Karnataka Assembly Election 2023: ಬಿಜೆಪಿಗೆ ಬಂಡಾಯದ ಬಿಸಿ, ಕಿತ್ತೂರು ಕರ್ನಾಟಕದಲ್ಲಿ 35-40 ಸೀಟ್ ಟಾರ್ಗೆಟ್ಗೆ ಬೀಳುತ್ತಾ ಬ್ರೇಕ್..?
2018 ರ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ 30 ಕ್ಷೇತ್ರಗಳಲ್ಲಿ ಅಧಿಕಾರ ಹಿಡಿದಿತ್ತು. ಈ ಬಾರಿ ಬಿಜೆಪಿ 35 ರಿಂದ 40 ಕ್ಷೇತ್ರಗಳಲ್ಲಿ ಬಾವುಟ ನಡೆಲು ಸಜ್ಜಾಗಿದೆ. ಆದರೆ ಈ ಟಾರ್ಗೆಟ್ಗೆ ಬಂಡಾಯ ಅಭ್ಯರ್ಥಿಗಳು ಮುಳುವಾಗುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಹುಬ್ಬಳ್ಳಿ: ಚುನಾವಣೆ ಸಂಬಂಧ ಬಿಜೆಪಿ (BJP) ಟಿಕೆಟ್ ಘೋಷಣೆ ಮಾಡಿದ್ದು, ಎರಡೂ ಪಟ್ಟಿಯಲ್ಲಿ ಕೆಲವು ಪ್ರಮುಖ ಟಿಕೆಟ್ ಆಕಾಂಕ್ಷಿಗಳನ್ನು ಮತ್ತು ಹಾಲಿ ಶಾಸಕರನ್ನು ಕೈ ಬಿಟ್ಟಿದೆ. ಇದರಿಂದ ಮುಖಂಡರು ಪಕ್ಷದ ವಿರುದ್ಧ ಬಂಡಾಯವೆದ್ದಿದ್ದು, ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಪಕ್ಷೇತರವಾಗಿ ಮತ್ತು ಬೇರೆ ಪಕ್ಷಗಳಿಗೆ ಸೇರಿಕೊಂಡು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇನ್ನು ಬಿಜೆಪಿ ಪಾಲಿಗೆ ಉತ್ತರ ಕರ್ನಾಟಕ (North Karnataka), ವಿಶೇಷವಾಗಿ ಕಿತ್ತೂರು ಕರ್ನಾಟಕದ (Kitturu Karnataka) ಧಾರವಾಡ (Dharwad), ಬೆಳಗಾವಿ (Belagavi), ಹಾವೇರಿ (Haveri) ಭಾಗದ ಹಲವು ಕ್ಷೇತ್ರಗಳಲ್ಲಿ ಮುಖಂಡರು ಬಂಡಾಯವೆದ್ದಿದ್ದಾರೆ. ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಇಷ್ಟೊಂದು ದೊಡ್ಡ ಪ್ರಮಾಣದ ಬಂಡಾಯ ಎದುರಿಸುತ್ತಿದೆ. 2018 ರ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ 30 ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸಿತ್ತು. ಈ ಬಾರಿ 35 ರಿಂದ 40 ಕ್ಷೇತ್ರಗಳಲ್ಲಿ ಬಾವುಟ ನಡೆಲು ಸಜ್ಜಾಗಿದೆ.
ಈ ಗುರಿಯನ್ನು ತಲುಪಲು ಬಿಜೆಪಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ 3 ರಿಂದ 4 ದೊಡ್ಡ ರ್ಯಾಲಿಗಳನ್ನು ಆಯೋಜಿಸಿದೆ. ಕುಂದಗೋಳ, ಧಾರವಾಡ ಮತ್ತು ಹುಬ್ಬಳ್ಳಿ-ಧಾರವಾಡ ಪೂರ್ವ (ಎಸ್‌ಸಿ) ಮತ್ತು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಗಳಲ್ಲಿ ಬಂಡಾಯದ ಬಾವುಟ ಹಾರಾಡುತ್ತಿದ್ದು, ಇದರಿಂದ ಬಿಜೆಪಿಗೆ ಸಾಕಷ್ಟು ನಷ್ಟವಾಗಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಪೂರ್ವ (ಎಸ್‌ಸಿ) ಮೀಸಲು ಕ್ಷೇತ್ರದಲ್ಲಿ ಬಿಜೆಪಿ ತೊರೆದಿರುವ ಮಾಜಿ ಶಾಸಕ ವೀರಭದ್ರಪ್ಪ ಹಾಲಹರ್ವಿ ಈಗ ಜೆಡಿಎಸ್ನಿಂದ ಸ್ಪರ್ಧಿಸುತ್ತಿದ್ದಾರೆ. ಇನ್ನು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್ ಬೈ ಹೇಳಿದ್ದು, ಅವರ ಮುಂದಿನ ನಡೆ ಏನು ಎಂಬುವುದು ಕಾದು ನೋಡಬೇಕಿದೆ.
ಇದನ್ನೂ ಓದಿ: ಸಂಚಲನ ಮೂಡಿಸಿದ ಬಿಸಿ ಪಾಟೀಲ್ ಭೇಟಿ, ಹಾವೇರಿಯಲ್ಲಿ ಕಾಂಗ್ರೆಸ್‍ಗೆ ರಿವರ್ಸ್ ಆಪರೇಷನ್ ಭೀತಿ
ಟಿಕೆಟ್ ಕೈ ತಪ್ಪಿರುವ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ್ ಪಕ್ಷೇತರವಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಬಿಜೆಪಿಯ ಹಿರಿಯ ಪದಾಧಿಕಾರಿ ತವನಪ್ಪ ಅಷ್ಟಗಿ ಪಕ್ಷ ತೊರೆದು ಧಾರವಾಡ ಗ್ರಾಮಾಂತರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಅತ್ತ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಸಿ.ಎಂ.ನಿಂಬಣ್ಣರಿಗೆ ಟಿಕೆಟ್ ಅವರಿಗೆ ನಿರಾಕರಿಸಲಾಗಿದ್ದು, ಇತ್ತೀಚೆಗೆ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ ನಾಗರಾಜ್ ಛಬ್ಬಿ ಅವರಿಗೆ ಟಿಕೆಟ್ ಸಿಕ್ಕಿದೆ. ಆದರೆ, ನಿಂಬಣ್ಣನವರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಛಬ್ಬಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.
ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದಲ್ಲಿ ಹಾಲಿ ಶಾಸಕ ರಾಮಣ್ಣ ಲಮಾಣಿ ಅವರಿಗೆ ಟಿಕೆಟ್ ಸಿಕಿಲ್ಲ. ಇದರಿಂದ ಅವರು ಜೆಡಿಎಸ್ ಮೂಲಕ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವ ನಿರೀಕ್ಷೆಯಿದ್ದು, ಈ ಸಂಬಂಧ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದ ಹಾಲಿ ಶಾಸಕ ಆರ್.ಶಂಕರ್ 2018ರ ಚುನಾವಣೆಯಲ್ಲಿ ಕೆಪಿಜೆಪಿಯಿಂದ ಗೆದ್ದು ಬಿಜೆಪಿ ಸೇರಿದ್ದರು. ಆರ್.ಶಂಕರ್ ಅವರಿಗೂ ಕೂಡ ಟಿಕೆಟ್ ಕೈ ತಪ್ಪಿದೆ. ಈ ಹಿನ್ನೆಲೆ ಅವರು ಏಪ್ರಿಲ್ 17 ರಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ಮತ್ತೊಬ್ಬ ಬಿಜೆಪಿ ಟಿಕೆಟ್ ಆಕಾಂಕ್ಷಿ ಸಂತೋಷ್ ಕುಮಾರ್ ಪಾಟೀಲ್ ಕೂಡ ರಾಣೆಬೆನ್ನೂರು ಕ್ಷೇತ್ರದಲ್ಲಿ ಬಂಡಾಯವೆದ್ದಿದ್ದು, ಪಕ್ಷೇತರವಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.
ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿಯ ಹಾಲಿ ಶಾಸಕ ನೆಹರು ಓಲೇಕಾರ ಅವರಿಗೆ ಟಿಕೆಟ್ ತಪ್ಪಿದ ಹಿನ್ನೆಲೆ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಇಂದು (ಏ.16) ಜೆಡಿಎಸ್ ಪಕ್ಷ ಸೇರಿ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ನೆಹರು ಓಲೇಕಾರ ಅವರು ಕೂಡ ಬಿಜೆಪಿಗೆ ರಾಜೀನಾಮೆ ನೀಡಿ ಸಿಎಂ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳನ್ನು ಎದುರಿಸುವುದು ಬಿಜೆಪಿಗೆ ದೊಡ್ಡ ಸವಾಲಾಗಿದೆ. ಟಿಕೆಟ್ ಸಿಗದೆ ಹತಾಶೆಗೊಂಡ ಮಾಜಿ ಎಂಎಲ್ಸಿ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ಗೆ ಸೇರಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ. ಸವದತ್ತಿ, ರಾಮದುರ್ಗ, ಬೆಳಗಾವಿ ಉತ್ತರ, ಕಿತ್ತೂರು ಮತ್ತು ಹುಕ್ಕೇರಿಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬಂಡಾಯ ಅಭ್ಯರ್ಥಿಗಳ ಬಿಸಿ ತಟ್ಟುವ ಸಾಧ್ಯತೆ ಇದೆ.
ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿ ಸೋಮನಗೌಡ(ಅಪ್ಪುಗೌಡ) ಪಾಟೀಲ್ ಮನಗೂಳಿ ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಇನ್ನು ಉತ್ತರ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬಂಡಾಯ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಬಿಜೆಪಿ ಪಾಲಿಗೆ ಶಾಪವಾಗಿ ಪರಿಣಮಿಸುವ ಸಾಧ್ಯತೆ ಇದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:40 am, Sun, 16 April 23