ಟಾಲಿವುಡ್ನ ಸ್ಟಾರ್ ನಟ ಅಕ್ಕಿನೇನಿ ನಾಗ ಚೈತನ್ಯ (Akkineni Naga Chaitanya) ಅವರು ಒಂದು ಗೆಲುವಿಗಾಗಿ ಕಾದಿದ್ದಾರೆ. ಸಮಂತಾ ರುತ್ ಪ್ರಭು ಜೊತೆಗಿನ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಬಳಿಕ ಅವರು ವೃತ್ತಿಜೀವನದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಆದರೆ ಗೆಲ್ಲಬೇಕು ಎಂಬ ಅವರ ಪ್ರಯತ್ನವಂತೂ ನಿಂತಿಲ್ಲ. ನಾಗ ಚೈತನ್ಯ ನಟಿಸಿದ್ದ ‘ಥ್ಯಾಂಕ್ ಯೂ’ ಸಿನಿಮಾ 2022ರಲ್ಲಿ ಬಿಡುಗಡೆಯಾಗಿ ಸೋಲುಂಡಿತು. ಆಮಿರ್ ಖಾನ್ ಜೊತೆ ಅವರು ಸ್ಕ್ರೀನ್ ಶೇರ್ ಮಾಡಿಕೊಂಡಿದ್ದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಕೂಡ ನೆಲಕಚ್ಚಿತು. ಈಗ ಅವರು ‘ಕಸ್ಟಡಿ’ ಸಿನಿಮಾ (Custody Movie) ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಸಿನಿಮಾ ಇಂದು (ಮೇ 12) ಬಿಡುಗಡೆ ಆಗುತ್ತಿದೆ. ಟ್ರೇಲರ್ ಮೂಲಕ ‘ಕಸ್ಟಡಿ’ ಸಿನಿಮಾ ಗಮನ ಸೆಳೆದಿದೆ. ಈ ಚಿತ್ರದಲ್ಲಿ ನಾಗ ಚೈತನ್ಯ ಅವರು ಕಾನ್ಸ್ಟೇಬಲ್ (Police Constable) ಪಾತ್ರ ಮಾಡಿದ್ದಾರೆ.
ಸಾಮಾನ್ಯವಾಗಿ ಸಿನಿಮಾ ಹೀರೋಗಳು ತಮ್ಮ ಪಾತ್ರದ ಇಮೇಜ್ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ಅನೇಕ ಹೀರೋಗಳು ಈಗಾಗಲೇ ಪೊಲೀಸ್ ಪಾತ್ರ ಮಾಡಿ ಮಿಂಚಿದ್ದಾರೆ. ಆದರೆ ಆ ಎಲ್ಲ ಪಾತ್ರಗಳು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಪಾತ್ರಗಳೇ ಆಗಿರುತ್ತವೆ. ಕಾನ್ಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಳ್ಳುಬೇಕು ಎಂದಾಗ ಕೆಲವು ಹೀರೋಗಳು ಒಪ್ಪಿಕೊಳ್ಳದೇ ಇರಬಹುದು. ಆದರೆ ನಾಗ ಚೈತನ್ಯ ಅವರು ಈ ಪಾತ್ರವನ್ನು ಇಷ್ಟಪಟ್ಟು ನಟಿಸಿದ್ದಾರೆ.
ಇದನ್ನೂ ಓದಿ: ‘ನಾನು ತಪ್ಪು ಮಾಡಿಲ್ಲ, ಭಯ ಪಡಲ್ಲ’; ನಾಗ ಚೈತನ್ಯ ಜೊತೆಗಿನ ಡೇಟಿಂಗ್ ವಿಚಾರಕ್ಕೆ ನಟಿಯ ಸ್ಪಷ್ಟನೆ
ಕಾನ್ಸ್ಟೇಬಲ್ ಪಾತ್ರ ಮಾಡುವಾಗ ಅಕ್ಕಿನೇನಿ ನಾಗ ಚೈತನ್ಯ ಅವರು ಇಮೇಜ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕಥೆಗೆ ಅವರು ಹೆಚ್ಚು ಮಹತ್ವ ನೀಡಿದ್ದಾರೆ. ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟ ಆಗಲಿದೆ ಎಂಬ ಭರವಸೆ ಅವರಿಗೆ ಇದೆ. ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ಗೆ ಹೆಚ್ಚು ಅಧಿಕಾರ ಇರುವುದಿಲ್ಲ. ಅಂಥ ಪಾತ್ರವನ್ನು ‘ಕಸ್ಟಡಿ’ ಚಿತ್ರದಲ್ಲಿ ಹೀರೋ ರೀತಿ ತೋರಿಸುತ್ತಿರುವುದು ವಿಶೇಷ. ಚಿತ್ರದ ದ್ವಿತೀಯಾರ್ಧದಲ್ಲಿ ಈ ಪಾತ್ರ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆಯಂತೆ. ಆಗ ಪ್ರೇಕ್ಷಕರಿಗೆ ಟ್ವಿಸ್ಟ್ ಸಿಗಲಿದೆ. ಈ ಎಲ್ಲ ಕಾರಣದಿಂದ ನಾಗ ಚೈತನ್ಯ ಅವರು ಕಾನ್ಸ್ಟೇಬಲ್ ಪಾತ್ರವನ್ನು ಒಪ್ಪಿಕೊಂಡು ನಟಿಸಿದ್ದಾರೆ.
ಇದನ್ನೂ ಓದಿ: ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ನಾಗ ಚೈತನ್ಯ ಮಾತು, ಮೂರನೇ ವ್ಯಕ್ತಿಗಳ ಬಗ್ಗೆ ಆಕ್ರೋಶ
ವೆಂಕಟ್ ಪ್ರಭು ಅವರು ‘ಕಸ್ಟಡಿ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅರವಿಂದ್ ಸ್ವಾಮಿ ಅವರು ವಿಲನ್ ಪಾತ್ರ ಮಾಡಿದ್ದಾರೆ ಎಂಬುದು ವಿಶೇಷ. ಇಳಯರಾಜ ಮತ್ತು ಯುವನ್ ಶಂಕರ್ ರಾಜ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೃತಿ ಶೆಟ್ಟಿ ಅವರು ನಾಯಕಿಯಾಗಿ ನಟಿಸಿದ್ದಾರೆ. ಪ್ರಿಯಾಮಣಿ, ಶರತ್ ಕುಮಾರ್, ಸಂಪತ್ ರಾಜ್, ಪ್ರೇಮ್ಜಿ, ವೆನ್ನೆಲ ಕಿಶೋರ್, ಪ್ರೇಮಿ ವಿಶ್ವನಾಥ್ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.