ತೆಲಂಗಾಣ ಸಿಎಂ ಮನವಿಗೆ ಸ್ಪಂದಿಸಿದ ಅಲ್ಲು ಅರ್ಜುನ್

|

Updated on: Nov 29, 2024 | 3:05 PM

Allu Arjun: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮನವಿಗೆ ಸ್ಪಂದಿಸಿರುವ ಅಲ್ಲು ಅರ್ಜುನ್, ತೆಲಂಗಾಣ ಸರ್ಕಾರದ ಮಾದಕ ವಸ್ತು ವಿರೋಧಿ ಕ್ಯಾಂಪೇನ್​ಗೆ ಕೈ ಜೋಡಿಸಿದ್ದಾರೆ. ಮಾದಕ ವಸ್ತು ಸೇವನೆ ವಿರುದ್ಧ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ.

ತೆಲಂಗಾಣ ಸಿಎಂ ಮನವಿಗೆ ಸ್ಪಂದಿಸಿದ ಅಲ್ಲು ಅರ್ಜುನ್
Allu Arjun
Follow us on

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆದಾಗಲೂ ಸಹ ಟಿಕೆಟ್ ದರ ಹೆಚ್ಚಳ, ಹೆಚ್ಚುವರಿ ಶೋ ಇನ್ನಿತರೆಗಳಿಗೆ ಸರ್ಕಾರದ ಅನುಮತಿ ಪಡೆಯಬೇಕಾದ ನಿಯಮ ಇದೆ. ಈ ಹಿಂದೆ ಕೆಲ ಸಿನಿಮಾಗಳಿಗೆ ಅನುಮತಿ ನೀಡಿದ್ದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಸಿನಿಮಾ ನಟರು ಟಿಕೆಟ್ ಹೆಚ್ಚಳ ಮಾಡಿಕೊಳ್ಳಲು ಅನುಮತಿಗಾಗಿ ಮಾತ್ರ ಬರದಾರದು, ಅದರ ಜೊತೆಗೆ ರಾಜ್ಯದಲ್ಲಿ ಮಾದಕ ವಸ್ತು ನಿಯಂತ್ರಣ, ಸೈಬರ್ ಭದ್ರತೆ ಜಾಗೃತಿ ಇನ್ನಿತರೆಗಳಲ್ಲಿ ಸರ್ಕಾರದ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದರು.

ಇದೀಗ ‘ಪುಷ್ಪ 2’ ಸಿನಿಮಾದ ಟಿಕೆಟ್ ದರ ಹೆಚ್ಚಳ ಮತ್ತು ಹೆಚ್ಚುವರಿ ಶೋಗಾಗಿ ಆಂಧ್ರ ಮತ್ತು ತೆಲಂಗಾಣ ಸರ್ಕಾರದ ಅನುಮತಿಯನ್ನು ಚಿತ್ರತಂಡ ಈಗಾಗಲೇ ತೆಗೆದುಕೊಂಡಿದೆ. ಇದರ ನಡುವೆ ಅಲ್ಲು ಅರ್ಜುನ್, ತೆಲಂಗಾಣ ಸಿಎಂ ಮನವಿಯಂತೆ, ರಾಜ್ಯದಲ್ಲಿ ಮಾದಕ ವಸ್ತು ನಿಯಂತ್ರಣಕ್ಕೆ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ಭಾಗಿಯಾಗಿದ್ದಾರೆ. ತೆಲಂಗಾಣ ಮಾದಕ ವಸ್ತು ನಿಯಂತ್ರಣ ಇಲಾಖೆ ಪರವಾಗಿ ವಿಡಿಯೋ ಒಂದನ್ನು ಅಲ್ಲು ಅರ್ಜುನ್ ಬಿಡುಗಡೆ ಮಾಡಿದ್ದಾರೆ.

ಒಂದು ನಿಮಿಷದ ವಿಡಿಯೋನಲ್ಲಿ, ‘ಪುಷ್ಪ’ ಸಿನಿಮಾ ಬಿಡುಗಡೆ ಆದಾಗ ರೀಲ್ಸ್ ಮಾಡುತ್ತಿದ್ದ ಯುವಕ, ಈಗ ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದಾನೆ, ಏಕೆಂದು ವಿಚಾರಿಸಿದಾಗ ಆತ ಮಾದಕ ವಸ್ತುಗಳ ವ್ಯಸನಕ್ಕೆ ಸಿಕ್ಕಿರುವುದು ತಿಳಿದು ಬರುತ್ತದೆ. ಮಾದಕ ವಸ್ತು ಚಟಕ್ಕೆ ಬಿದ್ದು ಮನೆ ಮಠ ಮಾರಿಕೊಂಡಿರುತ್ತಾನೆ. ವಿಡಿಯೋದ ಕೊನೆಯಲ್ಲಿ ಕಾಣಿಸಿಕೊಳ್ಳುವ ಅಲ್ಲು ಅರ್ಜುನ್, ‘ನಿಮಗೆ ಗೊತ್ತಿರುವವರು ಯಾರಾದರೂ ಮಾದಕ ವಸ್ತು ಸೇವಿಸುತ್ತಿದ್ದರೆ, ತೆಲಂಗಾಣದ ಮಾದಕ ವಸ್ತು ವಿರೋಧಿ ಶಾಖೆಯ ಶುಲ್ಕ ರಹಿತ ಸಂಖ್ಯೆಯಾದ 1908 ಗೆ ಕರೆ ಮಾಡಿ. ಅಂಥಹವರನ್ನು ಕೂಡಲೇ ಡ್ರಗ್ಸ್ ರಿಹಾಬ್ ಕೇಂದ್ರಕ್ಕೆ ಕರೆದೊಯ್ದು ಸೇರಿಸಿ, ಅವರು ಮತ್ತೆ ಸಾಮಾನ್ಯ ಮನುಷ್ಯರಾಗುವಂತೆ ಸರ್ಕಾರ ಮಾಡುತ್ತದೆ. ಮಾದಕ ವಸ್ತುವನ್ನು ಸೇವಿಸುವವರಿಗೆ ಶಿಕ್ಷೆ ನೀಡಬೇಕೆನ್ನುವುದು ಸರ್ಕಾರದ ನಿಲುವಲ್ಲ, ಅವರನ್ನು ಚಟದಿಂದ ವಿಮುಕ್ತರನ್ನಾಗಿ ಮಾಡುವುದು ಸರ್ಕಾರದ ಉದ್ದೇಶ. ಸಂತ್ರಸ್ತರಿಗೆ ಸಹಾಯ ಮಾಡೋಣ, ಒಳ್ಳೆಯ ಸಮಾಜವನ್ನು ನಿರ್ಮಿಸೋಣ’ ಎಂದು ಅಲ್ಲು ಅರ್ಜುನ್ ಕರೆ ನೀಡಿದ್ದಾರೆ.

ಇದನ್ನೂ ಓದಿ:ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್

‘ಪುಷ್ಪ 2’ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಅನುಮತಿ ನೀಡಿದ್ದು, ಇತ್ತೀಚೆಗೆ ಬಿಡುಗಡೆ ಆದ ಯಾವುದೇ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾಗಳು ನಿಗದಿಪಡಿಸದಷ್ಟು ದೊಡ್ಡ ಮೊತ್ತವನ್ನು ‘ಪುಷ್ಪ 2’ ನಿಗದಿ ಪಡಿಸಿದೆ. ಆಂಧ್ರ, ತೆಲಂಗಾಣಗಳಲ್ಲಿ ಟಿಕೆಟ್ ಬೆಲೆ 600 ರೂಪಾಯಿ ಇಂದ 800 ರೂಪಾಯಿಗಳು ಇರಲಿವೆ ಎನ್ನಲಾಗುತ್ತಿದೆ. ಆದರೆ ಈ ಭಾರಿ ಟಿಕೆಟ್ ದರ ಮೊದಲ ಮೂರು ವಾರಗಳು ಮಾತ್ರವೇ ಇರಲಿದೆ. ಅಲ್ಲದೆ ಪ್ರತಿದಿನ ಏಳು ಶೋ ಹಾಕಲು ಸಹ ಅನುಮತಿ ಪಡೆಯಲಾಗಿದೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿಯೂ ಸಹ ‘ಪುಷ್ಪ 2’ ಟಿಕೆಟ್ ದರ ಭಾರಿ ಮೊತ್ತದಲ್ಲೇ ಇರಲಿದೆ. ಮಲ್ಟಿಪ್ಲೆಕ್ಸ್​ಗಳಲ್ಲಿ 2000 ರೂಪಾಯಿ ದರ ಇರಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ