ಜನಪ್ರಿಯ ನಟಿ ಪ್ರಗತಿ ಈಗ ವೇಟ್ಲಿಫ್ಟಿಂಗ್ ಚಾಂಪಿಯನ್
Pragathi Mahavadi movie: ತೆಲುಗು ಚಿತ್ರರಂಗದಲ್ಲಿ ದಶಕಗಳಿಂದಲೂ ನಾಯಕಿಯಾಗಿ, ಪೋಷಕ ನಟಿಯಾಗಿ ತೊಡಗಿಸಿಕೊಂಡಿರುವ ಪ್ರಗತಿ ತಮ್ಮ 50ನೇ ವಯಸ್ಸಿನಲ್ಲಿ, ಅಪೂರಪವಾದ ಕನಸೊಂದನ್ನು ಕಂಡು ಅದನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಬಹುತೇಕ ಮಹಿಳೆಯರು 50ರ ವಯಸ್ಸಿಗೆ ಮನೆ-ಮಕ್ಕಳು, ಮೊಮ್ಮಕ್ಕಳ ಸಾಧನೆಗಳನ್ನು ಸಂಭ್ರಮಿಸುತ್ತಾ, ಧಾರಾವಾಹಿಗಳನ್ನು ನೋಡುತ್ತಾ ‘ಆರಾಮ’ವಾಗಿ ಕಾಲ ಕಳೆಯುವ ಹೊತ್ತಿನಲ್ಲಿ ಪ್ರಗತಿ ಚಾಂಪಿಯನ್ ಎನಿಸಿಕೊಂಡಿದ್ದಾರೆ.

ಮುಖ್ಯಾಂಶಗಳು
- ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂದು ತೋರಿಸಿದ ನಟಿ ಪ್ರಗತಿ.
- 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟಿ ಪ್ರಗತಿ.
- ತಮ್ಮ 50ನೇ ವಯಸ್ಸಿನಲ್ಲಿ ಚಾಂಪಿಯನ್ ಎನಿಸಿಕೊಂಡಿದ್ದಾರೆ ಪ್ರಗತಿ
ಸಾಧನೆಗೆ ವಯಸ್ಸು, ಹೆಣ್ಣು-ಗಂಡು ಭೇದವಿಲ್ಲ ಎಂಬುದಕ್ಕೆ ಭಾರತದಲ್ಲಿ ಹಲವಾರು ಉದಾಹರಣೆಗಳಿವೆ. ಇದೀಗ ಇದಕ್ಕೆ ತಾಜಾ ಸೇರ್ಪಡೆ ಖ್ಯಾತ ತೆಲುಗು ನಟಿ ಪ್ರಗತಿ. ತೆಲುಗು ಚಿತ್ರರಂಗದಲ್ಲಿ ದಶಕಗಳಿಂದಲೂ ನಾಯಕಿಯಾಗಿ, ಪೋಷಕ ನಟಿಯಾಗಿ ತೊಡಗಿಸಿಕೊಂಡಿರುವ ಪ್ರಗತಿ ತಮ್ಮ 50ನೇ ವಯಸ್ಸಿನಲ್ಲಿ, ಅಪೂರಪವಾದ ಕನಸೊಂದನ್ನು ಕಂಡು ಅದನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಬಹುತೇಕ ಮಹಿಳೆಯರು 50ರ ವಯಸ್ಸಿಗೆ ಮನೆ-ಮಕ್ಕಳು, ಮೊಮ್ಮಕ್ಕಳ ಸಾಧನೆಗಳನ್ನು ಸಂಭ್ರಮಿಸುತ್ತಾ, ಧಾರಾವಾಹಿಗಳನ್ನು ನೋಡುತ್ತಾ ‘ಆರಾಮ’ವಾಗಿ ಕಾಲ ಕಳೆಯುವ ಹೊತ್ತಿನಲ್ಲಿ ಪ್ರಗತಿ ಚಾಂಪಿಯನ್ ಎನಿಸಿಕೊಂಡಿದ್ದಾರೆ.
ಪ್ರಗತಿ ಅವರು ವೇಟ್ಲಿಫ್ಟಿಂಗ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆದ್ದಿದ್ದಾರೆ. 2025ರ ಆರಂಭದಲ್ಲಿ, ಪ್ರಗತಿಯವರು ಕೇರಳದಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 115 ಕೆ.ಜಿ ಸ್ಕ್ವಾಟ್, 50 ಕೆ.ಜಿ ಬೆಂಚ್ ಪ್ರೆಸ್ ಮತ್ತು 122.5 ಕೆ.ಜಿ ಡೆಡ್‌ಲಿಫ್ಟ್ ಮಾಡುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡರು. ಆ ಬಳಿಕ ಅವರು ಏಷ್ಯನ್ ಓಪನ್ ಮತ್ತು ಮಾಸ್ಟರ್ಸ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅಲ್ಲಿ ಅವರು ಡೆಡ್‌ಲಿಫ್ಟ್‌ನಲ್ಲಿ ಚಿನ್ನದ ಪದಕವನ್ನು ಪಡೆದರು ಮತ್ತು ಸ್ಕ್ವಾಟ್, ಬೆಂಚ್ ಪ್ರೆಸ್ ಹಾಗೂ ಸಮಗ್ರ ಪ್ರದರ್ಶನದಲ್ಲಿ ಮೂರು ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡರು. ಈ ಎಲ್ಲ ಸಾಧನೆಯನ್ನು ಪ್ರಗತಿ ಮಾಡಿರುವುದು ತಮ್ಮ 50ನೇ ವಯಸ್ಸಿನಲ್ಲಿ ಎಂಬುದು ವಿಶೇಷ.
ತೆಲುಗು ಚಿತ್ರರಂಗದ ಬಲು ಬೇಡಿಕೆಯ ಪೋಷಕ ನಟಿ ಆಗಿರುವ ಪ್ರಗತಿ ಅವರು ಬಹುತೇಕ ಎಲ್ಲ ಸ್ಟಾರ್ ನಟರುಗಳ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ, ಈಗಲೂ ನಟಿಸುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಾ ಆರಾಮವಾಗಿ ಕಾಲ ಕಳೆಯುವ ಎಲ್ಲ ಅವಕಾಶವೂ ಪ್ರಗತಿ ಅವರಿಗಿತ್ತು. ಆದರೆ ಅದನ್ನು ನಿರಾಕರಿಸಿ ಅವರು ತಮ್ಮ ದೇಹದ ಆರೋಗ್ಯ ಮತ್ತು ಸಾಧಿಸುವ ಛಲದಿಂದ ವೇಟ್ಲಿಫ್ಟಿಂಗ್ ಕಡೆ ಗಮನ ಹರಿಸಿದರು. ಈಗ ಅವರ ಸಾಧನೆಯನ್ನು ಜನ ಕೊಂಡಾಡುತ್ತಿದ್ದಾರೆ. ನಟನೆಗಿಂತಲೂ ಹೆಚ್ಚಿನ ಆತ್ಮತೃಪ್ತಿಯನ್ನು ತಮಗೆ ವೇಟ್ಲಿಫ್ಟಿಂಗ್ ನೀಡಿದೆ ಎನ್ನುತ್ತಾರೆ ಪ್ರಗತಿ.
ಇದನ್ನೂ ಓದಿ:‘ವಾರಣಾಸಿ’ ಸಿನಿಮಾಕ್ಕೆ ಮೊದಲಿದ್ದ ಹೆಸರೇನು? ವಿಲನ್ ಪಾತ್ರದ ಹಿನ್ನೆಲೆ ಗೊತ್ತೆ?
1993 ರಿಂದಲೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಪ್ರಗತಿ, ಇತ್ತೀಚೆಗೆ ಕಾಲವಾದ ಭಾಗ್ಯರಾಜ್ ಅವರ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಆರಂಭದ ಕೆಲ ವರ್ಷ ನಾಯಕಿಯಾಗಿ ನಟಿಸಿದರಾದರೂ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರಾಗಿದ್ದರು. ಆದರೆ ಕೇವಲ ಮೂರೇ ವರ್ಷಕ್ಕೆ ಚಿತ್ರರಂಗಕ್ಕೆ ಮರಳಿ, ಹಲವಾರು ಧಾರಾವಾಹಿ, 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 2002 ರಲ್ಲಿ ಬಿಡುಗಡೆ ಆದ ‘ಪ್ರೇಮಖೈದಿ’, 2003 ರಲ್ಲಿ ಬಿಡುಗಡೆ ಆದ ‘ಹೃದಯವಂತ’, 2011 ರ ‘ವಿನಾಯಕ ಗೆಳೆಯರ ಬಳಗ’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗಲೂ ಅವರು ಸಿನಿಮಾ ಮತ್ತು ಟಿವಿಗಳಲ್ಲಿ ಸಕ್ರಿಯರಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




