ಚೆನ್ನಾಗಿ ಕುಡಿದು ಕಮಲ್ ಹಾಸನ್ಗೆ ಕಾಲ್ ಮಾಡಿದ್ದ ರಜನಿಕಾಂತ್ ಹೇಳಿದ್ದೇನು?
ರಜನೀಕಾಂತ್ ಮತ್ತು ಕಮಲ್ ಹಾಸನ್ ತಮಿಳು ಚಿತ್ರರಂಗದ ಇಬ್ಬರು ಮೇರು ನಟರು. ಬಹುತೇಕ ಒಂದೇ ಅವಧಿಯಲ್ಲಿ ಸಿನಿಮಾ ಪಯಣ ಪ್ರಾರಂಭಿಸಿದ ಇಬ್ಬರೂ ದಶಕಗಳ ಕಾಲ ಚಿತ್ರರಂಗ ಆಳಿದ್ದಾರೆ. ಒಮ್ಮೆ ಮಧ್ಯರಾತ್ರಿ, ಚೆನ್ನಾಗಿ ಕುಡಿದು, ರಜನೀಕಾಂತ್, ಕಮಲ್ ಹಾಸನ್ಗೆ ಕರೆ ಮಾಡಿದ್ದರಂತೆ. ಮುಂದೇನಾಯ್ತು?
ಕನ್ನಡ ಸೇರಿದಂತೆ ತೆಲುಗು, ಮಲಯಾಳಂಗಳಲ್ಲಿ ದೊಡ್ಡ ನಟರ ಅಭಿಮಾನಿಗಳ ಮಧ್ಯೆ ಫ್ಯಾನ್ಸ್ ವಾರ್ ಮೊದಲಿನಿಂದಲೂ ಇದೆ. ಸ್ಟಾರ್ ನಟರೂ ಸಹ ಒಬ್ಬರ ಸಿನಿಮಾವನ್ನು ಇನ್ನೊಬ್ಬರು ಹೊಗಳುವುದು ಕಡಿಮೆ. ಆದರೆ ತಮಿಳಿನಲ್ಲಿ ಹಲವು ದಶಕಗಳಿಂದಲೂ ಸೂಪರ್ ಸ್ಟಾರ್ ಆಗಿರುವ ಕಮಲ್ ಹಾಸನ್ ಹಾಗೂ ರಜನಿಕಾಂತ್ ತಮ್ಮ ಮಧ್ಯೆ ಈ ಅನಾರೋಗ್ಯಕರ ಸ್ಪರ್ಧೆಗೆ ಅವಕಾಶವನ್ನೇ ಮಾಡಿಕೊಟ್ಟಿಲ್ಲ. ಪರಸ್ಪರ ಸಿನಿಮಾಗಳನ್ನು ನೋಡುತ್ತಾ ಕೊಂಡಾಡುತ್ತಾ, ಪರಸ್ಪರರನ್ನು ಮೆಚ್ಚಿಕೊಳ್ಳುತ್ತಾ, ಒಬ್ಬರಿಗೊಬ್ಬರು ಬೆಂಬಲ ನೀಡುತ್ತಲೇ ಬಂದಿದ್ದಾರೆ.
ರಜನಿಕಾಂತ್ ಅಂತೂ ಕಮಲ್ ಹಾಸನ್ರ ನಟನೆಯನ್ನು ಹಲವು ಬಾರಿ ಕೊಂಡಾಡಿದ್ದಾರೆ. ಕೇವಲ ವೇದಿಕೆ ಮೇಲಲ್ಲ ಖುದ್ದಾಗಿ ಸಹ. ಕಮಲ್ ಹಾಸನ್ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾದ ‘ನಾಯಗನ್’ ಭಾರತದ ಸಿನಿಮಾ ರಂಗದ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದು. ಮಣಿರತ್ನಂ ನಿರ್ದೇಶನ ಮಾಡಿ ಕಮಲ್ ನಟಿಸಿದ್ದ ಆ ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ. ಆಸ್ಕರ್ ಸಹ ಭಾರತದಿಂದ ಕಳಿಸಲ್ಪಟ್ಟಿತ್ತು ಆ ಸಿನಿಮಾ.
‘ನಾಯಗನ್’ ಸಿನಿಮಾ ನೋಡಿ ಬಂದ ಕಮಲ್ ಹಾಸನ್ ಬಹಳ ಡಿಸ್ಟರ್ಬ್ ಆಗಿದ್ದರಂತೆ. ಅವರ ಕೆಲವು ಆಪ್ತರು ಸಹ ‘ನಾಯಗನ್’ ಸಿನಿಮಾ ನೋಡಿ ಚಕಿತರಾಗಿಬಿಟ್ಟಿದ್ದರಂತೆ. ರಜನೀಕಾಂತ್ ಅವರ ಬಳಿ, ‘ನಾಯಗನ್’ ಸಿನಿಮಾ ನೋಡಿ ಹುಚ್ಚು ಹಿಡಿದಂತಾಗಿದೆ, ನೀವು ಇಲ್ಲಿಯವರೆಗೆ ಅಂಥಹಾ ಸಿನಿಮಾ ಮಾಡಿಲ್ಲ’ ಎಂದರಂತೆ. ಅದಕ್ಕೆ ರಜನೀಕಾಂತ್, ‘ನಾನು ‘ನಾಯಗನ್’ ಸಿನಿಮಾ ನೋಡಿದೆ, ಸಿನಿಮಾ ನೋಡಿ ಬಂದವನೇ ಒಂದು ಪೆಗ್ ಎಣ್ಣೆ ಹೊಡೆದೆ, ನನಗೆ ನಶೆ ಏರಲಿಲ್ಲ, ಅದಾದ ಬಳಿಕ ಇನ್ನೊಂದು ಪೆಗ್ ರಾ ಕುಡಿದೆ ನನಗೆ ನಶೆ ಏರಲಿಲ್ಲ, ಆ ಬಳಿಕ ಇನ್ನೊಂದು ಪೆಗ್ ಕುಡಿದೆ ಆಗಲೂ ಸಹ ನನಗೆ ನಶೆ ಏರಲಿಲ್ಲ. ಕೂಡಲೇ ನಾನು ಕಮಲ್ ಹಾಸನ್ಗೆ ಫೋನ್ ಮಾಡಿದೆ, ‘ಏನು ರಜನೀಯವರೆ’ ಎಂದರು ಕಮಲ್, ‘ಸರ್, ಮೂರು ಪೆಗ್ ಕುಡಿದಿದ್ದೇನೆ ಆದರೆ ನಿಮ್ಮ ನಾಯಗನ್ ನಶೆಯ ಮುಂದೆ ಯಾವ ನಶೆಯೂ ಇಲ್ಲ’ ಎಂದು ಹೇಳಿ ಫೋನ್ ಇಟ್ಟರಂತೆ ರಜಿನಿ.
ಇದನ್ನೂ ಓದಿ:ಮೋದಿ ಪ್ರಮಾಣವಚನದಲ್ಲಿ ಭಾಗಿಯಾಗಲಿದ್ದಾರೆ ರಜನೀಕಾಂತ್, ಅನಿಲ್ ಕಪೂರ್
ಇದೊಂದೇ ಅಲ್ಲ ರಜನೀಕಾಂತ್ ಹಲವು ಬಾರಿ ಕಮಲ್ ಹಾಸನ್ರ ನಟನೆಯನ್ನು, ಅವರ ಸಿನಿಮಾಗಳನ್ನು ಮನಸಾರೆ ಕೊಂಡಾಡಿದ್ದಾರೆ. ‘ನಾನು ಮುಟ್ಟಿದ್ದೆಲ್ಲವನ್ನೂ ಕಮಲ್ ಮುಟ್ಟಿದ್ದಾರೆ, ಆದರೆ ಕಮಲ್ ಮುಟ್ಟಿದ್ದನ್ನು ನನ್ನ ಕೈಯಿಂದ ಮುಟ್ಟಲಾಗಿಲ್ಲ, ಮುಟ್ಟಲಾಗುವುದೂ ಇಲ್ಲ. ಸರಸ್ವತಿಯ ಸ್ವಂತ ಪುತ್ರ ಕಮಲ್ ಹಾಸನ್, ಉಳಿದವರೆಲ್ಲ ದತ್ತು ಪುತ್ರರು’ ಎಂದು ರಜನೀಕಾಂತ್, ಕಮಲ್ ಹಾಸನ್ ಬಗ್ಗೆ ವೇದಿಕೆಯೊಂದರಲ್ಲಿ ಹೇಳಿದ್ದರು.
ಅಸಲಿಗೆ ಕಮಲ್ ಹಾಸನ್ರಿಗಿಂತಲೂ ರಜನೀಕಾಂತ್ ರ ಸಿನಿಮಾಗಳು ಹೆಚ್ಚು ಯಶಸ್ವಿಯಾಗಿವೆ. ಬ್ಲಾಕ್ ಬಸ್ಟರ್ ಎನಿಸಿಕೊಂಡಿವೆ. ರಜನೀಕಾಂತ್ಗೆ ಸಿಕ್ಕಷ್ಟು ಯಶಸ್ಸು ಕಮಲ್ ಹಾಸನ್ಗೆ ಸಿಕ್ಕಿಲ್ಲ. ಆದರೆ ಕಮಲ್ ಹಾಸನ್ ಒಬ್ಬ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಮಾಡಿರುವಷ್ಟು ಪ್ರಯೋಗಗಳು, ಸಿನಿಮಾ ರಂಗಕ್ಕೆ ನೀಡಿದ ಕಾಣ್ಕೆಯನ್ನು ರಜನೀಕಾಂತ್ ನೀಡಲಾಗಿಲ್ಲ. ಇಬ್ಬರೂ ತಮಿಳು ಚಿತ್ರರಂಗದ ದಂತಕತೆ, ಆದರೆ ಪರಸ್ಪರರ ಕೆಲಸದ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಗೌರವ ಪ್ರೀತಿ ಇಟ್ಟುಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ