ಆದಿಪುರುಷ್ ಸಿನಿಮಾ ವಿರುದ್ಧ ದೆಹಲಿ ಹೈಕೋರ್ಟ್ನಲ್ಲಿ ಹಿಂದೂ ಸೇನಾ ಅರ್ಜಿ
Adipurush: ಆದಿಪುರುಷ್ ಸಿನಿಮಾಕ್ಕೆ ಸಂಕಷ್ಟದ ಮೇಲೆ ಸಂಕಷ್ಟಗಳು ಎದುರಾಗುತ್ತಿವೆ. ಇದೀಗ ಹಿಂದೂ ಸೇನಾ ಸಂಘಟನೆಯು ಸಿನಿಮಾದ ವಿರುದ್ಧ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
ಆದಿಪುರುಷ್ (Adipurush) ಸಿನಿಮಾ ಬಿಡುಗಡೆ ಆದ ಮೊದಲ ದಿನವೇ ಅಬ್ಬರ ತುಸು ತಗ್ಗಿದಂತಿದೆ. ಸಿನಿಮಾದ ಬಗ್ಗೆ ಭರಪೂರ ನೆಗೆಟಿವ್ ವಿಮರ್ಶೆಗಳು (Criticism) ಕೇಳಿ ಬರುತ್ತಿವೆ. ಅಲ್ಲಲ್ಲಿ ಕೆಲವು ಧನಾತ್ಮಕ ವಿಮರ್ಶೆಗಳೂ ಇವೆ. ಈ ನಡುವೆ ಸಿನಿಮಾಕ್ಕೆ ಸಂಕಷ್ಟದ ಮೇಲೆ ಸಂಕಷ್ಟಗಳು ಎದುರಾಗುತ್ತಿವೆ. ಸಿನಿಮಾದ ವಿರುದ್ಧ ನೇಪಾಳಿಗರು ಸಿಟ್ಟಾಗಿದ್ದು ನೇಪಾಳದಲ್ಲಿ ಸಿನಿಮಾದ ಶೋಗಳನ್ನು ರದ್ದು ಮಾಡಲಾಗಿದೆ. ಇದೀಗ ಭಾರತದಲ್ಲಿಯೂ ಕೆಲವರು ಸಿನಿಮಾದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಹಿಂದೂ ಸೇನಾ (Hindu Sena) ಸಂಘಟನೆಯ ಮುಖ್ಯಸ್ಥರೊಬ್ಬರು ಸಿನಿಮಾದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ದೆಹಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಹಿಂದೂ ಸೇನಾ ಸಂಘಟನೆಯ ಮುಖ್ಯಸ್ಥ ”ಶ್ರೀರಾಮ, ಸೀತಾಮಾತೆ, ಹನುಮಂತನ ಕುರಿತಾಗಿ ಭಾರತೀಯರಿಗೆ ಒಂದು ನಿರ್ದಿಷ್ಟ ಕಲ್ಪನೆ ಇದೆ. ಆ ಕಲ್ಪನೆಯನ್ನು ಬದಲಾಯಿಸುವ ಪ್ರಯತ್ನ ಆದಿಪುರುಷ್ ಸಿನಿಮಾದ ಮೂಲಕ ಆಗುತ್ತಿದೆ. ಸಿನಿಮಾದ ತೋರಿಸಲಾಗಿರುವ ದೃಶ್ಯಗಳು, ಚಿತ್ರಣಗಳು ಹಿಂದೂ ಸಂಸ್ಕೃತಿಯ ಅವಹೇಳನ, ದೇವರುಗಳ ಅಪಚಿತ್ರಣವಾಗಿವೆ. ಇದು ಹಿಂದೂಗಳ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.
”ಪಾತ್ರಗಳ ವಸ್ತ್ರ ವಿನ್ಯಾಸ, ಕೇಶಶೈಲಿ, ವ್ಯಕ್ತಿತ್ವ, ದೇಹಾಕಾರ ಎಲ್ಲದರ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಆದರೆ ಆದಿಪುರುಷ್ನಲ್ಲಿ ಇವುಗಳನ್ನು ತಿರುಚಲಾಗಿದೆ. ಈ ತಿರುಚುವಿಕೆಯು ಹಿಂದೂ ಮನೋಭಾವಕ್ಕೆ ಧಕ್ಕೆ ತಂದಿದೆ. ಈ ತಪ್ಪುಗಳನ್ನು ಸರಿಪಡಿಸುವಂತೆ ನ್ಯಾಯಾಲವು ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಸೂಚಿಸಬೇಕು” ಎಂದು ಹಿಂದೂ ಸೇನಾ ಮುಖ್ಯಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಆದಿಪುರುಷ್ ಚೆನ್ನಾಗಿಲ್ಲ ಎಂದ ಸಿನಿಮಾ ಪ್ರೇಮಿಯ ಥಳಿಸಿದ ಪ್ರಭಾಸ್ ಅಭಿಮಾನಿಗಳು
ಆದಿಪುರುಷ ಚಿತ್ರದ ಮೂಲಕ ಹಿಂದೂ ಧಾರ್ಮಿಕ ಮಹಾಪುರುಷರ ವ್ಯಕ್ತಿತ್ವವನ್ನು ವಿರೂಪಗೊಳಿಸಿ ಅದನ್ನು ಸಾರ್ವಜನಿಕ ಪ್ರದರ್ಶನ ಮಾಡಿರುವುದು ಧಾರ್ಮಿಕ ಸ್ವಾತಂತ್ರ್ಯದ ಹಾಗೂ ಧಾರ್ಮಿಕ ಆಚರಣೆ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಆದಿಪುರುಷ್ ಸಿನಿಮಾದಲ್ಲಿ ರಾಮಾಯಣದ ಅರಣ್ಯಕಾಂಡ ಹಾಗೂ ಉತ್ತರಕಾಂಡವನ್ನು ಬೇರೆ ವಿಧಾನದಲ್ಲಿ ತೆರೆಯ ಮೇಲೆ ತರಲಾಗಿದೆ. ಈ ವರೆಗೆ ನೋಡಿದ್ದ ರಾವಣ, ವಾನರ ಸೇನೆ, ಶ್ರೀರಾಮನ ಚಿತ್ರಣಗಳನ್ನು ಬೇರೆ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಇದು ಹಲವರಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ರಾವಣನ ಸೇನೆಯನ್ನು ಭೂತಗಳ ಸೇನೆಯಾಗಿ, ವಾನರ ಸೇನೆಯನ್ನು ಚಿಂಪಾಜಿಗಳಂತೆಯೂ ತೋರಿಸಲಾಗಿದೆ. ಇವುಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಆದಿಪುರುಷ್ ಸಿನಿಮಾ ಚೆನ್ನಾಗಿಲ್ಲವೆಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾವನ್ನು ಭೂತದ ಸಿನಿಮಾ ಮಾದರಿಯಲ್ಲಿ ಡಾರ್ಕ್ ಥೀಮ್ನಲ್ಲಿ ಪ್ರದರ್ಶಿಸಲಾಗಿದೆ. ಅತಿಯಾಗಿ ಕಳಪೆ ಗುಣಮಟ್ಟದ ಗ್ರಾಫಿಕ್ಸ್ ಬಳಸಲಾಗಿದೆ. ಅರಣ್ಯಕಾಂಡದಲ್ಲಿಯೇ ಬರುವ ವಾಲಿ ವಧೆಯ ಸನ್ನಿವೇಶವನ್ನು ತೆಗೆಯಲಾಗಿದೆ. ಲಂಕಿಣಿಯ ಪಾತ್ರವನ್ನು ಕೈಬಿಡಲಾಗಿದೆ ಇನ್ನೂ ಹಲವು ದೂರುಗಳು ಸಿನಿಮಾ ಮೇಲಿವೆ. ಆದಿಪುರುಷ್ ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡಿದ್ದು, ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ