ಮಾಫಿ ಸಾಕ್ಷಿ: ನಟ ದರ್ಶನ್ ಮೇಲ್ಮನವಿ ವಜಾ; ಹೈಕೋರ್ಟ್​ನಲ್ಲಿ ಮತ್ತೆ ಹಿನ್ನಡೆ

59ನೇ ಸಿಸಿಹೆಚ್ ಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿದ್ದ ದರ್ಶನ್‌ ಅವರಿಗೆ ಹಿನ್ನಡೆ ಆಗಿದೆ. ಹೈಕೋರ್ಟ್​​ನಲ್ಲಿ ಅವರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಂಡಿದೆ. ವಿನಯ್ ಕುಲಕರ್ಣಿ ಕೇಸ್‌ ಉಲ್ಲೇಖಿಸಿ ಹೈಕೋರ್ಟ್ ಈ ಆದೇಶ ನೀಡಿದೆ. ಇದರಿಂದಾಗಿ ದರ್ಶನ್ ಅವರಿಗೆ ದೊಡ್ಡ ಶಾಕ್ ಎದುರಾಗಿದೆ. ಆ ಬಗ್ಗೆ ಇಲ್ಲಿದೆ ವಿವರ..

ಮಾಫಿ ಸಾಕ್ಷಿ: ನಟ ದರ್ಶನ್ ಮೇಲ್ಮನವಿ ವಜಾ; ಹೈಕೋರ್ಟ್​ನಲ್ಲಿ ಮತ್ತೆ ಹಿನ್ನಡೆ
Darshan
Edited By:

Updated on: Aug 13, 2026 | 5:51 PM

ಮುಖ್ಯಾಂಶಗಳು

  • ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
  • ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಯನ್ನು ಆಕ್ಷೇಪಿಸಲು ಸಹ-ಆರೋಪಿಗೆ ಯಾವುದೇ ಹಕ್ಕಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
  • ಆಪ್ತ ಪ್ರದೋಷ್ ಸಾಕ್ಷಿಯಾಗಲು ಮುಂದಾಗಿರುವುದರಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಸಂಕಷ್ಟ ಹೆಚ್ಚಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಪ್ರಮುಖ ಆರೋಪಿ ಆಗಿರುವ ನಟ ದರ್ಶನ್ ಅವರಿಗೆ ಕಾನೂನಿನ ಸಂಕಷ್ಟ ಹೆಚ್ಚುತ್ತಲೇ ಇದೆ. ಇನ್ನೋರ್ವ ಆರೋಪ ಪ್ರದೋಷ್ (Pradosh) ಮಾಫಿ ಸಾಕ್ಷಿಯಾಗಲು ಮುಂದಾಗಿರುವುದರಿಂದ ದರ್ಶನ್ ಎದೆಯಲ್ಲಿ ಢವಢವ ಶುರುವಾಗಿದೆ. ಮಾಫಿ ಸಾಕ್ಷಿಗೆ ಆಕ್ಷೇಪಣೆ ಸಲ್ಲಿಸಲು ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಯಾವುದೇ ಹಕ್ಕು ಇಲ್ಲ ಎಂದು 59ನೇ ಸಿಸಿಹೆಚ್ ಕೋರ್ಟ್ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ದರ್ಶನ್ (Darshan) ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಕೂಡ ಅವರಿಗೆ ಹಿನ್ನಡೆ ಆಗಿದೆ.

ದರ್ಶನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ವಿನಯ್ ಕುಲಕರ್ಣಿ ಕೇಸ್‌ನಲ್ಲಿ ಈಗಾಗಲೇ ಈ ಅಂಶದ ತೀರ್ಮಾನವಾಗಿದೆ. ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್ ಒಪ್ಪಿದೆ. ಹೀಗಾಗಿ 59ನೇ ಸಿಸಿಹೆಚ್ ಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.

ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಾಡಿದರು. ‘ಮಾಫಿ ಸಾಕ್ಷಿಯಾಗುವಂತೆ ಕೋರಿರುವ ಅರ್ಜಿಯ ಪ್ರತಿಯನ್ನೂ ನೀಡಿಲ್ಲ. ಪ್ರಕ್ರಿಯೆಯ ಲೋಪದ ಬಗ್ಗೆಯಷ್ಟೇ ನಾವು ವಾದ ಮಾಡುತ್ತೇವೆ. ಅದಕ್ಕೂ ಅವಕಾಶ ಕೊಟ್ಟಿಲ್ಲ’ ಎಂದು ಹಷ್ಮತ್ ಪಾಷಾ ವಾದ ಮಂಡಿಸಿದರು. ‘ಮಾಫಿ ಸಾಕ್ಷಿಯಾಗಿಸಿದ ನಂತರವಷ್ಟೇ ಪ್ರಕ್ರಿಯೆ ಲೋಪವನ್ನು ಪ್ರಶ್ನಿಸಬಹುದು. ಮಾಫಿ ಸಾಕ್ಷಿಯನ್ನು ಆಕ್ಷೇಪಿಸಲು ಸಹ-ಆರೋಪಿಗೆ ಹಕ್ಕಿಲ್ಲ’ ಎಂದು ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ‘ಹೊಡೆದರು, ಸುಟ್ಟರು, ಕೊನೆಗೆ ‘ಶೂಟ್ ಮಾಡ್ಕೊಂಡು ಸಾಯ್ತೀನಿ’ ಎಂದ ದರ್ಶನ್’

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ತ್ವರಿತ ಗತಿಯಲ್ಲಿ ನಡೆಯುತ್ತಿವೆ. ಈ ಹಂತದಲ್ಲಿ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ನಿರ್ಧರಿಸಿ ಅರ್ಜಿ ಸಲ್ಲಿಸಿದ್ದಾನೆ. ದರ್ಶನ್ ಜೊತೆ ಪ್ರದೋಷ್ ಆಪ್ತನಾಗಿದ್ದ. ಆದರೆ ಈಗ ಆತನೇ ಎಲ್ಲವನ್ನೂ ಒಪ್ಪಿಕೊಳ್ಳಲು ಸಿದ್ಧವಾಗಿರುವುದರಿಂದ ದರ್ಶನ್​ಗೆ ನಡುಕ ಶುರುವಾಗಿದೆ. ಮಾಫಿ ಸಾಕ್ಷಿ ಆಗಲು ಪ್ರದೋಷ್​ಗೆ ಅವಕಾಶ ಇದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಕಾನೂನು ಪ್ರಕ್ರಿಯೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
Loading...
Unable to load recommendations.
Follow Us