Adipurush Movie: ‘ಆದಿಪುರುಷ್ ಸಿನಿಮಾ ಬ್ಯಾನ್ ಮಾಡಿ’; ಪ್ರಧಾನಿ ನರೇಂದ್ರ ಮೋದಿಗೆ ಪತ್ರ
ಹೇಳುತ್ತಾ ಹೋದರೆ ಟೀಕೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಕಾರಣಕ್ಕೆ ‘ಆದಿಪುರುಷ್’ ಚಿತ್ರವನ್ನು ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ಜೋರಾಗಿದೆ.
‘ಆದಿಪುರುಷ್’ (Adipurush Movie) ಸಿನಿಮಾ ಸುತ್ತಲೂ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿವೆ. ಈ ಚಿತ್ರದಿಂದ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಅನೇಕರು ಆರೋಪಿಸಿದ್ದಾರೆ. ಚಿತ್ರದಲ್ಲಿ ಬಳಕೆ ಆದ ಸಂಭಾಷಣೆ, ಪಾತ್ರ ಹಾಗೂ ಕಥೆಯನ್ನು ತಿರುಚಿದ್ದು ವಿವಾದ ಏಳಲು ಪ್ರಮುಖ ಕಾರಣ. ಹೀಗಿರುವಾಗಲೇ ಸಿನಿಮಾಗೆ ಬ್ಯಾನ್ ಬಿಸಿ ತಟ್ಟುವ ಸೂಚನೆ ಎದುರಾಗಿದೆ. ಈ ಚಿತ್ರವನ್ನು ಥಿಯೇಟರ್ ಹಾಗೂ ಒಟಿಟಿಯಲ್ಲಿ ಬ್ಯಾನ್ ಮಾಡುವಂತೆ ‘ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್’ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿದೆ.
‘ಆದಿಪುರುಷ್’ ಚಿತ್ರದಲ್ಲಿ ವಿವಾದ ಹುಟ್ಟು ಹಾಕುವಂಥ ಸಾಕಷ್ಟು ವಿಚಾರಗಳು ಕಾಣಿಸಿವೆ. ರಾವಣ ಪುಷ್ಪಕ ವಿಮಾನದ ಬದಲು ಬಾವಲಿ ಸಾಕುತ್ತಾನೆ ಮತ್ತು ಅದಕ್ಕೆ ಮಾಂಸ ಹಾಕುತ್ತಾನೆ. ಬ್ರಾಹ್ಮಣನಾಗಿ ರಾವಣನ ಕೈಯಲ್ಲಿ ಮಾಂಸ ಮುಟ್ಟಿಸಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಚಿತ್ರದಲ್ಲಿ ಗ್ಲಾಮರ್ ತೋರಿಸುವ ಪ್ರಯತ್ನ ಆಗಿದೆ. ಕಥೆಯನ್ನು ಮನಸ್ಸಿಗೆ ಬಂದಂತೆ ಕಟ್ಟಿಕೊಡಲಾಗಿದೆ. ಹೀಗೆ ಹೇಳುತ್ತಾ ಹೋದರೆ ಟೀಕೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಕಾರಣಕ್ಕೆ ‘ಆದಿಪುರುಷ್’ ಚಿತ್ರವನ್ನು ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ಜೋರಾಗಿದೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಗೆ ‘ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್’ ಪತ್ರ ಬರೆದಿದೆ. ‘ಆದಿಪುರುಷ್ ಚಿತ್ರದ ಕಥೆ ಹಾಗೂ ಸಂಭಾಷಣೆ ರಾಮ ಹಾಗೂ ಹನುಮಂತನ ವರ್ಚಸ್ಸಿಗೆ ಧಕ್ಕೆ ತರುವಂತಿದೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಗುವ ರೀತಿಯಲ್ಲಿ ಸಿನಿಮಾ ಇದೆ. ಈ ಚಿತ್ರದ ಸಂಭಾಷಣೆ ಎಲ್ಲರಿಗೂ ನೋವುಂಟು ಮಾಡುವ ರೀತಿಯಲ್ಲಿದೆ’ ಎಂದು ಪತ್ರ ಆರಂಭಿಸಲಾಗಿದೆ.
ಇದನ್ನೂ ಓದಿ: Om Raut: ‘ಆದಿಪುರುಷ್’ ಚಿತ್ರಕ್ಕೆ ಕೆಟ್ಟ ವಿಮರ್ಶೆ ಸಿಕ್ಕ ಬಳಿಕ ನಿರ್ದೇಶಕ ಓಂ ರಾವತ್ ಪ್ರತಿಕ್ರಿಯೆ ಏನು?
‘ನಿರ್ದೇಶಕ ಓಂ ರಾವತ್, ಚಿತ್ರಕಥೆ ಸಂಭಾಷಣೆ ಬರೆದ ಮನೋಜ್ ಮುಂತಾಶಿರ್ ಶುಕ್ಲಾ ಹಾಗೂ ಚಿತ್ರದ ನಿರ್ಮಾಪಕರ ವಿರುದ್ಧ ಎಫ್ಐಆರ್ ದಾಖಲಾಗಬೇಕು. ಈ ರೀತಿಯ ಸಿನಿಮಾಗಳಲ್ಲಿ ಪ್ರಭಾಸ್, ಕೃತಿ ಸನೋನ್ ಹಾಗೂ ಸೈಫ್ ಅಲಿ ಖಾನ್ ನಟಿಸಬಾರದಿತ್ತು. ರಾಮಾಯಣ ಹಾಗೂ ಶ್ರೀರಾಮನ ಬಗ್ಗೆ ಇರುವ ನಂಬಿಕೆಯನ್ನು ನಾಶ ಮಾಡುವ ಸಿನಿಮಾ ಇದು’ ಎಂದು ಪತ್ರದಲ್ಲಿ ಹೇಳಲಾಗಿದೆ. ಈ ಚಿತ್ರ ಥಿಯೇಟರ್ ಹಾಗೂ ಮುಂಬರುವ ದಿನಗಳಲ್ಲಿ ಒಟಿಟಿಯಲ್ಲಿ ಪ್ರದರ್ಶನ ಕಾಣಬಾರದು ಎಂದು ಕೋರಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:32 pm, Tue, 20 June 23