Assembly elections: ಮಧ್ಯಪ್ರದೇಶ, ಛತ್ತೀಸ್ಗಡ, ರಾಜಸ್ಥಾನದಲ್ಲಿ ಕಾಂಗ್ರೆಸ್ ಸೋಲಿಸಿದ ಜನಾದೇಶ ಸ್ವೀಕರಿಸುತ್ತೇವೆ: ರಾಹುಲ್ ಗಾಂಧಿ
Rahul Gandhi Reaction on Assembly Elections: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಡದಲ್ಲಿ ಕಾಂಗ್ರೆಸ್ ಅನ್ನು ಸೋಲಿಸಿದ ಜನರ ತೀರ್ಪನ್ನು ನಾವು ವಿನಮ್ರತೆಯಿಂದ ಸ್ವೀಕರಿಸುತ್ತೇವೆ ಎಂದು ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಿಸಿದ ಮತದಾರರಿಗೆ ರಾಹುಲ್ ಧನ್ಯವಾದ ಅರ್ಪಿಸಿದ್ದಾರೆ. ತೆಲಂಗಾಣವನ್ನು ಪ್ರಜಾ ಸಾಮ್ರಾಜ್ಯ ಮಾಡುವ ಭರವಸೆಯನ್ನು ತಮ್ಮ ಪಕ್ಷ ಈಡೇರಿಸುತ್ತದೆ ಎಂದು ಅವರು ಹೇಳಿದ್ದಾರೆ.

ನವದೆಹಲಿ, ಡಿಸೆಂಬರ್ 3: ಇಂದು ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ (Assembly Elections 2023) ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷ ತೆಲಂಗಾಣದಲ್ಲಿ ಜಯಭೇರಿ ಭಾರಿಸಿದೆ. ಉಳಿದ ಮೂರು ರಾಜ್ಯಗಳಲ್ಲಿ ನಿರಾಸೆ ಅನುಭವಿಸಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಡದಲ್ಲಿ ಕಾಂಗ್ರೆಸ್ ಸೋಲನುಭವಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಜನತಾ ತೀರ್ಪನ್ನು ವಿನಮ್ರತೆಯಿಂದ ಸ್ವೀಕರಿಸುವುದಾಗಿ ಹೇಳಿದ್ದಾರೆ. ಆದರೆ, ಪಕ್ಷದ ತಾತ್ವಿಕ ಹೋರಾಟ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
‘ಮಧ್ಯಪ್ರದೇಶ, ಛತ್ತೀಸ್ಗಡ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಜನಾದೇಶವನ್ನು ನಾವು ಸ್ವೀಕರಿಸುತ್ತೇವೆ. ಆದರೆ, ವೈಚಾರಿಕ ಸಮರ ಮುಂದುವರಿಯುತ್ತದೆ,’ ಎಂದು ಕಾಂಗ್ರೆಸ್ನ ಸಂಸದರೂ ಆಗಿರುವ ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.
ಇನ್ನು, ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವನ್ನು ಸ್ವಾಗತಿಸಿರುವ ಅವರು ಅಲ್ಲಿನ ಜನತೆಗೆ ಧನ್ಯವಾದ ಹೇಳಿದ್ದಾರೆ.
‘ಪ್ರಜಾಲು ತೆಲಂಗಾಣ ನಿರ್ಮಿಸುವ ನಮ್ಮ ಭರವಸೆಯನ್ನು ಖಂಡಿತವಾಗಿ ಈಡೇರಿಸುತ್ತೇವೆ,’ ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
मध्य प्रदेश, छत्तीसगढ़ और राजस्थान का जनादेश हम विनम्रतापूर्वक स्वीकार करते हैं – विचारधारा की लड़ाई जारी रहेगी।
तेलंगाना के लोगों को मेरा बहुत धन्यवाद – प्रजालु तेलंगाना बनाने का वादा हम ज़रूर पूरा करेंगे।
सभी कार्यकर्ताओं को उनकी मेहनत और समर्थन के लिए दिल से शुक्रिया।
— Rahul Gandhi (@RahulGandhi) December 3, 2023
ಇದನ್ನೂ ಓದಿ: ರಾಜಸ್ಥಾನ, ಛತ್ತೀಸ್ಗಢದಲ್ಲಿ ‘ಕೈ’ಜಾರಿಹೋಗಲಿದೆ ಆಡಳಿತ: ರಾಹುಲ್ ಗಾಂಧಿ ಹಳೆಯ ವಿಡಿಯೋ ವೈರಲ್
ತೆಲಂಗಾಣದಲ್ಲಿ ಕಾಂಗ್ರೆಸ್ ಬೇರೆ ರೀತಿಯ ಪ್ರಚಾರ ತಂತ್ರ ರೂಪಿಸಿತ್ತು. ಜಮೀನುದಾರರಿಗೆ ಕೆಲಸ ಮಾಡುವ ಪಕ್ಷಗಳು ಮತ್ತು ಪ್ರಜೆಗಳಿಗೆ ಕೆಲಸ ಮಾಡುವ ಪಕ್ಷಗಳ ನಡುವಿನ ಯುದ್ಧ ಎಂಬಂತೆ ಕಾಂಗ್ರೆಸ್ ಬಿಂಬಿಸಿತ್ತು. ತೆಲಂಗಾಣವನ್ನು ನಿಜವಾದ ಪ್ರಜಾ ಸಾಮ್ರಾಜ್ಯ ಮಾಡುವುದಾಗಿ ಕಾಂಗ್ರೆಸ್ ಹೇಳಿತ್ತು. ಭಾರತ್ ಜೋಡೋ ಯಾತ್ರೆ ತೆಲಂಗಾಣದಲ್ಲಿ ಕಾಂಗ್ರೆಸ್ಗೆ ಒಳ್ಳೆಯ ಪುಷ್ಟಿ ಕೊಟ್ಟಿತು ಎಂದು ಆ ಪಕ್ಷದ ಹಲವು ನಾಯಕರು ಹೇಳುತ್ತಾರೆ.
ತೆಲಂಗಾಣದ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ರೇವಂತ್ ರೆಡ್ಡಿ ಸಿಎಂ ರೇಸ್ನಲ್ಲಿದ್ದಾರೆ. ಆದರೆ, ಕಾಮರೆಡ್ಡಿ ಕ್ಷೇತ್ರದಲ್ಲಿ ರೇವಂತ್ ರೆಡ್ಡಿ ಸೋಲನಭವಿಸುತ್ತಿರುವುದು ಗಮನಾರ್ಹ.
ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ