ಪ್ರಭಾಸ್ ಸಿನಿಮಾ ಸೆಟ್​​ನಲ್ಲಿ ನಿಜಕ್ಕೂ ನಡೆದಿದ್ದೇನು? ಸತ್ಯ ಹೇಳಿದ ಬಾಲಿವುಡ್ ನಟ

Prabhas Films: ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾನಲ್ಲಿ ನಟಿಸುತ್ತಿದ್ದ ಬಾಲಿವುಡ್ ನಟ ರಾಜೇಶ್ ಶರ್ಮಾ ಹಠಾತ್ತನೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಬಾಲಿವುಡ್​ನ ಕೆಲ ಒಕ್ಕೂಟಗಳು ‘ಫೌಜಿ’ ಸಿನಿಮಾ ತಂಡದ ಮೇಲೆ ಆಕ್ರೋಶ ಹೊರಹಾಕಿ, ಸಿನಿಮಾದ ನಿರ್ಮಾಪಕರ ವಿರುದ್ಧ ದೂರು ದಾಖಲು ಮಾಡಬೇಕು ಎಂದು ಒತ್ತಾಯ ಸಹ ಮಾಡಲಾಗಿತ್ತು. ಇದೀಗ ರಾಜೇಶ್ ಅವರು ಈ ಬಗ್ಗೆ ಮಾತನಾಡಿದ್ದು, ಸಿನಿಮಾ ಸೆಟ್​​ನಲ್ಲಿ ಅಂದು ನಡೆದಿದ್ದೇನು ಎಂಬುದನ್ನು ವಿವರಿಸಿದ್ದಾರೆ.

ಪ್ರಭಾಸ್ ಸಿನಿಮಾ ಸೆಟ್​​ನಲ್ಲಿ ನಿಜಕ್ಕೂ ನಡೆದಿದ್ದೇನು? ಸತ್ಯ ಹೇಳಿದ ಬಾಲಿವುಡ್ ನಟ
Fauzi Prabhas

Updated on: Sep 08, 2026 | 1:21 PM

ಮುಖ್ಯಾಂಶಗಳು

  • ಬಾಲಿವುಡ್ ನಟ ರಾಜೇಶ್ ಶರ್ಮಾ ಗುಣಮುಖರಾಗಿದ್ದಾರೆ.
  • ರಾಜೇಶ್ ಶರ್ಮಾ ಅವರು ಕೆಲ ತಿಂಗಳ ಹಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.
  • ಸೆಟ್​​ನಲ್ಲಿ ನಡೆದ ಅವಘಡದಿಂದ ಹೀಗಾಗಿದೆ ಎನ್ನಲಾಗಿತ್ತು.

ಕೆಲ ತಿಂಗಳ ಹಿಂದೆ ಜನಪ್ರಿಯ ಬಾಲಿವುಡ್ (Bollywood) ನಟ ರಾಜೇಶ್ ಶರ್ಮಾ ಹಠಾತ್ತನೆ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ರಾಜೇಶ್ ಶರ್ಮಾ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು ಸುದ್ದಿ ಹರಡಿತ್ತು, ಪ್ರಭಾಸ್ ಅವರ ‘ಫೌಜಿ’ ಸಿನಿಮಾನಲ್ಲಿ ರಾಜೇಶ್ ನಟಿಸುತ್ತಿದ್ದರು, ಅಲ್ಲಿ ನಡೆದ ಅವಘಡದಿಂದಲೇ ರಾಜೇಶ್ ಅವರಿಗೆ ಅನಾರೋಗ್ಯ ಉಂಟಾಗಿದೆ. ಅವರ ಆಸ್ಪತ್ರೆ ಖರ್ಚನ್ನು ‘ಫೌಜಿ’ ಸಿನಿಮಾದ ನಿರ್ಮಾಪಕರು ನೋಡಿಕೊಳ್ಳಬೇಕು, ಚಿತ್ರತಂಡದ ಮೇಲೆ ದೂರು ದಾಖಲು ಮಾಡಬೇಕು ಎಂದು ಬಾಲಿವುಡ್​ನ ಸಿನಿಮಾ ನಟರ ಸಂಘ ಪತ್ರ ಬರೆದಿತ್ತು. ಆದರೆ ಇದೀಗ ರಾಜೇಶ್ ಅವರು ಗುಣವಾಗಿದ್ದು, ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ನಿಜಕ್ಕೂ ಪ್ರಭಾಸ್ ಸಿನಿಮಾದ ಸೆಟ್​​ನಲ್ಲಿ ನಡೆದಿದ್ದು ಏನೆಂದು ವಿವರಿಸಿದ್ದಾರೆ.

ಈ ವರ್ಷದ ಜುಲೈನಲ್ಲಿ, ನಟ ಪ್ರಭಾಸ್ ಅವರ ಮುಂಬರುವ ‘ಫೌಜಿ’ ಚಿತ್ರದ ಸೆಟ್‌ನಲ್ಲಿ ಕೀಟ ಕಚ್ಚಿದ ಪರಿಣಾಮ ನಟ ರಾಜೇಶ್ ಶರ್ಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಟಿ ಸುದೀಪಾ ಚಟರ್ಜಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದರು. ಆ ಬಳಿಕ ಸಿನಿ ವರ್ಕರ ಸಂಘವು ‘ಫೌಜಿ’ ಚಿತ್ರತಂಡದ ಮೇಲೆ ಆರೋಪಗಳನ್ನು ಮಾಡಿತ್ತು. ನಿರ್ಮಾಪಕರ ಮೇಲೆ ದೂರು ದಾಖಲಿಸಲು ಒತ್ತಾಯಿಸಿದ್ದು, ಆದರೆ ಇದೀಗ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ರಾಜೇಶ್, ಆ ರೀತಿ ಏನೂ ಆಗಿಲ್ಲ ಎಂದು ಹೇಳಿದ್ದಾರೆ.

ವಾಸ್ತವವಾಗಿ ಏನು ನಡೆಯಿತು, ತಮ್ಮ ಹಠಾತ್ ಅನಾರೋಗ್ಯಕ್ಕೆ ಕಾರಣ ಏನು ಎಂಬುದನ್ನು ವಿವರಿಸಿರುವ ರಾಜೇಶ್, ತಾನು ತನ್ನ ಬಲ ಕಾಲಿನಲ್ಲಿ ದೀರ್ಘಕಾಲದಿಂದ ಚರ್ಮದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ತಿಳಿಸಿದರು. ಆರಂಭದಲ್ಲಿ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ತನಗೆ ತಿಳಿದಿರಲಿಲ್ಲ, ಮಧುಮೇಹ ಸಹ ಹೆಚ್ಚಿದ್ದರಿಂದ ಪರಿಸ್ಥಿತಿ ಹದಗೆಟ್ಟಿತ್ತು. ಈಗ ತಮ್ಮ ಚಿಕಿತ್ಸೆ ಮುಗಿದಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ ಮತ್ತು ಒಂದು ವಾರದೊಳಗೆ ಕೆಲಸಕ್ಕೆ ಮರಳುವ ಭರವಸೆಯಿದೆ ಎಂದು ಅವರು ಹೇಳಿದರು.

‘ಫೌಜಿ’ ಸಿನಿಮಾ ಸೆಟ್​​ನಲ್ಲಿ ಕೀಟ ಕಚ್ಚಿದ ವರದಿಗಳನ್ನು ತಳ್ಳಿಹಾಕಿದ ಅವರು, ‘ಇದು ಸುಳ್ಳು ಸುದ್ದಿ. ಪ್ರಭಾಸ್ ಅವರ ಚಿತ್ರದ ಸೆಟ್‌ನಲ್ಲಿ ಏನೂ ಸಂಭವಿಸಿಲ್ಲ. ಅದಕ್ಕೆ ಪ್ರಭಾಸ್ ಆಗಲಿ ಅಥವಾ ಚಿತ್ರತಂಡವಾಗಲಿ ಯಾವುದೇ ರೀತಿಯಲ್ಲಿ ಕಾರಣರಲ್ಲ. ಅವರು (ಚಿತ್ರೆತಂಡವರು) ಒಳ್ಳೆಯ ಜನರು. ನಾನು ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ಏನೂ ಆಗಿರಲಿಲ್ಲ. ನಾನು ಕೋಲ್ಕತ್ತಾಗೆ ವಿಮಾನದಲ್ಲಿ ವಾಪಸ್ ಬಂದ ನಂತರ, ಒಂದೆರಡು ದಿನಗಳಲ್ಲಿ ಪರಿಸ್ಥಿತಿ ಗಂಭೀರವಾಯಿತು. ಏಕೆಂದರೆ ನನ್ನ ಮಧುಮೇಹ ತುಂಬಾ ಹೆಚ್ಚಿತ್ತು ಮತ್ತು ನಾನು ಆರಂಭದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ” ಎಂದರು.

ಇದನ್ನೂ ಓದಿ:ಮೊದಲ ಬಾರಿಗೆ ಪ್ರಭಾಸ್ ಸಿನಿಮಾಕ್ಕೆ ‘ಎ’ ಸರ್ಟಿಫಿಕೇಟ್, ಭವಿಷ್ಯ ನುಡಿದ ನಿರ್ದೇಶಕ

ನನ್ನ ಬಗ್ಗೆ ಕಾಳಜಿ ಇದ್ದ ಕೆಲವರು, ‘ಫೌಜಿ’ ಸಿನಿಮಾ ಸೆಟ್​​ನಲ್ಲಿ ನನಗೆ ಕೀಟ ಕಚ್ಚಿ ಅನಾರೋಗ್ಯ ಉಂಟಾಗಿದೆ ಎಂದು ತಪ್ಪು ತಿಳಿದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಅದರಿಂದ ಸಾಕಷ್ಟು ಗೊಂದಲಗಳು ಸೃಷ್ಟಿಯಾದವು ಎಂದಿದ್ದಾರೆ ರಾಜೇಶ್. ಸತತ ಎರಡು ತಿಂಗಳಿಗೂ ಹೆಚ್ಚು ಸಮಯ ಚಿಕಿತ್ಸೆ ಪಡೆದಿರುವ ರಾಜೇಶ್, ಪ್ರಸ್ತುತ ಗುಣಮುಖರಾಗಿದ್ದು ಕೆಲವೇ ವಾರಗಳಲ್ಲಿ ಚಿತ್ರೀಕರಣಕ್ಕೆ ಮರಳುವುದಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us