Akshay Kumar: ಅಕ್ಷಯ್ ಕುಮಾರ್ ಕೆನಡ ನಾಗರೀಕತ್ವ ಪಡೆದಿದ್ದು ಹೇಗೆ? ಈಗ ರದ್ದು ಮಾಡಿಸುತ್ತಿರುವುದು ಏಕೆ?

ನಟ ಅಕ್ಷಯ್ ಕುಮಾರ್, ಕೆನಡ ದೇಶದ ನಾಗರಿಕತ್ವ ಪಡೆದಿದ್ದು ಹೇಗೆ ಮತ್ತು ಏಕೆ? ಈಗ ನಾಗರಿಕತ್ವವನ್ನು ತ್ಯಜಿಸುತ್ತಿರುವುದು ಏಕೆ?

Akshay Kumar: ಅಕ್ಷಯ್ ಕುಮಾರ್ ಕೆನಡ ನಾಗರೀಕತ್ವ ಪಡೆದಿದ್ದು ಹೇಗೆ? ಈಗ ರದ್ದು ಮಾಡಿಸುತ್ತಿರುವುದು ಏಕೆ?
ಅಕ್ಷಯ್ ಕುಮಾರ್
Follow us
ಮಂಜುನಾಥ ಸಿ.
|

Updated on: Feb 24, 2023 | 5:21 PM

‘ಕೇಸರಿ’, ‘ಗೋಲ್ಡ್’, ‘ಹಾಲಿಡೇ’, ಮಿಷನ್ ಮಂಗಲ್’, ‘ರಾಮ್ ಸೇತು’, ‘ಸಾಮ್ರಾಟ್ ಪೃಥ್ವಿರಾಜ್’, ‘ಬೆಲ್ ಬಾಟಮ್’, ‘ಏರ್​ಲಿಫ್ಟ್’ ಇನ್ನೂ ಹಲವು ದೇಶಪ್ರೇಮ ಉದ್ದೀಪಿಸುವ ಸಿನಿಮಾಗಳಲ್ಲಿ ನಟಿಸಿರುವ ಅಕ್ಷಯ್ ಕುಮಾರ್ (Akshay Kumar) ಅಸಲಿಗೆ ಭಾರತದ (India) ಪ್ರಜೆಯೇ ಅಲ್ಲ. ಅವರು ಕೆನಡ (Canada) ದೇಶದ ಪ್ರಜೆ. ಇದೇ ವಿಷಯಕ್ಕೆ ಹಲವು ಬಾರಿ ಕಟು ಟೀಕೆಗೂ ಒಳಗಾಗಿದ್ದಾರೆ ಅಕ್ಷಯ್, ಆದರೆ ಈಗ ತಮ್ಮ ಕೆನಡದ ನಾಗರೀಕತ್ವವನ್ನು ತ್ಯಜಿಸುವ ನಿರ್ಧಾರ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಭಾರತದ ಪ್ರಜೆಯಾಗಿದ್ದರು. ಆದರೆ 1990 ರ ಸಮಯದಲ್ಲಿ ಕೆನಡದ ಪೌರತ್ವಕ್ಕೆ ಅರ್ಜಿ ಹಾಕಿ ಪಡೆದುಕೊಂಡರು. ಭಾರತದ ಸಂವಿಧಾನ ದ್ವಿಪೌರತ್ವವನ್ನು ಒಪ್ಪುವುದಿಲ್ಲ. ಹಾಗಾಗಿ ಭಾರತದ ಪೌರತ್ವವನ್ನು ಅಕ್ಷಯ್ ಕುಮಾರ್ ತ್ಯಜಿಸಿದ್ದರು. ಭಾರತದ ನಾಗರೀಕತೆಯನ್ನು ತ್ಯಜಿಸಿದ ಅಕ್ಷಯ್ ಕುಮಾರ್ ದೇಶಪ್ರೇಮದ ಬಗ್ಗೆ ಮಾತನಾಡಿದಾಗ, ದೇಶಪ್ರೇಮ ಉದ್ದೀಪಿಸುವ ಸಿನಿಮಾ ಮಾಡಿದಾಗಲೆಲ್ಲ ಕಠಿಣ ಟೀಕೆಗೆ ಗುರಿಯಾಗುತ್ತಲೇ ಬಂದಿದ್ದಾರೆ.

ಈ ಬಗ್ಗೆ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಕ್ಷಯ್ ಕುಮಾರ್, ನನಗೆ ಭಾರತವೇ ಎಲ್ಲ. ನಾನು ಬೆಳೆದಿದ್ದು, ಗಳಿಸಿದ್ದು ಎಲ್ಲವೂ ಇಲ್ಲೆ. ಭಾರತ ನನಗೆ ಎಲ್ಲವನ್ನೂ ನೀಡಿದೆ. ನನಗೆ ಎಲ್ಲ ಕೊಟ್ಟಿರುವ ದೇಶಕ್ಕೆ ಮರಳಿ ಕೊಡುತ್ತಿರುವ ಬಗ್ಗೆಯೂ ಖುಷಿ ಇದೆ. ಆದರೆ ಏನೂ ಗೊತ್ತಿಲ್ಲದೆ ಜನ ಟೀಕಿಸುವುದು ಸಹಿಸುವುದು ಕಷ್ಟ ಎಂದಿದ್ದಾರೆ ಅಕ್ಷಯ್ ಕುಮಾರ್.

Selfiee Movie Twitter Review: ಅಕ್ಷಯ್ ನಟನೆಯ ಸೆಲ್ಫಿ ಸಿನಿಮಾ ನೋಡಿ ನೆಟ್ಟಿಗರು ಹೀಗಂದರು

ತಾವು ಕೆನಡದ ಪೌರತ್ವ ಪಡೆದ ಬಗೆಯನ್ನೂ ಸಂದರ್ಶನದಲ್ಲಿ ವಿವರಿಸಿರುವ ಅಕ್ಷಯ್ ಕುಮಾರ್, ”1990ರ ಸಮಯದಲ್ಲಿ ನನ್ನ ನಟನಾ ವೃತ್ತಿಯ ಗ್ರಾಫು ಇಳಿಮುಖವಾಗಿ ಸಾಗುತ್ತಿತ್ತು. ಸತತವಾಗಿ ಸಿನಿಮಾಗಳು ಫ್ಲಾಪ್ ಆಗುತ್ತಲೇ ಬಂದವು. ಒಂದು ಸಮಯದಲ್ಲಿ ಒಂದು ಸಿನಿಮಾ ಸಹ ನನ್ನ ಕೈಯಲ್ಲಿರಲಿಲ್ಲ. ಆಗ ಕೆನಡದಲ್ಲಿದ್ದ ನನ್ನ ಗೆಳೆಯನೊಬ್ಬ ನನ್ನನ್ನು ಆಹ್ವಾನಿಸಿದ. ಹತಾಷೆಗೊಂಡಿದ್ದ ನಾನು ಸಿನಿಮಾ ಬಿಟ್ಟು ಕೆನಡದಲ್ಲಿ ಬೇರೊಂದು ಕೆಲಸ ಮಾಡುವ ಇಚ್ಛೆಯಿಂದ ಅಲ್ಲಿನ ಪೌರತ್ವಕ್ಕೆ ಅರ್ಜಿ ಹಾಕಿದೆ, ಪೌರತ್ವ ದೊರೆತಿತು” ಎಂದಿದ್ದಾರೆ.

”ನಾನು ಅರ್ಜಿ ಹಾಕಿದಾಗ ನನ್ನ ಇನ್ನೆರಡು ಸಿನಿಮಾಗಳು ಬಿಡುಗಡೆ ಆಗುವುದಕ್ಕಿತ್ತು. ನನ್ನ ಅದೃಷ್ಟವೋ ಏನೋ ಆ ಎರಡೂ ಸಿನಿಮಾಗಳು ಸೂಪರ್ ಹಿಟ್ ಆದವು. ನನ್ನ ಗೆಳೆಯ ಸಹ ನೀನು ನಟನೆ ಮುಂದುವರೆಸು ಎಂದು ಹುರಿದುಂಬಿಸಿದ. ಆ ಎರಡು ಸಿನಿಮಾಗಳು ಹಿಟ್ ಆಗಿದ್ದರಿಂದ ನನಗೆ ಇನ್ನಷ್ಟು ಸಿನಿಮಾಗಳು ದೊರೆತವು ಅವೂ ಸಹ ಹಿಟ್ ಆದವು. ಹಾಗೆಯೇ ಸಾಗಿಬಿಟ್ಟಿತು. ನನ್ನ ಬಳಿ ಕೆನಡದ ಪಾಸ್​ಪೋರ್ಟ್ ಇದೆ ಎಂಬುದನ್ನು ಸಹ ನಾನು ಮರೆತೇ ಬಿಟ್ಟೆ” ಎಂದಿದ್ದಾರೆ ಅಕ್ಷಯ್ ಕುಮಾರ್.

”ಆದರೆ ಈಗ ನಾನು ಕೆನಡದ ನಾಗರೀಕತ್ವವನ್ನು ತ್ಯಜಿಸುತ್ತಿದ್ದೇನೆ. ಈಗಾಗಲೇ ಅದರ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದೇನೆ. ನಾನು ಭಾರತೀಯ, ನನಗೆ ಈ ದೇಶ ಎಲ್ಲವನ್ನೂ ಕೊಟ್ಟಿದೆ. ನಾನೂ ಈ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಬೇಕಿದೆ ಎಂದಿದ್ದಾರೆ.

ಅಕ್ಷಯ್ ಕುಮಾರ್ ನಟನೆಯ ಸೆಲ್ಫಿ ಸಿನಿಮಾ ಇಂದಷ್ಟೆ (ಫೆಬ್ರವರಿ 24) ಬಿಡುಗಡೆ ಆಗಿದ್ದು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ