಂದ್ರದ ಸುತ್ತಲಿನ ಜೆರಾಕ್ಸ್ ಕೇಂದ್ರಗಳು ಪರೀಕ್ಷೆ ಅವಧಿಯಲ್ಲಿ ಬಂದ್, ಸೈಬರ್ ಸೆಂಟರ್, ಟ್ಯೂಷನ್ ಕೇಂದ್ರಗಳು, ಕಂಪ್ಯೂಟರ್, ಗೇಮ್ಸ್ ಕೇಂದ್ರಗಳ ಮೇಲೆ ವಿಶೇಷ ನಿಗಾ, ಈ ಹಿಂದೆ ಪರೀಕ್ಷಾ ಅಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಗಳು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗುತ್ತದೆ. ಹಿಂದಿನ ವರ್ಷಗಳಲ್ಲಿ ಪರೀಕ್ಷಾ ಅಕ್ರಮ ವರದಿಯಾಗಿರುವ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿನ ನಿಗಾ ಇಡಲಾಗಿದ್ದು, ಮೊಬೈಲ್‌ಫೋನ್, ಸ್ಮಾರ್ಟ್‌ವಾಚ್, ಇಯರ್‌ಫೋನ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ಸ್ ಸಾಧನಗಳ ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ಸಮಯ ನೋಡಿಕೊಳ್ಳಲು ಗೋಡೆ ಗಡಿಯಾರದ ವ್ಯವಸ್ಥೆ ಮಾಡಲಾಗಿದೆ.
ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ