ಬಾಡಿ ಶೇಮಿಂಗ್ ವಿರುದ್ಧ ಸಿಡಿದೆದ್ದ ಬಿಪಾಶಾ ಬಸು: ಟ್ರೋಲಿಂಗ್ ಬಗ್ಗೆ ಬಾಲಿವುಡ್ ನಟಿ ಕಿಡಿ
ಹಿಂದಿ ಚಿತ್ರರಂಗದ ಖ್ಯಾತ ನಟಿ ಬಿಪಾಶಾ ಬಸು ಅವರು ಪಾಪರಾಜಿಗಳ ನಡವಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಪಾಪರಾಜಿಗಳು ಉದ್ದೇಶಪೂರ್ವಕವಾಗಿ ತಮಗೆ ಮುಜುಗರ ತರುವ ರೀತಿಯಲ್ಲಿ ಫೋಟೋ ತೆಗೆದಿದ್ದಾರೆ ಎಂದು ಬಿಪಾಶಾ ಅವರು ಆರೋಪಿಸಿದ್ದಾರೆ. ಈ ಬಗ್ಗೆ ಅವರು ಇತ್ತೀಚೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಬಾಲಿವುಡ್ ನಟಿ ಬಿಪಾಶಾ ಬಸು ಅವರು ಫಿಟ್‌ನೆಸ್ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಆದರೆ ಅವರಿಗೂ ಕೂಡ ಬಾಡಿ ಶೇಮಿಂಗ್ ಕಾಟ ತಪ್ಪಲಿಲ್ಲ. ಇತ್ತೀಚೆಗೆ ತಾಯ್ತನದ ನಂತರ ಮಹಿಳೆಯರ ಶರೀರದ ಮೇಲೆ ಸಮಾಜ ಮತ್ತು ಪಾಪರಾಜಿಗಳು ಹೇರುವ ಅಸಹಜ ನಿರೀಕ್ಷೆಗಳ ಬಗ್ಗೆ ಬಿಪಾಶಾ ಬಸು ಅವರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದರು.
ಹೆರಿಗೆಯ ನಂತರ ತಮ್ಮ ದೇಹದ ತೂಕ ಮತ್ತು ಆಕಾರದ ಕುರಿತು ಎದುರಿಸಬೇಕಾಗಿ ಬಂದ ತೀವ್ರ ಟ್ರೋಲಿಂಗ್ ಹಾಗೂ ಬಾಡಿ ಶೇಮಿಂಗ್ ಘಟನೆಗಳನ್ನು ಬಿಪಾಶಾ ಬಸು ಹಂಚಿಕೊಂಡಿದ್ದಾರೆ. 2022ರ ನವೆಂಬರ್ 12ರಂದು ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ನಂತರ ಅವರ ದೇಹದ ಬದಲಾವಣೆಗಳನ್ನು ಸಮಾಜ ಸ್ವೀಕರಿಸುವ ರೀತಿಯನ್ನು ಪ್ರಶ್ನಿಸಿದ್ದಾರೆ.
‘20ರ ಹರೆಯದ ಶರೀರವನ್ನು 40ರಲ್ಲಿ ನಿರೀಕ್ಷಿಸುತ್ತಾರೆ’ ‘ಮಹಿಳೆಯರ ದೇಹದ ಕುರಿತು ನಡೆಯುವ ಚರ್ಚೆಗಳು ಇಂದಿಗೂ ಬಹಳ ವಿಚಿತ್ರವಾಗಿವೆ. ನೀವು ಮಗುವಿಗೆ ಜನ್ಮ ನೀಡಿದ ತಕ್ಷಣ, 40ರ ಹರೆಯದಲ್ಲಿದ್ದರೂ ಮ್ಯಾಜಿಕ್‌ನಂತೆ 20ರ ಹರೆಯದ ಫಿಟ್‌ನೆಸ್‌ಗೆ ಮರಳಬೇಕು ಎಂದು ಜನರು ನಿರೀಕ್ಷಿಸುತ್ತಾರೆ. ಹಾಗೆ ತಕ್ಷಣ ಹಳೆಯ ರೂಪಕ್ಕೆ ಮರಳದಿದ್ದರೆ ನಿಮ್ಮನ್ನು ತೀವ್ರವಾಗಿ ಟ್ರೋಲ್ ಮಾಡಲಾಗುತ್ತದೆ’ ಎಂದು ಬಿಪಾಶಾ ಬೇಸರ ವ್ಯಕ್ತಪಡಿಸಿದ್ದಾರೆ.
‘ಮಗುವಿನ ಪಾಲನೆ, ವೈಯಕ್ತಿಕ ಜೀವನ ಮತ್ತು ಹೊಸ ಜೀವನಶೈಲಿಗೆ ಹೊಂದಿಕೊಳ್ಳಲು ಒಬ್ಬ ಮಹಿಳೆ ಎಷ್ಟು ಶ್ರಮಿಸುತ್ತಿದ್ದಾಳೆ ಎಂಬುದನ್ನು ಯಾರೂ ಗಮನಿಸುವುದಿಲ್ಲ. ಪ್ರತಿಯೊಬ್ಬರಿಗೂ ತಕ್ಷಣ ಫಲಿತಾಂಶ ಬೇಕು. ಆದರೆ, ನಾನು ಅತ್ಯಂತ ಆತ್ಮವಿಶ್ವಾಸವುಳ್ಳ ವ್ಯಕ್ತಿಯಾಗಿದ್ದು, ಇಂತಹ ಟ್ರೋಲಿಂಗ್‌ಗಳು ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ. ನನ್ನ ಪ್ರಯಾಣ ಮತ್ತು ಶ್ರಮ ನನಗೆ ಗೊತ್ತು. ಹೊರಗಿನ ಅನಗತ್ಯ ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಬಿಪಾಶಾ ಅವರು ಧೈರ್ಯವಾಗಿ ಹೇಳಿದ್ದಾರೆ.
ಇದನ್ನೂ ಓದಿ: ನಟಿ ಕೀರ್ತಿ ಸುರೇಶ್ಗೆ ಬಾಡಿ ಶೇಮಿಂಗ್; ಸರ್ಜರಿ ವದಂತಿಗಳಿಗೆ ಖಡಕ್ ತಿರುಗೇಟು
2015ರಲ್ಲಿ ತೆರೆಕಂಡ ‘ಅಲೋನ್’ ಚಿತ್ರದ ಚಿತ್ರೀಕರಣದ ವೇಳೆ ಭೇಟಿಯಾದ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್, 2016ರ ಏಪ್ರಿಲ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರಸ್ತುತ ಈ ದಂಪತಿ ತಮ್ಮ ಮಗಳು ದೇವಿಯೊಂದಿಗೆ ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಸಿನಿಮಾಗಳಿಂದ ಕೊಂಚ ಬಿಡುವು ಪಡೆದಿರುವ ಬಿಪಾಶಾ, ಕೊನೆಯದಾಗಿ ಎಂಎಕ್ಸ್ ಪ್ಲೇಯರ್‌ನಲ್ಲಿ ಪ್ರಸಾರವಾದ ‘ಡೇಂಜರಸ್’ ವೆಬ್ ಸರಣಿಯಲ್ಲಿ ನಟಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




