Political Analysis: ಉತ್ತರ ಪ್ರದೇಶದಲ್ಲೀಗ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯದ್ದೇ ಮಾತು, ಇದರ ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿಗೆ ಸಾಧ್ಯವಾಗುವುದೇ?
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟನೆಗೆ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ ಯೋಜನೆಯ ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿಗೆ ಸಾಧ್ಯವಾಗಲಿದೆಯೇ?
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟನೆಗೆ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಕಳೆದ 3 ವರ್ಷಗಳ ಅವಧಿಯಲ್ಲಿ ವಿಸ್ತರಣಾ ಯೋಜನೆ ಶೇ 80ರಷ್ಟು ಮುಕ್ತಾಯವಾಗಿದೆ. ಸುಮಾರು 30 ತಿಂಗಳ ಹಿಂದೆ ಕಾಶಿ ಕಾರಿಡಾರ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ₹ 800 ಕೋಟಿ ಅಂದಾದುವೆಚ್ಚದ ಈ ಯೋಜನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಅಡಿಗಲ್ಲು ಹಾಕಿದ್ದರು. ಈ ಯೋಜನೆಯು ಪೂರ್ಣಗೊಂಡ ನಂತರ 1 ಲಕ್ಷಕ್ಕೂ ಹೆಚ್ಚು ಭಕ್ತರಿಗೆ ದೇಗುಲ ಆವರಣದಲ್ಲಿ ನೆರೆಯುವ ಅವಕಾಶ ಸಿಗಲಿದೆ ಎಂದು ದೇಗುಲ ಮಂಡಳಿ ಹೇಳಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶಿತ ವಾರಣಾಸಿ ಭೇಟಿಯ ರೂಪುರೇಷೆ ಅಂತಿಮಗೊಂಡಿದೆ. ಡಿಸೆಂಬರ್ 13-14ರಂದು ನರೇಂದ್ರ ಮೋದಿ ತಮ್ಮ ಸ್ವಕ್ಷೇತ್ರವೂ ಆಗಿರುವ ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಇದೇ ಸಂದರ್ಭ ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟಿಸಲಿದ್ದಾರೆ. ಸುಮಾರು ಒಂದು ತಿಂಗಳ ಅವಧಿಯ ಇತರ ಕಾರ್ಯಕ್ರಮಗಳ ಪಟ್ಟಿಯೂ ಸಿದ್ಧವಾಗಿವೆ. ಈ ಯೋಜನೆಯ ರಾಜಕೀಯ ಲಾಭ ಪಡೆದುಕೊಳ್ಳುವಲ್ಲಿ ಬಿಜೆಪಿ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ? ಕಾಶಿ ನಗರದ ಇತ್ತೀಚಿನ ವಿದ್ಯಮಾನಗಳು ಮತ್ತು ಅದರ ಸಂಭಾವ್ಯ ರಾಜಕೀಯ ಪರಿಣಾಮಗಳ ಬಗ್ಗೆಈ ಲೇಖನದಲ್ಲಿ ಹಿರಿಯ ಪತ್ರಕರ್ತ ಉತ್ಪಲ್ ಪಾಠಕ್ ವಿಶ್ಲೇಷಿಸಿದ್ದಾರೆ.
ಗಮನಾರ್ಹ ವಿಸ್ತಾರ ಮತ್ತು ವಿರೋಧ ಪಕ್ಷಗಳ ಮೌನ ಈ ಕಾರಿಡಾರ್ ಸುಮಾರು 5.3 ಲಕ್ಷ ಚದರ ಅಡಿಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ದೇಗುಲ ಸುತ್ತಮುತ್ತಲಿನ ಮನೆಗಳು ಮತ್ತು ಕಟ್ಟಡಗಳನ್ನು ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ವಿವಿಧ ಪ್ರದೇಶಗಳ ಸುಮಾರು 296 ಕಟ್ಟಡಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇದರಲ್ಲಿ 227 ಕಟ್ಟಡಗಳು ಖಾಸಗಿ ಸ್ವತ್ತುಗಳಾಗಿದ್ದರೆ, 31 ಕಟ್ಟಡಗಳು ಸೇವಾದಾರರಿಗೆ ಸೇರಿದ್ದವಾಗಿದ್ದವು. ಸ್ವಾಧೀನಪಡಿಸಿಕೊಂಡಿರುವ ಕಟ್ಟಡಗಳಲ್ಲಿ 13 ದೇಗುಲಗಳು ಮತ್ತು ವಿವಿಧ ಟ್ರಸ್ಟ್ಗಳಿಗೆ ಸೇರಿದ 21 ಸ್ವತ್ತುಗಳಿವೆ. ಐದು ಕಟ್ಟಡಗಳು ನಗರಪಾಲಿಕೆಗೆ ಸೇರಿದ್ದಾಗಿದೆ.
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಸೇರಿದಂತೆ ವಿರೋಧಪಕ್ಷಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭೂಸ್ವಾಧೀನವನ್ನು ವಿರೋಧಿಸಿದ್ದು ನಿಜ. ಆದರೆ ಇದು ಬಹುಕಾಲ ಮುಂದುವರಿಯಲಿಲ್ಲ. ವಿರೋಧಪಕ್ಷಗಳ ಒಟ್ಟಾರೆ ಮೌನವು ಬಿಜೆಪಿಯ ಕಾರ್ಯತಂತ್ರವು ಈ ವಿಚಾರದಲ್ಲಿ ಗೆಲುವು ಸಾಧಿಸಿದ್ದನ್ನು ಎತ್ತಿ ತೋರಿಸುತ್ತದೆ. ದಶಕಗಳ ಹಿಂದೆ ಕಾಂಗ್ರೆಸ್ ಆಡಳಿತವಿದ್ದಾಗಲೇ ಕಾಶಿ ವಿಶ್ವನಾಥ ದೇಗುಲವನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ನಂತರದ ದಿನಗಳಲ್ಲಿ ಅಧಿಕಾರ ನಡೆಸಿದ ಬಹುಜನ ಸಮಾಜಪಕ್ಷ (ಬಿಎಸ್ಪಿ) ಮತ್ತು ಸವಾಜವಾದಿ ಪಕ್ಷ (ಎಸ್ಪಿ) ಸರ್ಕಾರಗಳು ದೇಗುಲದ ಆದಾಯವನ್ನು ಸರ್ಕಾರದ ಲೆಕ್ಕಕ್ಕೆ ಜಮಾ ಮಾಡಿಕೊಂಡು ಬೀಗಿದ್ದವು. ಆದರೆ ಬಿಜೆಪಿಯು ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಿಸುವ ಮೂಲಕ ಈ ಎರಡೂ ಪಕ್ಷಗಳ ವಿರುದ್ಧ ಮೇಲುಗೈ ಸಾಧಿಸಿದೆ.
ಕಾಶಿ ವಿಚಾರದಲ್ಲಿ ಬಿಜೆಪಿಯು ವಿರೋಧ ಪಕ್ಷಗಳ ಬಾಯಿ ಮುಚ್ಚಿಸಿ ನಿಚ್ಚಳ ಮೇಲುಗೈ ಸಾಧಿಸಿದೆ ಎನ್ನುತ್ತಾರೆ ಲಖನೌ ಮೂಲದ ಹಿರಿಯ ಪತ್ರಕರ್ತ ಡಾ.ಯೋಗೇಶ್ ಮಿಶ್ರಾ. ‘ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮೂರು ಶಕ್ತಿಕೇಂದ್ರಗಳಿವೆ. ಅವೆಂದರೆ; ಅಯೋಧ್ಯಾ, ಕಾಶಿ ಮತ್ತು ಮಥುರಾ. ಅಯೋಧ್ಯೆಯ ನಂತರ ಬಿಜೆಪಿಯು ಕಾಶಿ ದೇಗುಲ ವಿಚಾರದ ಸುತ್ತ ತನ್ನ ಕಾರ್ಯತಂತ್ರವನ್ನು ಹೆಣೆಯಿತು. ಮಥುರ ಮತ್ತು ಕಾಶಿಗಳಲ್ಲಿ ದೇಗುಲ ಮತ್ತು ಮಸೀದಿಗಳು ಒಂದೇ ಸಂಕೀರ್ಣದಲ್ಲಿವೆ. ಕಾಶಿ ವಿಶ್ವನಾಥ ಮೊಗಸಾಲೆಯ ಮೂಲಕ ದೇಗುಲಕ್ಕೆ ಬಿಜೆಪಿ ಅದ್ಭುತ ಸ್ಪರ್ಶ ನೀಡಿದೆ. ಪ್ರಸ್ತುತ ದೇಶದಲ್ಲಿ ‘ಬಹುಸಂಖ್ಯಾತರು ವರ್ಸಸ್ ಅಲ್ಪಸಂಖ್ಯಾತರು’ ಮಾದರಿಯ ರಾಜಕಾರಣ ನಡೆಯುತ್ತಿದೆ. ಯಾವುದೇ ರಾಜಕೀಯ ಪಕ್ಷವು ಬಹುಸಂಖ್ಯಾತರಿಗೆ ಬೇಸರವುಂಟು ಮಾಡುವ ಯಾವುದೇ ಹೆಜ್ಜೆಯಿಟ್ಟರೆ ಅದು ಬಿಜೆಪಿಯ ಬಲವರ್ಧನೆಗೆ ಕಾರಣವಾಗುತ್ತದೆ ಎಂಬುದನ್ನು ಎಲ್ಲ ಪಕ್ಷಗಳೂ ಅರಿತುಕೊಂಡಿವೆ. ಏಕೆಂದರೆ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಎರಡು ಬಾರಿ ಬಹುಸಂಖ್ಯಾತರ ಬೆಂಬಲದಿಂದಲೇ ಸರ್ಕಾರ ರಚಿಸಿದ್ದಾರೆ. ಉತ್ತರ ಪ್ರದೇಶವನ್ನೂ ಅವರೇ ಗೆದ್ದು ಯೋಗಿ ಆದಿತ್ಯನಾಥ ಅವರಿಗೆ ಕೊಟ್ಟಿದ್ದಾರೆ. ಕಾಶಿ ವಿಶ್ವನಾಥ ದೇಗುಲದ ಮೊಗಸಾಲೆಯ ವೈಭವದ ಜೀರ್ಣೋದ್ಧಾರವು ಉತ್ತರ ಪ್ರದೇಶವನ್ನು ಮತ್ತೊಮ್ಮೆ ಗೆಲ್ಲುವ ವಿಚಾರದಲ್ಲಿ ಬಿಜೆಪಿಯ ಬುದ್ಧಿವಂತಿಕೆಯ ನಡೆಯಾಗುತ್ತದೆ. ಬಿಜೆಪಿಯ ಅದೆಷ್ಟು ಜಾಣತನದಿಂದ ಮತ್ತು ಅದೆಷ್ಟು ನಿಖರವಾಗಿ ತನ್ನ ಹೆಜ್ಜೆ ಇಟ್ಟಿದೆ ಎಂದರೆ ವಿರೋಧ ಪಕ್ಷಗಳಿಗೆ ಮೌನವಾಗಿರುವುದು ಹೊರತುಪಡಿಸಿ ಬೇರೆ ಯಾವುದೇ ಆಯ್ಕೆ ಉಳಿದಿಲ್ಲ. ದೇಗುಲದ ವೈಭವದ ಎದುರು ಕಾಶಿಯ ಮಸೀದಿ ಮಂಕಾಗಿ ಕಾಣುತ್ತದೆ. ಮೊಗಸಾಲೆಯ ಚಂದದ ಬಗ್ಗೆ ಮಾತ್ರ ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಡಾ.ಯೋಗೇಶ್ ಮಿಶ್ರಾ ಅಭಿಪ್ರಾಯಪಡುತ್ತಾರೆ.
ಇದನ್ನೂ ಓದಿ: Political Analysis: ಉಳಿವಿನ ಕಲೆ ನೇವರಿಸುತ್ತಿರುವ ಗಾಂಧಿ ಕುಟುಂಬ: ಬಿಕ್ರಮ್ ವೊಹ್ರಾ ಬರಹ
ಸ್ಮಾರ್ಟ್ ಅಧಿಕಾರಿಗಳು, ಬುದ್ಧಿವಂತ ವಕೀಲರು ಮತ್ತು ವ್ಯಾಪಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಈ ಕನಸಿನ ಯೋಜನೆಯು 2022ರ ವಿಧಾನಸಭಾ ಚುನಾವಣೆ ವೇಳೆಗೆ ಸಿದ್ಧವಾಗುತ್ತದೆ ಎಂದು ನಾನು ಈ ಮೊದಲೇ ಅಂದಾಜಿಸಿದ್ದೆ. ಅಯೋಧ್ಯೆ ದೇಗುಲವನ್ನು 2024ರ ಚುನಾವಣೆಗೆ ಮೊದಲು ಉದ್ಘಾಟಿಸುವ ಸಾಧ್ಯತೆಯಿದೆ. ಹೀಗಾಗಿ ಬುದ್ಧಿವಂತ ಮತ್ತು ಪರಿಶ್ರಮಿ ಅಧಿಕಾರಿಗಳನ್ನು ಗುರುತಿಸಿ, ತಂಡವಾಗಿಸಿ ಅಲ್ಲಿಗೆ ನಿಯೋಜಿಸುವುದು ಬಿಜೆಪಿ ಸರ್ಕಾರದ ತಕ್ಷಣದ ಆದ್ಯತೆ ಎನಿಸಿದೆ. ಅವರು ಹೇಗೆ ಕೆಲಸ ಮಾಡಬೇಕು ಎನ್ನುವುದಕ್ಕೆ ಕಾಶಿ ವಿಶ್ವನಾಥ ದೇಗುಲ ಮೊಗಸಾಲೆಯ ಉದಾಹರಣೆ ಜನರ ಕಣ್ಣೆದುರು ಇದೆ.
ವಾರಣಾಸಿಯ ವಿಭಾಗೀಯ ಆಯುಕ್ತ ನಿತಿನ್ ರಮೇಶ್ ಗೋಕರ್ಣ್ ತಮ್ಮ ಹಿಂದಿನ ಹುದ್ದೆಯಲ್ಲಿದ್ದಾಗ ಕಾರಿಡಾರ್ ನಿರ್ಮಾಣ ಕಾಮಗಾರಿಯ ಅನುಭವ ಪಡೆದುಕೊಂಡವರು. ಈ ಯೋಜನೆಗೆ ನಿಜವಾದ ವೇಗ ಸಿಕ್ಕಿದ್ದು ಚುರುಕಿನ ಅಧಿಕಾರಿ ಎಂದೇ ಹೆಸರುವಾಸಿಯಾದ ವಿಶಾಲ್ ಸಿಂಗ್ ಅವರನ್ನು ಉತ್ತರ ಪ್ರದೇಶ ಸರ್ಕಾರವು ಟ್ರಸ್ಟ್ನ ಸಿಇಒ ಎಂದು ಘೋಷಿಸಿದ ನಂತರ. ಇದೇ ಹೊತ್ತಿಗೆ ವಾರಣಾಸಿ ವಿಭಾಗದ ಆಯುಕ್ತರಾಗಿ ದೀಪಕ್ ಅಗರ್ವಾಲ್ ಅವರನ್ನು ನೇಮಿಸಲಾಗಿತ್ತು. ಈ ಇಬ್ಬರು ಅಧಿಕಾರಿಗಳ ಹೊಂದಾಣಿಕೆಯ ಕೆಲಸವು ಕಾರಿಡಾರ್ ವಿಸ್ತರಣೆ ಕಾಮಗಾರಿಯು ಸುಲಲಿತವಾಗಿ, ಹಂತಹಂತವಾಗಿ, ವ್ಯವಸ್ಥಿತವಾಗಿ ನಡೆಯಿತು. ಸ್ಥಳೀಯಮಟ್ಟದಲ್ಲಿದ್ದ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಳ್ಳಲಾಯಿತು. ಕೆಲವರು ನ್ಯಾಯಾಲಯದ ಮೊರೆಹೊಕ್ಕರು. ಆದರೆ, ಈ ಹಿಂದೆ ಕಂಡು ಕೇಳರಿಯದ ರೀತಿಯಲ್ಲಿ ಸರ್ಕಾರವೂ ಸ್ಥಳೀಯ ಮತ್ತು ಹೈಕೋರ್ಟ್ ವಕೀಲರನ್ನು ಸಂಘಟಿಸಿ ಕಾರಿಡಾರ್ ಅಭಿವೃದ್ಧಿಗೆ ಎದುರಾಗಿದ್ದ ಕಾನೂನು ತೊಡಕುಗಳನ್ನು ನಿವಾರಿಸಿಕೊಂಡಿತು.
ವಿಶಾಲ್ ಸಿಂಗ್ ಅವರು ಸಿಇಒ ಆಗಿ ತಮ್ಮ ಅಧಿಕಾರವ ಅವಧಿಯನ್ನು ಕಳೆದ ವರ್ಷ ಪೂರ್ಣಗೊಳಿಸುವ ಹೊತ್ತಿಗೆ ಶೇ 90ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿತ್ತು. ಕಟ್ಟಡಗಳ ತೆರವು ಹಾಗೂ ವಿಸ್ತರಣೆ ಕೆಲಸಗಳು ಹಂತಹಂತವಾಗಿ ನಡೆಯುತ್ತಿದ್ದವು. ಕಾರಿಡಾರ್ ಕಾಲಮಿತಿಯಲ್ಲಿ ಪೂರ್ಣಗೊಳ್ಳಲು ವಿಭಾಗೀಯ ಆಯುಕ್ತ ದೀಪಕ್ ಕುಮಾರ್ ಅವರ ಕೊಡುಗೆಯೂ ಸಾಕಷ್ಟಿದೆ. ಕೊವಿಡ್-19ರ ಮೊದಲ ಮತ್ತು ಎರಡನೇ ಅಲೆಯಲ್ಲಿ ವಿಸ್ತರಣೆ ಕಾಮಗಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಅವರು ಎಚ್ಚರಿಕೆ ವಹಿಸಿದ್ದರು. ಈ ನಡುವೆ ಟ್ರಸ್ಟ್ನ ಸಿಇಒ ಸುನಿಲ್ ಕುಮಾರ್ ವರ್ಮಾ ಬಾಕಿ ಕೆಲಸ ಪೂರ್ಣಗೊಳಿಸಲು ಲಭ್ಯವಿರುವ ಎಲ್ಲ ಅವಕಾಶಗಳನ್ನೂ ಬಳಸಿಕೊಂಡರು.
ಅಹಮದಾಬಾದ್ ಮೂಲದ ಕಂಪನಿಯು ಯೋಜನೆಯ ರೂಪುರೇಷೆ ರೂಪಿಸಿಕೊಟ್ಟಿತ್ತು. ಅದಕ್ಕೆ ಅನುಗುಣವಾಗಿ ಕಾರಿಡಾರ್ ನಿರ್ಮಾಣ ಕಾಮಗಾರಿಯು ನಾಲ್ಕು ಹಂತಗಳಲ್ಲಿ ನಡೆಯಿತು. ಮೊದಲ ಮತ್ತು ಮೂರನೇ ಹಂತದ ಕಾಮಗಾರಿಗಳನ್ನು ಮೊದಲಿಗೆ ಆರಂಭಿಸಲಾಯಿತು. ಮೊದಲ ಹಂತದಲ್ಲಿ ದೇಗುಲದ ಸುತ್ತಮುತ್ತಲ ಪ್ರದೇಶಗಳನ್ನು ತೆರವುಗೊಳಿಸಲಾಯಿತು. ಮೂರನೇ ಹಂತದ ವಿಸ್ತರಣೆಯು ಗಂಗಾ ನದಿಯ ದಂಡೆಯ ಕಡೆಯಿಂದ ಆರಂಭವಾಯಿತು. ನೇಪಾಳಿ ದೇಗುಲ ಮತ್ತು ಲಲಿತಾ ಘಾಟ್ ಕಡೆಯಿಂದ ಒಂದು ಕಿಲೋಮೀಟರ್ ಉದ್ದದ ಮಾರ್ಗ ಹಾಗೂ ಜಲಸೇನ್ ಘಾಟ್, ಮಣಿಕರ್ಣಿಕಾ ಘಾಟ್ ಮತ್ತು ಸಿಂಧಿಯಾ ಘಾಟ್ವರೆಗಿನ ಪ್ರದೇಶಗಳಲ್ಲಿ ವಿಸ್ತರಣೆ ಕಾಮಗಾರಿ ನಡೆಯಿತು. ಈ ಅವಧಿಯಲ್ಲಿ ಎರಡು ಮತ್ತು ನಾಲ್ಕನೇ ಹಂತದ ಕಾಮಗಾರಿಗಳು ನಡೆಯಬೇಕಿರುವ ಜನನಿಬಿಡ ಪ್ರದೇಶಗಳಲ್ಲಿ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳುವ, ತೆರವುಗೊಳಿಸುವ ಮತ್ತು ಕೆಡವುವ ಕೆಲಸ ನಡೆಯಿತು.
ವಿರೋಧ ಪಕ್ಷಗಳ ಮೌನದ ಬಗ್ಗೆ ಪ್ರತಿಕ್ರಿಯಿಸಿರುವ ಗೋಸ್ವಾಮಿ ತುಲಸಿದಾಸ್ ಅಖಾಡದ ಮಹಾಂತ ಡಾ.ವಿಶ್ವಂಭರ ನಾಥ್ ಮಿಶ್ರಾ, ನಮಗೆ ರಾಜಕೀಯದ ಉದ್ದೇಶ ಏನೂ ಇಲ್ಲ. ವಿರೋಧ ಪಕ್ಷಗಳಿಗೆ ಪ್ರತಿಭಟನೆ ನಡೆಸಲು ಯಾವುದೇ ವಿಷಯವಿಲ್ಲ ಎಂಬುದು ಗೊತ್ತಾಗಿದೆ. ವಾಸ್ತವವಾಗಿ ಹಿಂದೂಧರ್ಮವನ್ನು ಪಾಲಿಸುವುದಕ್ಕೂ-ನವ ಹಿಂದುತ್ವಕ್ಕೂ ಇರುವ ವ್ಯತ್ಯಾಸ ಅರ್ಥ ಮಾಡಿಕೊಳ್ಳದ ಜನರ ಗುಂಪಿನೊಂದಿಗೆ ವಿರೋಧಪಕ್ಷಗಳು ಇವೆ. ಕಾರಿಡಾರ್ ನಿರ್ಮಾಣವನ್ನು ವಿರೋಧಿಸಿ ಅವರಿಗೆ ಪ್ರತಿಭಟನೆ ನಡೆಸಲು ಸಾಧ್ಯವಾಗದಿದ್ದರೂ ವಿಸ್ತರಣೆಯ ಕುರಿತು ಸಹಮತ ಬೇಕು ಎಂದು ಅವರೇಕೆ ಕೇಳುತ್ತಿಲ್ಲ? ಹೀಗಾಗಿ ವಿರೋಧ ಪಕ್ಷಗಳು ತಮ್ಮ ಮೌನದಿಂದಲೇ ಸರ್ಕಾರದ ನಡೆಯನ್ನು ಒಪ್ಪಿಕೊಂಡಿವೆ ಎಂದು ಹೇಳುವುದರಲ್ಲಿ ತಪ್ಪೇನೂ ಇಲ್ಲ ಎನ್ನುತ್ತಾರೆ ಅವರು.
ಇದನ್ನೂ ಓದಿ: ಕಾಶಿ ವಿಶ್ವನಾಥ ದೇಗುಲ ಕಾರಿಡಾರ್ ನಿರ್ಮಾಣ ಅಂತಿಮ ಹಂತದಲ್ಲಿ; ಡಿಸೆಂಬರ್ 13ರಂದು ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಪ್ರವೇಶದ್ವಾರಗಳಿಗೆ ಹೊಸ ಹೆಸರು ಸಂಕೀರ್ಣ ನಿರ್ಮಾಣಕ್ಕೂ ಮುನ್ನ ಪ್ರವೇಶದ್ವಾರಗಳಿಗೆ ಸ್ಥಳೀಯ ಸ್ಥಳನಾಮಗಳೇ ಇದ್ದವು. ಚೌಕ್-ವಿಶ್ವನಾಥ್ ಮಂದಿರ ರಸ್ತೆಯ ದ್ವಾರಕ್ಕೆ ವಿಐಪಿ ಗೇಟ್ ಎಂಬ ಹೆಸರಿತ್ತು. ಛಟ್ಟದ್ವಾರ್ ಗೇಟ್ ಮತ್ತು ಗ್ಯಾನ್ವಾಪಿ ಗೇಟ್ ಎಂಬ ಹೆಸರುಗಳು ಬಳಕೆಯಲ್ಲಿದ್ದವು. ಗೊಡೌಲಿಯಾ ಚೌಕವನ್ನು ಧನುಂಧೀರಜ್ ಚೌಕವನ್ನು ಧನುಧೀರಜ್ ಗೇಟ್ ಎನ್ನುತ್ತಿದ್ದರು. ದಶಾಶ್ವಮೇಧ್ ಘಾಟ್, ಲಲಿತಾ ಘಾಟ್ ಮತ್ತು ಕಾಳಿಕಾ ಗಾಳಿ ಪ್ರದೇಶದಿಂದ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಹಾದಿಗೆ ಸರಸ್ವತಿ ಗೇಟ್ ಎನ್ನಲಾಗುತ್ತಿತ್ತು. ಮಣಿಕರ್ಣಿಕಾ ಘಾಟ್ನಿಂದ ದೇಗುಲ ಪ್ರವೇಶಿಸುವ ಮಾರ್ಗವನ್ನು ನೀಲಕಂಠ್ ಗೇಟ್ ಎನ್ನಲಾಗುತ್ತಿತ್ತು. ಈಗ ಈ ಪೈಕಿ ಬಹುತೇಕ ಪ್ರದೇಶಗಳು ಅಸ್ತಿತ್ವವನ್ನೇ ಕಳೆದುಕೊಂಡಿವೆ. ಕೆಲ ಪ್ರವೇಶದ್ವಾರಗಳಿಗೆ ಹೊಸ ಹೆಸರುಗಳನ್ನು ನೀಡಲಾಗಿದೆ.
ಎಲ್ಲ ನಾಲ್ಕೂ ಪ್ರವೇಶದ್ವಾರಗಳು ತಲಾ 34 ಅಡಿಗಳಷ್ಟು ಎತ್ತರವಿದೆ. ಈ ಸಂಕೀರ್ಣಗಳನ್ನು ಮಕ್ರಾನಾ ಮತ್ತು ಚುನಾರ್ ಶಿಲೆಗಳನ್ನು ಬಳಸಿ ನಿರ್ಮಿಸಲಾಗಿದೆ. ಲಲಿತಾ ಘಾಟ್ ಮಾರ್ಗದಿಂದ ಸಾಗಿಬಂದರೆ ದೇಗುಲದ ಕಳಸ ಕಾಣಿಸುತ್ತದೆ. ದೇಗುಲ ಚೌಕದ ಭಾಗವನ್ನು ಅರ್ಧ ಚಂದ್ರಾಕೃತಿಯಲ್ಲಿ ರೂಪಿಸಲಾಗಿದೆ. ಚೌಕ ಮತ್ತು ಗಂಗಾಘಾಟ್ ನಡುವೆ ಒಟ್ಟು 24 ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ದೇಗುಲ ಸಮುಚ್ಚಯಗಳು, ದೇಗುಲ ಚೌಕಗಳು, ಲಘು ಉಪಹಾರ ಕೇಂದ್ರಗಳು, ಪ್ರವಾಸಿಗರಿಗೆ ವಿಶ್ರಾಂತಿ ಗೃಹ, ಯಾತ್ರಿಗಳ ಸೌಕರ್ಯ ಕೇಂದ್ರ, ವಸ್ತುಸಂಗ್ರಹಾಲಯ, ಅಧ್ಯಾತ್ಮ ಪುಸ್ತಕ ಭಂಡಾರ ಮತ್ತು ಮುಮುಕ್ಷು ಭವನ ಇದೆ.
ಕಾಶಿ ವಿಶ್ವನಾಥ ದೇಗುಲ ಕಾರಿಡಾರ್ ಉದ್ಘಾಟನಾ ಸಮಾರಂಭವನ್ನು ವೈಭವದಿಂದ ನೆರವೇರಿಸಬೇಕು ಎನ್ನುವ ಕಾರಣಕ್ಕೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ದೇವ್ ದೀಪಾವಳಿಯಂಥ ಪ್ರಮುಖ ಹಬ್ಬಗಳನ್ನು ಕಾಶಿಯ ಗಂಗಾ ಘಾಟ್ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಈ ವೈಭವ ನೋಡಲು ದೇಶದ ಎಲ್ಲ ಪ್ರದೇಶಗಳಿಂದ ಜನರು ಬರುತ್ತಾರೆ. ಕಾರಿಡಾರ್ ಉದ್ಘಾಟನೆಯ ನಂತರ ಇಂಥ ಹಲವು ಉತ್ಸವಗಳು ವಾರಣಾಸಿಯಲ್ಲಿ ಒಂದು ತಿಂಗಳ ಅವಧಿಗೆ ನಡೆಯಲಿದೆ. ಹೀಗಾಗಿ ಮುಂದಿನ ಒಂದು ತಿಂಗಳ ಅವಧಿಗೆ ಭಾರತೀಯ ಜನತಾ ಪಕ್ಷಕ್ಕೆ ಈ ಎಲ್ಲ ಉತ್ಸವಗಳಿಂದ ರಾಜಕೀಯ ಲಾಭ ಪಡೆಯಲು ಸಾಕಷ್ಟು ಅವಕಾಶಗಳಿವೆ. ಪೂರ್ವಾಂಚಲದ ಬಹುತೇಕ ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ವಿರೋಧಪಕ್ಷಗಳಿಂದ ಪ್ರಬಲ ವಿರೋಧ ವ್ಯಕ್ತವಾಗುವುದು ನಿರೀಕ್ಷಿತ ಸಂಗತಿ. ಕಾಶಿ ವಿಶ್ವನಾಥ ಕಾರಿಡಾರ್ನಿಂದ ಬಿಜೆಪಿ ಎಷ್ಟರಮಟ್ಟಿಗೆ ರಾಜಕೀಯ ಲಾಭ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮುಷ್ಕರ ಆರಂಭಿಸಿದ ರಾಜಸ್ಥಾನದ ನಿರುದ್ಯೋಗಿ ಯುವಕರು: ಪರಸ್ಪರ ಹರಿಹಾಯ್ದ ಕಾಂಗ್ರೆಸ್-ಬಿಜೆಪಿ ನಾಯಕರು ಇದನ್ನೂ ಓದಿ: UPTET 2021 ಉತ್ತರ ಪ್ರದೇಶ ಶಿಕ್ಷಕರ ಅರ್ಹತಾ ಪರೀಕ್ಷೆ ಪ್ರಶ್ನೆ ಸೋರಿಕೆ; ಪರೀಕ್ಷೆ ರದ್ದು