Babaleshwar Election Result: ಬಬಲೇಶ್ವರ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಗೆ ಅನುಕಂಪದ ಕೈ ಹಿಡಿಯುತ್ತಾ?
babaleshwar Assembly Election Result 2023 Live Counting Updates: ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಎಂಬಿ ಪಾಟೀಲ್, ಬಿಜೆಪಿಯಿಂದ ವಿಜುಗೌಡ ಪಾಟೀಲ್ ಹಾಗೂ ಜೆಡಿಎಸ್ನಿಂದ ಬಸವರಾಜ ಹೊನವಾಡ ಕಣದಲ್ಲಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.
Babaleshwar Assembly Election Result 2023: ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಭದ್ರಕೋಟೆ ಎಂದು ಯಾವುದಾದರೂ ಕ್ಷೇತ್ರ ಪ್ರಸಿದ್ಧವಾಗಿದ್ದರೇ ಅದು ಬಬಲೇಶ್ವರ ವಿಧಾನಸಭಾ ಕ್ಷೇತ್ರ. ಆರಂಭದಲ್ಲಿ ತಿಕೋಟಾ ಹೆಸರಿನಿಂದ ಗುರುತಿಸಲಾಗುತ್ತಿದ್ದ ಈ ಕ್ಷೇತ್ರ ಸದ್ಯ ಬಬಲೇಶ್ವರ ವಿಧಾನಸಭಾ ಕ್ಷೇತ್ರವಾಗಿ ಬದಲಾಗಿದೆ. 2008ರಲ್ಲಿ ಮರು ವಿಂಗಡಣೆ ಆದ ಬಳಿಕ ಬಬಲೇಶ್ವರ ಎಂದು ನಾಮಕರಣಗೊಂಡು ತಿಕೋಟದೊಳಗೆ ವಿಲೀನವಾಯಿತು. ಆಗ ಬಸವನಬಾಗೇವಾಡಿ ಕ್ಷೇತ್ರದಲ್ಲಿದ್ದ ಮಮದಾಪುರ ಹೋಬಳಿಯ 28 ಹಳ್ಳಿಗಳು ಬಬಲೇಶ್ವರ ಕ್ಷೇತ್ರಕ್ಕೆ ಸೇರ್ಪಡೆಯಾದರೆ, ತಿಕೋಟಾ ವ್ಯಾಪ್ತಿಯಲ್ಲಿದ್ದ ಕೆಲ ಹಳ್ಳಿಗಳು ನಾಗಠಾಣ (ಹಳೆಯ ಬಳ್ಳೊಳ್ಳಿ) ಕ್ಷೇತ್ರದ ಪಾಲಾದವು.
ದ್ರಾಕ್ಷಿ ಬೆಳೆಯಿಂದ ಪ್ರಸಿದ್ಧವಾಗಿರುವ ಈ ಕ್ಷೇತ್ರ ಒಂದು ಕರೆ ಮಹಾರಾಷ್ಟ್ರ, ಇನ್ನೊಂದು ಕರೆ ಬೆಳಗಾವಿ ಮತ್ತೊಂದು ಕಡೆ ಬಾಗಲಕೋಟೆ ಜಿಲ್ಲೆಯಲ್ಲಿ ಆವರಿಸಿದೆ. ತನ್ನದೇ ಪರಂಪರೆ ಹೊಂದಿರುವ ಬಬಲೇಶ್ವರದ ಗುರುಪಾದೇಶ್ವರ ಬೃಹನ್ಮಠ. ಅರಕೇರಿ ಅಮೋಘ ಸಿದ್ಧೇಶ್ವರ, ಕಂಬಾಗಿ ಮತ್ತು ಹಲಗಣಿ ಗ್ರಾಮದ ಹಣಮಂತ ದೇವಾಲಯಗಳು ಹಾಗೂ ಜೈನಪುರ ಗ್ರಾಮದ ದೇಸಗತಿ ಮನೆತನ ಈ ಕ್ಷೇತ್ರದಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು.
ಧರ್ಮ ಪರಂಪರೆ ಮಾತ್ರವಲ್ಲದೆ ಸಾರವಾಡ ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಹೆಸರುವಾಸಿಯಾಗಿದೆ. ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಇದೇ ಕ್ಷೇತ್ರದಲ್ಲಿದೆ. ಈ ಕ್ಷೇತ್ರದಲ್ಲಿ ಬೆಳೆಯುವ ದ್ರಾಕ್ಷಿ ವಿಶ್ವವಿಖ್ಯಾತಿ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಒಟ್ಟಾರೆ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವಿಶಿಷ್ಟ ಭೌಗೋಳಿಕ ನೆಲೆಯನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ.
ಜಾತಿವಾರು ಪ್ರಾಬಲ್ಯ
ಬಬಲೇಶ್ವರ ಕ್ಷೇತ್ರದಲ್ಲಿ ಚುನಾವಣಾ ಆಯೋಗ ನೀಡಿರುವ ಇತ್ತೀಚಿನ ಮಾಹಿತಿಯಂತೆ 2,10,884 ಮತದಾರರಿದ್ದಾರೆ. ಜಾತಿವಾರು ಗಣನೆಗೆ ತೆಗೆದುಕೊಂಡರೆ ಪಂಚಮಸಾಲಿ 45 ಸಾವಿರ, ಕುರುಬ 32 ಸಾವಿರ, ಎಸ್ಸಿ ಎಸ್ಟಿ ಸಮುದಾಯದ 33 ಸಾವಿರ, ಗಾಣಿಗರು 22 ಸಾವಿರ, ಮುಸ್ಲಿಮರು 23 ಸಾವಿರ ಮತದಾರರಿದ್ದಾರೆ.
ರಾಜಕೀಯ ಚಿತ್ರಣ
ಇನ್ನು ಈ ಕ್ಷೇತ್ರದ ರಾಜಕೀಯ ಹಿನ್ನಲೆ ನೋಡಿದರೆ ಇಲ್ಲಿಯವರೆಗೆ ಉಪಚುನಾವಣೆ ಸೇರಿದಂತೆ ಒಟ್ಟು 15 ಚುನಾವಣೆಯಲ್ಲಿ 11 ಬಾರಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದೆ. ಇನ್ನುಳಿದಂತೆ ಜನತಾದಳ, ಜಿಎನ್ಪಿ, ಎನ್ಸಿಓ, ಬಿಜೆಪಿ ತಲಾ ಒಂದೊಂದು ಬಾರಿ ಗೆದ್ದಿವೆ. ಈ ಕ್ಷೇತ್ರದ ಪ್ರಥಮ ಶಾಸಕರಾಗಿದ್ದ ಚೆನ್ನಬಸಪ್ಪ ಅಂಬಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು ಮುಂದೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಕರ್ನಾಟಕದ ಸರ್ಧಾರ್ ಪಟೇಲ್ ಎಂಬ ಕೀರ್ತಿಗೆ ಭಾಜನರಾಗಿದ್ದರು. ಇನ್ನು ಎಂಬಿ ಪಾಟೀಲ್ ಅವರ ತಂದೆ ಬಿಎಂ ಪಾಟೀಲ್ ಅವರು 3 ಬಾರಿ ಈ ಕ್ಷೇತ್ರದ ಜನಪ್ರತಿನಿಧಿಯಾಗಿದ್ದರು. ಒಟ್ಟಾರೆ ಈ ಕ್ಷೇತ್ರ ಎಂಬಿ ಪಾಟೀಲರ ಕುಟುಂಬಕ್ಕೆ ಹೆಚ್ಚು ಬಾರಿ ಅವಕಾಶ ನೀಡಿರುವುದು ವಿಶೇಷ. ಜೊತೆಗೆ ಎಂಬಿ ಪಾಟೀಲ್ ಲೋಕಸಭೆಗೂ ಸ್ಪರ್ಧಿಸಿ ಗೆದ್ದಿರುವುದು ಇನ್ನೊಂದು ವಿಶೇಷ.
1962ರಲ್ಲಿ ತಾಳಿಕೋಟೆ(ಇಂದಿನ ದೇವರಹಿಪ್ಪರಗಿ) ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿ ದಾಖಲೆ ಬರೆದಿದ್ದ ಗದಿಗೆಪ್ಪಗೌಡ ಪಾಟೀಲರು 1972ರಲ್ಲಿ ತಿಕೋಟಾ(ಈಗಿನ ಬಬಲೇಶ್ವರ) ಕ್ಷೇತ್ರದಿಂದಲೂ ಗೆದ್ದು ಬಂದಿದ್ದರು. 1967ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಬಿಎಂ ಪಾಟೀಲರು 1983ರಲ್ಲಿ ಅಂದಿನ ತಿಕೋಟಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.
ಇನ್ನು ಶಿವಾನಂದ ಪಾಟೀಲ್ ಅವರು ಜೆಡಿಎಸ್ ಹಾಗೂ ಬಿಜೆಪಿಯಿಂದ ಈ ಕ್ಷೇತ್ರವನ್ನು ಪ್ರತಿನಿಧಿ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ನಂತರ ಈ ಕ್ಷೇತ್ರವನ್ನು ಅವರ ಸಹೋದರ ವಿಜುಗೌಡ ಪಾಟೀಲ್ ನಾಲ್ಕು ಬಾರಿ ಎಂಬಿ ಪಾಟೀಲರಿಗೆ ಮುಖಾಮುಖಿಯಾಗಿದ್ದಾರೆ. 2004ರಲ್ಲಿ ಹಾಗೂ 2008ರಲ್ಲಿ ಕ್ಷೇತ್ರದ ಮರುವಿಂಗಡನೆಯ ವೇಳೆ ಬದಲಾದ ಬಬಲೇಶ್ವರ ವಿಧಾನಸಭೆಯಿಂದ, 2013 ಹಾಗೂ 2018ರಿಂದ ಸತತ ಮೂರು ಬಾರಿ ಎಂಬಿ ಪಾಟೀಲ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಇದೀಗ ಮತ್ತೊಮ್ಮೆ ಕಾಂಗ್ರೆಸ್ನಿಂದ ಹಾಲಿ ಶಾಸಕ ಎಂಬಿ ಪಾಟೀಲ್ ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ ವಿಜುಗೌಡ ಪಾಟೀಲ್ ಸ್ಪರ್ಧೆಗಿಳಿದಿದ್ದಾರೆ. ಇನ್ನು ಜೆಡಿಎಸ್ನಿಂದ ಬಸವರಾಜ ಹೊನವಾಡ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಇದ್ದು, ಸತತವಾಗಿ ಸೋಲುತ್ತಾ ಬಂದಿರುವ ಬಿಜೆಪಿ ವಿಜುಗೌಡ ಪಾಟೀಲ್ ಅವರಿಗೆ ಅನುಕಂಪದ ಕೈ ಹಿಡಿಯುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.