ಅತ್ಯಾಧುನಿಕ ಸಿನಿಮಾ ಸ್ಟುಡಿಯೋ ನಿರ್ಮಿಸಲಿದೆ ಆಂಧ್ರ ಸರ್ಕಾರ

ನೆರೆಯ ಆಂಧ್ರ ಪ್ರದೇಶದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಬೃಹತ್ ಸಿನಿಮಾ ಸ್ಟುಡಿಯೋ ನಿರ್ಮಿಸಲು ಆಂಧ್ರ ಸರ್ಕಾರ ಯೋಜನೆ ರೂಪಿಸಿದೆ. ಈ ಸ್ಟುಡಿಯೋ ವಿಶ್ವಗುಣಮಟ್ಟದ ಅತ್ಯುತ್ತಮ ತಂತ್ರಜ್ಞಾನವನ್ನು ಒಳಗೊಂಡಿರಲಿದೆ.

ಅತ್ಯಾಧುನಿಕ ಸಿನಿಮಾ ಸ್ಟುಡಿಯೋ ನಿರ್ಮಿಸಲಿದೆ ಆಂಧ್ರ ಸರ್ಕಾರ
Follow us
|

Updated on: Aug 25, 2024 | 11:51 AM

ಕರ್ನಾಟಕದಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುವ ಬಗ್ಗೆ ವರ್ಷಗಳಿಂದಲೂ ಮಾತು-ಕತೆ ನಡೆಯುತ್ತಲೇ ಇದೆ. ಬಂದ ಪ್ರತಿ ಸರ್ಕಾರವು ಫಿಲಂ ಸಿಟಿ ಕಟ್ಟಿಯೇ ಕಟ್ಟುತ್ತೇವೆ ಎನ್ನುತ್ತಾರೆ. ಚಿತ್ರರಂಗದ ಕೆಲ ಗಣ್ಯರು ಸಹ ಸಿಎಂ, ಇನ್ನಿತರೆ ಸಚಿವರನ್ನು ಭೇಟಿ ಮಾಡಿ ಸುದ್ದಿಗೋಷ್ಠಿಗಳನ್ನು ಕರೆದು ಚರ್ಚಿಸುತ್ತಾರೆ. ಆದರೆ ಈವರೆಗೆ ಫಿಲಂ ಸಿಟಿಗೆ ಒಂದು ಅಡಿಗಲ್ಲು ಸಹ ಹಾಕಲಾಗಿಲ್ಲ. ಇದರ ನಡುವೆ ನೆರೆಯ ಆಂಧ್ರ ಸರ್ಕಾರ ಇದೀಗ ಅತ್ಯಾಧುನಿಕ ಫಿಲಂ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ. ಇದಕ್ಕಾಗಿ 100 ಎಕರೆ ಸ್ಥಳವನ್ನು ಗುರುತಿಸಿದೆ. ಇದರ ಹಿಂದೆ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಶ್ರಮ ಇದೆ ಎನ್ನಲಾಗುತ್ತಿದೆ.

ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ ಸನಿಹ 100 ಎಕರೆ ಜಾಗವನ್ನು ಗುರುತಿಸಿದ್ದು ಅಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವ ಬಲು ಅದ್ಧೂರಿಯಾದ ಸಿನಿಮಾ ಸ್ಟುಡಿಯೋ ನಿರ್ಮಾಣ ಮಾಡಲಿದೆ. ಪ್ರಸ್ತುತ ತೆಲುಗು ಚಿತ್ರರಂಗ ಸಂಪೂರ್ಣವಾಗಿ ತೆಲಂಗಾಣಕ್ಕೆ ಸೀಮಿತವಾಗಿದೆ. ಪ್ರಮುಖ ಸ್ಟುಡಿಯೋಗಳು, ಫಿಲಂ ಸಿಟಿಗಳು ಎಲ್ಲವೂ ಹೈದರಾಬಾದ್​ನಲ್ಲೇ ಸ್ಥಿತವಾಗಿವೆ. ಈಗ ಆಂಧ್ರದಲ್ಲಿ ಸಿನಿಮಾ ಕಾರ್ಯಗಳಿಗೆ ಒತ್ತು ನೀಡಲೆಂದು ಈಗ 100 ಎಕರೆ ಸ್ಥಳದಲ್ಲಿ ಬೃಹತ್ ಸಿನಿಮಾ ಸ್ಟುಡಿಯೋ ನಿರ್ಮಾಣ ಮಾಡಲು ಆಂಧ್ರ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ:ಡ್ರಂಕ್ ಅಂಡ್ ಡ್ರೈವ್ ಬೇಟೆಗೆ ಇಳಿದ ಟ್ರಾಫಿಕ್ ಪೊಲೀಸ್​​: ಒಂದೇ ದಿನಕ್ಕೆ 779 ಪ್ರಕರಣ ದಾಖಲು

ಈ ಅತ್ಯಾಧುನಿಕ ಸ್ಟುಡಿಯೋಕ್ಕೆ ಅಮರಾವತಿ ಸಿನಿಮಾ ಸ್ಟುಡಿಯೋ ಎಂದು ಹೆಸರಿಡಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸ್ಟುಡಿಯೋ ಇದಾಗಿದ್ದು, ವಿಎಫ್​ಎಕ್ಸ್, ಗ್ರೀನ್ ಮ್ಯಾಟ್, ಮೋಷನ್ ಕ್ಯಾಪ್ಚರ್ ಇನ್ನಿತರೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡಲು ಸಹ ಇಲ್ಲಿ ಅವಕಾಶ ಇರಲಿದೆ. ಗುಣಮಟ್ಟದ ಸಿನಿಮಾ ನಿರ್ಮಾಣಕ್ಕೆ ಅವಶ್ಯಕವಾದ ಎಲ್ಲ ರೀತಿಯ ತಂತ್ರಜ್ಞಾನವನ್ನು, ಭಿನ್ನ ರೀತಿಯ ಸೆಟ್​ಗಳನ್ನು ಈ ಸ್ಟುಡಿಯೋ ಒಳಗೊಂಡಿರಲಿದೆ. ಮಾತ್ರವಲ್ಲದೆ ಎಡಿಟಿಂಗ್, ಡಬ್ಬಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್​ಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಸಹ ಅಮರಾವತಿ ಸಿನಿಮಾ ಸ್ಟುಡಿಯೋ ಒಳಗೊಂಡಿರಲಿದೆ.

ಮಾತ್ರವಲ್ಲದೆ ಆಂಧ್ರ ಪ್ರದೇಶದಲ್ಲಿ ಸಿನಿಮಾ ನಿರ್ಮಾಣ ಮಾಡುವವರಿಗೆ ವಿಶೇಷ ಸಬ್ಸಿಡಿಗಳನ್ನು ಕೊಡುವ ಬಗ್ಗೆಯೂ ಆಲೋಚನೆಗಳು ಚಾಲ್ತಿಯಲ್ಲಿವೆ. ಆಂಧ್ರ ಪ್ರದೇಶವನ್ನು ಸಹ ಶಕ್ತಿಯುತ ತೆಲುಗು ಸಿನಿಮಾ ಹಬ್ ಅನ್ನಾಗಿ ಮಾಡಬೇಕೆಂಬ ಕಾರಣಕ್ಕೆ ಸ್ಟುಡಿಯೋ ನಿರ್ಮಾಣ ಹಾಗೂ ಸಬ್ಸಿಡಿ ನೀಡಿಕೆ ಪ್ರಸ್ತಾವನೆಗಳ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಈಗ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ತೆಲುಗು ಚಿತ್ರರಂಗ ಬಹುತೇಕ ಹೈದರಾಬಾದ್​ನಲ್ಲೇ ಸ್ಥಿತವಾಗಿದೆ. ಹೈದರಾಬಾದ್​, ತೆಲಂಗಾಣ ರಾಜ್ಯಕ್ಕೆ ಸೇರಿಕೊಂಡಿದೆ. ಹಾಗಾಗಿ ಆಂಧ್ರದಲ್ಲಿ ಚಿತ್ರರಂಗ ಚಾಲ್ತಿಯಲ್ಲಿಲ್ಲ. ಆಂಧ್ರದಲ್ಲಿ ಪ್ರತ್ಯೇಕ ಚಿತ್ರರಂಗಕ್ಕೆ ಬೂಸ್ಟ್ ನೀಡಲೆಂದು ಚಂದ್ರಬಾಬು ನಾಯ್ಡು ಮುಂದಾಳತ್ವದ ಸರ್ಕಾರ ಮುಂದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ