ಲೋಕಸಭೆ ಚುನಾವಣೆಗೆ (Lok Sabha Election) ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಸನ್ನದ್ಧವಾಗಿವೆ. ಚುನಾವಣಾ ದಿನಾಂಕಗಳು ಕೂಡ ಪ್ರಕಟಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಮೈತ್ರಿಕೂಟ 400 ಸೀಟುಗಳ ಗುರಿ ಹಾಕಿಕೊಂಡಿದೆ. ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸಲು ಹವಣಿಸುತ್ತಿದೆ. ಆದಾಗ್ಯೂ, ಅಧಿಕಾರ ಯಾರಿಗೆ ನೀಡಬೇಕೆಂಬ ಅಂತಿಮ ತೀರ್ಮಾನ ಜನರದ್ದೇ ಆಗಿದೆ. ಹಾಗಾಗಿ, ಸಾರ್ವಜನಿಕರು ಯಾವ ಪಕ್ಷದ ಮೇಲೆ ಭರವಸೆ ಇಟ್ಟಿದ್ದಾರೆ ಎಂಬ ಕುರಿತು ‘ಟಿವಿ9’ ಹಾಗೂ ಪೋಲ್ಸ್ಟ್ರಾಟ್ (Polstrat) ಚುನಾವಣಾ ಪೂರ್ವ ಸಮೀಕ್ಷೆ (Tv9 Opinion Poll) ನಡೆಸಿದೆ. ಅದರ ವಿವರ ಇಲ್ಲಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 383 ಸ್ಥಾನ ಗಳಿಸಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು 106 ಸ್ಥಾನ ಗಳಿಸಲಿವೆ. ಉಳಿದಂತೆ ಇತರ ಪಕ್ಷಗಳು ಹಾಗೂ ಪಕ್ಷೇತರರು 54 ಸ್ಥಾನ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಸಮೀಕ್ಷಾ ವರದಿ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಬಹುದು ಎಂದು ಹೇಳಲಾಗುದೆ. ಸಮೀಕ್ಷೆ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯದ 80 ಸ್ಥಾನಗಳಲ್ಲಿ 73 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಆದರೆ ಇಂಡಿಯಾ ಮೈತ್ರಿ ಹೆಚ್ಚು ಪ್ರಭಾವ ಬೀರುತ್ತಿಲ್ಲ ಮತ್ತು ಅದು ಕೇವಲ 7 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು 6 ಸ್ಥಾನಗಳನ್ನು ಪಡೆಯಬಹುದಾದರೆ ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. 73ರಲ್ಲಿ 70 ಸ್ಥಾನಗಳು ಬಿಜೆಪಿಗೆ ಬರಬಹುದು.
ಇದನ್ನೂ ಓದಿ: ಲೋಕಸಭೆ ಚುನಾವಣೆ ಸಮೀಕ್ಷೆ, ಕರ್ನಾಟಕದಲ್ಲಿ ಎನ್ಡಿಎಗೆ ಬಲ
ಸಮೀಕ್ಷೆಗಳ ಪ್ರಕಾರ, ಬಿಹಾರದಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಲಿದೆ. ರಾಜ್ಯದ 40 ಲೋಕಸಭಾ ಸ್ಥಾನಗಳ ಪೈಕಿ ಎನ್‌ಡಿಎ 38 ಸ್ಥಾನಗಳನ್ನು ಗೆಲ್ಲಬಹುದು. ಆದರೆ ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಗೆಲ್ಲಬಹುದು. ಬಿಹಾರದ 40 ಸ್ಥಾನಗಳಲ್ಲಿ ಬಿಜೆಪಿ 17 ಮತ್ತು ಜನತಾ ದಳ ಯುನೈಟೆಡ್ 15 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಲೋಕ ಜನಶಕ್ತಿ ಪಕ್ಷ 5 ಸ್ಥಾನಗಳನ್ನು ಪಡೆದರೆ ಜಿತನ್ ರಾಮ್ ಮಾಂಝಿ ಅವರ ಪಕ್ಷ ಎಚ್ಎಎಂ ಒಂದು ಸ್ಥಾನವನ್ನು ಪಡೆಯಬಹುದು.
ಆದರೆ ಇಂಡಿಯಾ ಮೈತ್ರಿಕೂಟ ಕೇವಲ 2 ಸ್ಥಾನಗಳನ್ನು ಪಡೆಯಬಹುದು. ಲಾಲು ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳಕ್ಕೆ ದೊಡ್ಡ ಹೊಡೆತ ಬೀಳಲಿದ್ದು, ಇಲ್ಲಿ ಖಾತೆ ತೆರೆಯುವ ಲಕ್ಷಣ ಕಾಣುತ್ತಿಲ್ಲ, 2 ಸ್ಥಾನಗಳು ಕಾಂಗ್ರೆಸ್ ಪಾಲಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭೆ ಚುನಾವಣೆ? ನಿಮ್ಮ ಕ್ಷೇತ್ರದಲ್ಲಿ ಯಾವಾಗ ಮತದಾನ? ಇಲ್ಲಿದೆ ನೋಡಿ
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು ಎಲ್ಲರನ್ನೂ ಅಚ್ಚರಿಗೊಳಿಸಿದೆ. ರಾಜ್ಯದ 13 ಸ್ಥಾನಗಳ ಪೈಕಿ ಆಮ್ ಆದ್ಮಿ ಪಕ್ಷ 11 ಸ್ಥಾನಗಳನ್ನು ಪಡೆಯಲಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ 2 ಸ್ಥಾನಗಳಿಗೆ ತೃಪ್ತಿಪಡಬೇಕಾಗಬಹುದು. ಇಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದ್ದು, ಖಾತೆ ತೆರೆಯಲೂ ಆಗುತ್ತಿಲ್ಲ. 2019 ರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಕೇವಲ ಒಂದು ಸ್ಥಾನವನ್ನು ಗೆದ್ದಿತ್ತು.
ಈ ಸಮೀಕ್ಷೆಯನ್ನು ‘ಟಿವಿ9’ ಭಿನ್ನವಾಗಿ ಮಾಡಿದೆ. ಸಮೀಕ್ಷೆಯಲ್ಲಿ 20 ಲಕ್ಷ ಮಂದಿಯ ಅಭಿಪ್ರಾಯ ಪಡೆಯಲಾಗಿದೆ. ಜನರ ಒಳನೋಟದ ಬಗ್ಗೆ ಪೋಲ್ಸ್ಟ್ರಾಟ್ ಮತ್ತು ಟಿವಿ9ನಿಂದ ಅತ್ಯಂತ ವಿಶ್ವಾಸಾರ್ಹವಾದ ಭರವಸೆಯ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ದೇಶದ ಎಲ್ಲಾ 543 ಸ್ಥಾನಗಳ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಒಂದು ಲೋಕಸಭಾ ಕ್ಷೇತ್ರದೊಳಗಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಂಕಿಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: 7 ಹಂತಗಳಲ್ಲಿ ಲೋಕಸಭೆ ಚುನಾವಣೆ;ಏಪ್ರಿಲ್ 19ರಂದು ಮೊದಲ ಹಂತದ ಮತದಾನ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:02 pm, Sat, 16 March 24