ದರ್ಶನ್ಗೆ ದೊಡ್ಡ ಸಂಕಷ್ಟ; ಪ್ರದೋಷ್ ಅರ್ಜಿಗೆ ಆಕ್ಷೇಪಣೆ ಪರಿಗಣಿಸಲು ಕೋರ್ಟ್ ನಕಾರ
ಖ್ಯಾತ ನಟ ದರ್ಶನ್ ತೂಗುದೀಪ ಅವರ ಆಪ್ತ ಬಳಗದಲ್ಲಿ ಪ್ರದೋಷ್ ಕೂಡ ಗುರುತಿಸಿಕೊಂಡಿದ್ದ. ಆದರೆ ಈಗ ಪ್ರದೋಷ್ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು ಅಚ್ಚರಿ ಮೂಡಿಸಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ ಕೊಲೆ ನಡೆದ ದಿನ ಏನೆಲ್ಲ ಆಯಿತು ಎಂಬುದನ್ನು ವಿವರಿಸಲು ಪ್ರದೋಷ್ ಮುಂದಾಗಿದ್ದಾನೆ.

ಮುಖ್ಯಾಂಶಗಳು
- ಮಾಫಿಸಾಕ್ಷಿ ಆಗಲು ಪ್ರದೋಷ್ ಸಲ್ಲಿಸಿದ ಅರ್ಜಿ ಕಾನೂನಿನ ಪ್ರಕಾರ ತೀರ್ಮಾನ ಆಗಲಿದೆ.
- ಇದಕ್ಕೆ ಆಕ್ಷೇಪಣೆ ಸಲ್ಲಿಸಲು ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಯಾವುದೇ ಹಕ್ಕು ಇಲ್ಲ.
- ದರ್ಶನ್ ಪರ ವಕೀಲರ ಮನವಿ ತಿರಸ್ಕರಿಸಿದ ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್.
ನಟ ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಸಂಕಷ್ಟ ಹೆಚ್ಚಾಗಿದೆ. ಈ ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ಅದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಅವಕಾಶ ಕೋರಿದ್ದರು. ಇದರ ವಿಚಾರಣೆ ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್ನಲ್ಲಿ ನಡೆದಿದೆ. ರೇಣುಕಾಸ್ವಾಮಿ ಕೊಲೆ ಆದ ದಿನ ಏನೆಲ್ಲ ನಡೆಯಿತು ಎಂಬುದನ್ನು ನ್ಯಾಯಾಲಯದ ಮುಂದೆ ತೆರೆದಿಡಲು ಪ್ರದೋಷ್ (Pradosh) ಮುಂದಾಗಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ದರ್ಶನ್ ಪರ ವಾದವನ್ನು ಕೇಳಬೇಕಾ ಅಥವಾ ಬೇಡವಾ ಎಂಬುದನ್ನು ನಿರ್ಧರಿಸಲು ಇಂದು (ಆಗಸ್ಟ್ 10) ವಿಚಾರಣೆ ಮಾಡಲಾಯಿತು. ಬಳಿಕ ಕೋರ್ಟ್ ಈ ಆದೇಶ ನೀಡಿದೆ. ದರ್ಶನ್ (Darshan) ಹಾಗೂ ಇನ್ನುಳಿದ ಆರೋಪಿಗಳ ಆಕ್ಷೇಪಣೆ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.
ಇದರಿಂದಾಗಿ ದರ್ಶನ್ ಅವರಿಗೆ ದೊಡ್ಡ ಹಿನ್ನಡೆ ಆಗಿದೆ. ಪ್ರದೋಷ್ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ದರ್ಶನ್ ಹಾಗೂ ಇತರೆ ಆರೋಪಿಗಳ ವಾದ ಆಲಿಸುವ ಅವಶ್ಯಕತೆ ಇಲ್ಲ ಎಂದು ಕೋರ್ಟ್ ಹೇಳಿದೆ. ಆದರೆ ಪ್ರದೋಷ್ನನ್ನು ಮಾಫಿಸಾಕ್ಷಿಯಾಗಿ ಪರಿಗಣಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಕಾನೂನಿನ ಪ್ರಕಾರ ಅದು ತೀರ್ಮಾನ ಆಗಲಿದೆ ಎಂದು ಜಡ್ಜ್ ಸುಜಾತಾ ಮಡಿವಾಳಪ್ಪ ಹೇಳಿದ್ದಾರೆ.
ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವುದಕ್ಕೂ ಮುನ್ನ ತಮ್ಮ ವಾದವನ್ನು ಕೂಡ ಆಲಿಸಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಇನ್ನುಳಿದ ಆರೋಪಿಗಳ ಪರ ವಕೀಲರು ಕೂಡ ಅರ್ಜಿ ಹಾಕಿದ್ದರು. ಆದರೆ ಈಗ ದರ್ಶನ್ ಹಾಗೂ ಸಹ ಆರೋಪಿಗಳ ವಕೀಲರ ಮನವಿ ತಿರಸ್ಕೃತ ಆಗಿರುವ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ಶಾಕ್ ಎದುರಾಗಿದೆ.
ಇದನ್ನೂ ಓದಿ: ದರ್ಶನ್ಗೆ ಶಾಕ್ ಮೇಲೆ ಶಾಕ್; ಪ್ರದೋಷ್ ಬಳಿಕ ಮತ್ತಿಬ್ಬರು ಮಾಫಿ ಸಾಕ್ಷಿ ಅರ್ಜಿ
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಈ ಹಂತದಲ್ಲಿ ದರ್ಶನ್ ಹಾಗೂ ಇತರೆ ಆರೋಪಿಗಳ ವಾದವನ್ನು ಆಲಿಸುವ ಅವಶ್ಯಕತೆ ಇಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲು ಏರುತ್ತಾರಾ ಅಥವಾ ನ್ಯಾಯಾಲಯದ ಮುಂದಿನ ಆದೇಶದವರೆಗೂ ಕಾಯುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಮಾಫಿ ಸಾಕ್ಷಿಯಾಗಿ ಪ್ರದೋಷ್ನನ್ನು ಪರಿಗಣಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಇನ್ನೂ ಕೋರ್ಟ್ ತೀರ್ಮಾನ ಮಾಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕೆಲವು ಪ್ರಕ್ರಿಯೆಗಳು ನಡೆಯುವುದು ಬಾಕಿ ಇದೆ. ಆ ತೀರ್ಮಾನ ಅಂತಿಮವಾದ ಬಳಿಕ ದರ್ಶನ್ ಹಾಗೂ ಇತರೆ ಆರೋಪಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಒಂದು ವೇಳೆ ಪ್ರದೋಷ್ಗೆ ಮಾಫಿಸಾಕ್ಷಿಯಾಗಲು ಅವಕಾಶ ಸಿಕ್ಕರೆ ಆತನ ಹೇಳಿಕೆಯಿಂದ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




