ಪ್ರಧಾನಿ ಮೋದಿ ಅವರಿಗೆ ‘ಆರ್ಕೆಸ್ಟ್ರಾ ಮೈಸೂರು’ ಚಿತ್ರದ ಟ್ರೈಲರ್ ನೋಡಿ ಎಂದ ನಟಿ ರಮ್ಯಾ..!
Orchestra Mysuru Trailer: ಮೈಸೂರಿನ ಆರ್ಕೆಸ್ಟ್ರಾ ಸಂಸ್ಕೃತಿಯನ್ನು ಇಟ್ಟುಕೊಂಡು ಕಥೆ ಹೆಣೆದಿರುವ ಸುನೀಲ್ ಟ್ರೈಲರ್ ಮೂಲಕವೇ ಮೋಡಿ ಮಾಡುವ ಸೂಚನೆ ನೀಡಿದ್ದಾರೆ.
ವಿಶ್ವ ಯೋಗ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೈಸೂರಿಗೆ ಭೇಟಿ ನೀಡಿದ್ದರು. ಇತ್ತ ನಾನಾ ಕಾರ್ಯಕ್ರಮಗಳಿಗಾಗಿ ಕರ್ನಾಟಕ ಪ್ರವಾಸದಲ್ಲಿರುವ ಮೋದಿ ಅವರಿಗೆ ‘ಆರ್ಕೆಸ್ಟ್ರಾ ಮೈಸೂರು’ ಚಿತ್ರದ ಟ್ರೈಲರ್ ನೋಡುವಂತೆ ನಟಿ ರಮ್ಯಾ ಮನವಿ ಮಾಡಿರುವುದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರಧಾನಿ ಮೋದಿ ಅವರನ್ನು ಮೈಸೂರಿಗೆ ಟ್ವಿಟರ್ ಮೂಲಕ ಸ್ವಾಗತಿಸಿದ ಕಾಂಗ್ರೆಸ್ನ ಮಾಜಿ ಸಂಸದೆ ರಮ್ಯಾ, ಪ್ರಧಾನಿ ಅವರಿಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳೆಂದರೆ…
ನಮ್ಮ ಮೈಸೂರಿಗೆ ಸುಸ್ವಾಗತ ಪ್ರಧಾನಿ ನರೇಂದ್ರ ಮೋದಿ ಅವರೆ…ಸಮಯಾವಕಾಶವಿದ್ದಲ್ಲಿ ಮೈಸೂರಿನಲ್ಲಿ ಮಾಡಬೇಕಾದ ಕೆಲಸಗಳ ಪಟ್ಟಿ..
1. ರಸ್ತೆಗಳನ್ನು ಉದ್ಘಾಟನೆ ಮಾಡಿ. ಖಂಡಿತವಾಗಿಯೂ ನಮಗೆ ಅದರ ಅವಶ್ಯಕತೆ ತುಂಬಾ ಇದೆ. ಇದಕ್ಕೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದಗಳು.
2. ದಯವಿಟ್ಟು ನಮ್ಮ ಪ್ರಸಿದ್ಧ ಮೈಲಾರಿ ಬೆಣ್ಣೆ ದೋಸೆಯನ್ನು ಸವಿಯಿರಿ. ಇಂತಹ ಮೃದುವಾದ ದೋಸೆ ನೀವು ತಿಂದಿರುವುದಿಲ್ಲ.
3- ಹಾಗೆಯೇ ಮೈಸೂರಿನ ಆರ್ಕೆಸ್ಟ್ರಾ ಸಂಸ್ಕೃತಿಯ ಬಗ್ಗೆ ತಿಳಿಯಬೇಕಿದ್ದರೆ ‘ಆರ್ಕೆಸ್ಟ್ರಾ ಮೈಸೂರು’ ಟ್ರೈಲರ್ ಅನ್ನು ವೀಕ್ಷಿಸಿ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.
ಇದೀಗ ರಮ್ಯಾ ಅವರ ಈ ಮನವಿಯ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇತ್ತ ಇದೇ ಟ್ರೈಲರ್ ಅನ್ನು ರಮ್ಯಾ ಯಾಕಾಗಿ ಪ್ರಧಾನಿ ಶಿಫಾರಸ್ಸು ಮಾಡಿದ್ದಾರೆ ಎಂದು ಇತರರು ಕೂಡ ಆರ್ಕೆಸ್ಟ್ರಾ ಮೈಸೂರು ಟ್ರೈಲರ್ ವೀಕ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಟ್ರೈಲರ್ ನೋಡಿ ಹೊಸ ಚಿತ್ರತಂಡದ ಪ್ರಯತ್ನಕ್ಕೆ ಬಹುಪರಾಕ್ ಅನ್ನುತ್ತಿದ್ದಾರೆ.
ಆರ್ಕೆಸ್ಟ್ರಾ ಮೈಸೂರು ಚಿತ್ರವು ಸ್ಯಾಂಡಲ್ವುಡ್ನಲ್ಲಿ ಬರುತ್ತಿರುವ ಹೊಸ ಸಿನಿಮಾ. ಈ ಚಿತ್ರಕ್ಕೆ ಡಾಲಿ ಧನಂಜಯ್ ಬಂಡವಾಳ ಹೂಡಿದ್ದಾರೆ. ಇನ್ನು ಚಿತ್ರದಲ್ಲಿ ಪೂರ್ಣಚಂದ್ರ ಮೈಸೂರು, ದಿಲೀಪ್ ರಾಜ್ ಮುಂತಾದವರು ನಟಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ನವ ನಿರ್ದೇಶಕ ಸುನೀಲ್.
ಮೈಸೂರಿನ ಆರ್ಕೆಸ್ಟ್ರಾ ಸಂಸ್ಕೃತಿಯನ್ನು ಇಟ್ಟುಕೊಂಡು ಕಥೆ ಹೆಣೆದಿರುವ ಸುನೀಲ್ ಟ್ರೈಲರ್ ಮೂಲಕವೇ ಮೋಡಿ ಮಾಡುವ ಸೂಚನೆ ನೀಡಿದ್ದಾರೆ. ಇತ್ತ ನಟಿ ರಮ್ಯಾ ಇದೇ ಚಿತ್ರದ ಟ್ರೈಲರ್ ಅನ್ನು ಪ್ರಧಾನಿ ಮೋದಿಗೆ ಮೈಸೂರಿನ ಆರ್ಕೆಸ್ಟ್ರಾ ಕಲ್ಚರ್ ತಿಳಿಸಲು ಶಿಫಾರಸ್ಸು ಮಾಡುವ ಮೂಲಕ ಚಿತ್ರಕ್ಕೆ ಭರ್ಜರಿ ಪ್ರಚಾರ ಕೊಟ್ಟಿದ್ದಾರೆ. ಅಂದಹಾಗೆ ಈ ಚಿತ್ರದ ಟ್ರೈಲರ್ ಅನ್ನು ನಟಿ ರಮ್ಯಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಿದ್ದರು ಎಂಬುದು ವಿಶೇಷ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:06 pm, Tue, 21 June 22