
ವನ್ಯಜೀವಿ ತಳಿಯ ಪಟ್ಟೆ ತಲೆ ಹೆಬ್ಬಾತುಗಳನ್ನು ಸಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರ ನ್ಯಾಯಾಲಯ ನೀಡಿದ್ದ ಸಮನ್ಸ್ ಪ್ರಶ್ನಿಸಿ ನಟ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ಫಾರ್ಮ್‌ಹೌಸ್ ಮ್ಯಾನೇಜರ್ ನಾಗರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಾಲಯ ನೀಡಿದ ಸಮನ್ಸ್ ಹಾಗೂ ತಮ್ಮ ವಿರುದ್ಧದ ವನ್ಯಜೀವಿ ಕಾಯ್ದೆಯಡಿಯ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ದರ್ಶನ್ ಮತ್ತು ತಂಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
2023ರ ಜನವರಿ 21ರಂದು ಅರಣ್ಯಾಧಿಕಾರಿಗಳು ನಟ ದರ್ಶನ್ ಅವರಿಗೆ ಸೇರಿದ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ವ್ಯಾಪ್ತಿಗೆ ಬರುವ 4 ಪಟ್ಟೆ ತಲೆ ಹೆಬ್ಬಾತುಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಟಿ. ನರಸೀಪುರ ಕೋರ್ಟ್‌ಗೆ ಖಾಸಗಿ ದೂರು ದಾಖಲಿಸಿದ್ದರು.
ವಿಚಾರಣೆ ನಡೆಸಿದ ಟಿ. ನರಸೀಪುರ ನ್ಯಾಯಾಲಯವು ದರ್ಶನ್, ವಿಜಯಲಕ್ಷ್ಮೀ ಹಾಗೂ ನಾಗರಾಜ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಅದನ್ನು ಪ್ರಶ್ನಿಸಿ ಈ ಮೂವರು ಈಗ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಫಾರ್ಮ್‌ಹೌಸ್‌ನಲ್ಲಿ ಕಾಣಿಸಿಕೊಂಡ ಪಟ್ಟೆ ತಲೆ ಹೆಬ್ಬಾತುಗಳ ಬಗ್ಗೆ ಅರ್ಜಿಯಲ್ಲಿ ವಿವರ ನೀಡಲಾಗಿದೆ.
ಇದನ್ನೂ ಓದಿ: ಹೈಕೋರ್ಟ್ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
‘ಫಾರ್ಮ್‌ಹೌಸ್‌ನಲ್ಲಿ ಬೇರೆ ಬೇರೆ ಜಾತಿಯ ಪಕ್ಷಿಗಳಿದ್ದವು. ಆ ಪಕ್ಷಿಗಳೊಂದಿಗೆ ಈ 4 ಪಟ್ಟೆ ತಲೆ ಹೆಬ್ಬಾತುಗಳು ಹೇಗೋ ಬಂದು ಸೇರಿಕೊಂಡಿದ್ದವು. ಅರಣ್ಯಾಧಿಕಾರಿಗಳು ತಪಾಸಣೆ ನಡೆಸಿದ ನಂತರವಷ್ಟೇ ಈ ವಿಷಯ ನಮಗೆ ತಿಳಿಯಿತು. ನಾವು ಆ ಪಕ್ಷಿಗಳನ್ನು ಸಾಕಿರಲಿಲ್ಲ’ ಎಂದು ಅರ್ಜಿಯಲ್ಲಿ ಸ್ಪಷ್ಟನೆ ನೀಡಲಾಗಿದೆ. ಅಲ್ಲದೆ, ವಿಜಯಲಕ್ಷ್ಮೀ ಅವರು ಫಾರ್ಮ್‌ಹೌಸ್‌ಗೆ ಭೇಟಿ ನೀಡುವುದಿಲ್ಲ ಹಾಗೂ ದರ್ಶನ್ ಕೂಡ ಅಪರೂಪಕ್ಕೊಮ್ಮೆ ಮಾತ್ರ ಭೇಟಿ ನೀಡುತ್ತಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.