
ರಜನೀಕಾಂತ್ (Rajinikanth) ನಟನೆಯ ‘ಲಾಲ್ ಸಲಾಂ’ (Lal Salaam) ಸಿನಿಮಾ ಕಳೆದ ತಿಂಗಳು ಬಿಡುಗಡೆ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋತಿತು. ಸಿನಿಮಾವನ್ನು ರಜನೀಕಾಂತ್ರ ಪುತ್ರಿ ಐಶ್ವರ್ಯಾ ರಜನೀಕಾಂತ್ ನಿರ್ದೇಶನ ಮಾಡಿದ್ದರು. ಸಿನಿಮಾ ಬಿಡುಗಡೆಗೆ ಮುನ್ನವೇ ದೊಡ್ಡ ಆಘಾತವೊಂದು ಐಶ್ವರ್ಯಾಗೆ ಎದುರಾಗಿತ್ತು, 21 ದಿನಗಳ ಕಾಲ ಶೂಟಿಂಗ್ ಮಾಡಿದ್ದ ದೃಶ್ಯಗಳಿದ್ದ ಹಾರ್ಡ್ಡಿಸ್ಕ್ ಕಾಣೆಯಾಗಿತ್ತು. ಹಾರ್ಡ್ ಡಿಸ್ಕ್ ಕಾಣೆಯಾಗಿರುವ ಬಗ್ಗೆ ಆಗಲೇ ವರದಿಗಳು ಹರಿದಾಡಿದ್ದವು, ಈಗ ಐಶ್ವರ್ಯಾ ರಜನೀಕಾಂತ್ ಆ ಬಗ್ಗೆ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಐಶ್ವರ್ಯಾ ರಜನೀಕಾಂತ್, ‘ನಾವು ಚಿತ್ರೀಕರಣ ಮಾಡಿದ ದೃಶ್ಯಗಳನ್ನು ಕಳೆದುಕೊಂಡ ವರದಿ ನಿಜ. 21 ದಿನಗಳ ಕಾಲ ಶೂಟಿಂಗ್ ಮಾಡಿದ್ದ ದೃಶ್ಯಗಳನ್ನು ನಾವು ಕಳೆದುಕೊಂಡೆವು. ಅದು ಹೇಗಾಯ್ತು ಎಂಬುದು ನಮಗೂ ಗೊತ್ತಿಲ್ಲ. ಹೀಗೂ ಆಗುತ್ತದೆಯಾ ಎಂದು ಘಟನೆ ನಡೆದ ಬಳಿಕ ಅನ್ನಿಸಿತು. ಇಡೀ ಚಿತ್ರತಂಡಕ್ಕೆ ಅದು ಬಹಳ ದೊಡ್ಡ ಆಘಾತ ತಂದೊಡ್ಡಿತು’ ಎಂದಿದ್ದಾರೆ ಐಶ್ವರ್ಯಾ ರಜನೀಕಾಂತ್.
‘ನಾವು ಒಂದು ಕ್ರಿಕೆಟ್ ಪಂದ್ಯವನ್ನು ಶೂಟ್ ಮಾಡಿದ್ದೆವು, 20 ಕ್ಯಾಮೆರಾಗಳನ್ನು ಬಳಸಿ ಪಂದ್ಯವನ್ನು ಶೂಟಿಂಗ್ ಮಾಡಿದ್ದೆವು, ನಿಜವಾದ ಕ್ರಿಕೆಟ್ ಪಂದ್ಯದಂತೆ ಅನಿಸಬೇಕೆಂಬ ಕಾರಣಕ್ಕೆ ಹೆಚ್ಚು ಖರ್ಚು ಮಾಡಿ ಆ ದೃಶ್ಯ ಶೂಟ್ ಮಾಡಿದ್ದೆವು. 20 ಕ್ಯಾಮೆರಾಗಳು ಫುಟೇಜ್ ಸಹ ಹೋಯ್ತು. ಅದು ಮಾತ್ರವೇ ಅಲ್ಲದೆ, ಹಲವು ನಟರ ದೃಶ್ಯಗಳನ್ನು ಶೂಟ್ ಮಾಡಿದ್ದೆವು ಎಲ್ಲವೂ ಹೊರಟು ಹೋಯ್ತು. ಬೇಜವಾಬ್ದಾರಿತನದಿಂದಲೇ ಹೀಗಾಯ್ತು ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು’ ಎಂದಿದ್ದಾರೆ ಐಶ್ವರ್ಯಾ.
ಇದನ್ನೂ ಓದಿ:ದಿನಕ್ಕೆ ಕೋಟಿ ಸಂಭಾವನೆ ಪಡೆವ ರಜನೀಕಾಂತ್ ಮೊದಲ ಸಿನಿಮಾಕ್ಕೆ ಎಷ್ಟು ಪಡೆದಿದ್ದರು?
‘ದೃಶ್ಯಗಳನ್ನು ಕಳೆದುಕೊಂಡ ಬಳಿಕ ನಾವು ನಮ್ಮ ಕತೆಯಲ್ಲಿ ಹಲವು ಕಾಂಪ್ರೊಮೈಸ್ಗಳನ್ನು ಮಾಡಿಕೊಳ್ಳಬೇಕಾಯ್ತು. ಹಲವು ದೃಶ್ಯಗಳನ್ನು ಬೇರೆ ರೀತಿ ಎಡಿಟ್ ಮಾಡಬೇಕಾಯ್ತು, ಬೇರೆ ರೀತಿಯ ಚಿತ್ರೀಕರಣವನ್ನು ಮಾಡಬೇಕಾಯ್ತು. ಹಲವು ನಟರ ಲುಕ್ಗಳು ಬದಲಾಗಿಬಿಟ್ಟಿದ್ದರಿಂದ ನಾವು ಮತ್ತೆ ಶೂಟಿಂಗ್ ಸಹ ಮಾಡುವಂತಿರಲಿಲ್ಲ. ಬಹಳ ದೊಡ್ಡ ಕಾಂಪ್ರೊಮೈಸ್ ಅನ್ನು ನಿರ್ದೇಶಕಿಯಾಗಿ ನಾನು ಮಾಡಿಕೊಳ್ಳಬೇಕಾಯ್ತು’ ಎಂದಿದ್ದಾರೆ ಐಶ್ವರ್ಯಾ ರಜನೀಕಾಂತ್.
‘ಅಪ್ಪ (ರಜನೀಕಾಂತ್) ಸೇರಿದಂತೆ ಇನ್ನು ಕೆಲವು ನಟರು ಮರುಚಿತ್ರೀಕರಣ ಮಾಡೋಣ ಎಂದರು. ಆದರೆ ಅದು ಸಾಧ್ಯವಿರಲಿಲ್ಲ. ಅಲ್ಲದೆ ಅದರ ಬಜೆಟ್ ಬಹಳ ಹೆಚ್ಚಾಗಿಬಿಡುತ್ತಿತ್ತು. ಹಾಗಾಗಿ ಎಡಿಟ್ನಲ್ಲಿಯೇ ಎಲ್ಲವನ್ನೂ ಸರಿ ಮಾಡುವ ಪ್ರಯತ್ನ ಮಾಡಿದೆವು. ಕೊನೆಗೂ ನಾನು ಅಂದುಕೊಂಡಂತೆ ಸಿನಿಮಾ ಮೂಡಿಬರಲಿಲ್ಲ. ಸಿನಿಮಾ ಸೋಲಲು ಇದೂ ಒಂದು ಕಾರಣ’ ಎಂದಿದ್ದಾರೆ ಐಶ್ವರ್ಯಾ.
‘ಲಾಲ್ ಸಲಾಂ’ ಸಿನಿಮಾ ಫೆಬ್ರವರಿ 9ರಂದು ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಮೋಯಿದ್ದೀನ್ ಭಾವಾ ಪಾತ್ರದಲ್ಲಿ ರಜನೀಕಾಂತ್ ನಟಿಸಿದ್ದರು. ಸಿನಿಮಾ ಕ್ರಿಕೆಟ್ ಹಾಗೂ ಧರ್ಮದ ವಿಷಯವನ್ನು ಒಳಗೊಂಡಿತ್ತು. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದರು. ರಜನೀಕಾಂತ್ ಅಂಥಹಾ ಸೂಪರ್ ಸ್ಟಾರ್ ಇದ್ದರೂ ಸಹ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಾಣಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ