ನೆಗೆಟಿವ್ ವಿಮರ್ಶೆಗಳ ನಡುವೆಯೂ ಭರ್ಜರಿ ಕಲೆಕ್ಷನ್ ಮಾಡಿದ ‘ಗುಡ್ ಬ್ಯಾಡ್ ಅಗ್ಲಿ’
Good Bad Ugly movie collections: ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನಿನ್ನೆ ಬಿಡುಗಡೆ ಆಗಿದ್ದು ಸಿನಿಮಾದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿರಲಿಲ್ಲ. ಆದರೆ ಸಿನಿಮಾದ ಮೊದಲ ದಿನದ ಕಲೆಕ್ಷನ್ ಮಾತ್ರ ಜೋರಾಗಿಯೇ ಆಗಿದೆ. ಸಿನಿಮಾದ ಮೊದಲ ದಿನದ ಕಲೆಕ್ಷನ್ ಮಾಹಿತಿ ಇಲ್ಲಿದೆ.

ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ (Ajith Kumar), ತ್ರಿಷಾ (Trisha) ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ (Good Bad Ugly) ಸಿನಿಮಾ ನಿನ್ನೆ (ಏಪ್ರಿಲ್ 10) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಅಷ್ಟೇನೂ ಒಳ್ಳೆಯ ವಿಮರ್ಶೆಗಳು ಪ್ರಕಟವಾಗಿಲ್ಲ, ಸಿನಿಮಾ ಸಾಧಾರಣವಾಗಿದೆ, ಕತೆ, ಚಿತ್ರಕತೆಗೆ ಮಹತ್ವವೇ ಇಲ್ಲ. ಕೇವಲ ಕೆಲವು ಮಾಸ್ ಸೀನ್, ಫೈಟ್ಗಳು ಬಿಟ್ಟರೆ ಸಿನಿಮಾದಲ್ಲಿ ಇನ್ನೇನೂ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿಯೂ ಸಹ ಸಿನಿಮಾದ ಬಗ್ಗೆ ಬಹುತೇಕ ನೆಗೆಟಿವ್ ವಿಮರ್ಶೆಗಳೇ ತುಂಬಿತ್ತು. ಅಷ್ಟಾದರೂ ಸಹ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಮೊದಲ ದಿನ ಗಮನಾರ್ಹ ಕಲೆಕ್ಷನ್ ಅನ್ನೇ ಮಾಡಿದೆ.
‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಮೊದಲ ದಿನ 28.50 ಕೋಟಿ ರೂಪಾಯಿ ಹಣ ಗಳಿಸಿದೆ. ನೆಗೆಟಿವ್ ವಿಮರ್ಶೆ ಪಡೆದುಕೊಂಡ ಸಿನಿಮಾ ಒಂದು ಭಾರತದ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ ಇಷ್ಟೊಳ್ಳೆ ಗಳಿಕೆ ಮಾಡಿರುವುದು ಸಾಮಾನ್ಯ ಸಂಗತಿಯಲ್ಲ. ಈ 28.50 ಕೋಟಿ ಮೊತ್ತದಲ್ಲಿ ತಮಿಳು ಆವೃತ್ತಿಯಿಂದಲೇ 77% ಹಣ ಬಂದಿದೆ. ಸಿನಿಮಾದ ತೆಲುಗು ಆವೃತ್ತಿಯಿಂದ 16.98% ಕಲೆಕ್ಷನ್ ಬಂದಿದೆ. ಇನ್ನು ಸಿನಿಮಾದ ರಾತ್ರಿ ಶೋಗಳು ಬಹುತೇಕ ಹೌಸ್ ಫುಲ್ ಆಗಿದ್ದು 88.81% ಫುಲ್ ಆಗಿದ್ದವಂತೆ.
ನಿನ್ನೆ ಸಿನಿಮಾ ನೋಡಿದ ಹಲವು ಮಂದಿ ಕಳೆದ ತಿಂಗಳು ಬಿಡುಗಡೆ ಆಗಿದ್ದ ಅಜಿತ್ ನಟನೆಯ ‘ವಿದುಮಯಾರ್ಚಿ’ ಸಿನಿಮಾದ ರೀತಿಯಲ್ಲಿಯೇ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಸಹ ಸೋಲಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಸಿನಿಮಾದ ಮೊದಲ ದಿನದ ಕಲೆಕ್ಷನ್ ನೋಡಿದರೆ ಇದು ಗೆಲ್ಲುವ ಸಿನಿಮಾ ಎಂಬ ಭರವಸೆ ಅಜಿತ್ ಅಭಿಮಾನಿಗಳಿಗೆ ಮೂಡಿಸಿದೆ. ಮೊದಲ ದಿನ 28.50 ಕೋಟಿ ಗಳಿಸಿದ ಈ ಸಿನಿಮಾ ವೀಕೆಂಡ್ನಲ್ಲಿ ಇದೇ ಕಲೆಕ್ಷನ್ ಕಾಯ್ದುಕೊಂಡರೆ ಸಿನಿಮಾ ಸುಲಭವಾಗಿ ನೂರು ಕೋಟಿ ಕಲೆಕ್ಷನ್ ದಾಟಲಿದೆ. ಆ ಮೂಲಕ ಸೂಪರ್ ಹಿಟ್ ಸಾಲು ಸೇರಿಕೊಳ್ಳಲಿದೆ.
ಇದನ್ನೂ ಓದಿ:ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಬಿಡುಗಡೆ, ಸಿನಿಮಾ ಗುಡ್ಡಾ? ಬ್ಯಾಡಾ? ಅಗ್ಲಿಯಾ?
‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿದೆ. ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಅಧಿರ್ ರವಿಚಂದ್ರನ್. ಸಿನಿಮಾ ನಿರ್ಮಾಣ ಮಾಡಿರುವುದು ತೆಲುಗಿನ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್. ಸಿನಿಮಾಕ್ಕೆ ಜಿವಿ ಪ್ರಕಾಶ್ ಸಂಗೀತ ನೀಡಿದ್ದಾರೆ. ಸಿನಿಮಾನಲ್ಲಿ ಅರ್ಜುನ್ ದಾಸ್, ತೆಲುಗಿನ ನಟ ಸುನಿಲ್, ಕಣ್ಸನ್ನೆ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಇನ್ನೂ ಹಲವರು ನಟಿಸಿದ್ದಾರೆ. ಅಜಿತ್ ಕುಮಾರ್ ನಟನೆಯ ಸಿನಿಮಾಗಳು ಒಂದರ ಹಿಂದೊಂದರಂತೆ ಸೋಲುತ್ತಿದ್ದವು. ಆದರೆ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಸಣ್ಣ ಭರವಸೆ ನೀಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ