10 ಕೋಟಿ ರೂಪಾಯಿ ಸಂಬಳ ಪಡೆದರೂ ಎಐ ಬಳಸಿ ಮ್ಯೂಸಿಕ್ ಮಾಡುವ ಸಂಗೀತ ನಿರ್ದೇಶಕ
ಎಲ್ಲೆಡೆಯಂತೆ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಕೂಡ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಕೆ ಆಗುತ್ತಿದೆ. ಅದನ್ನು ಸ್ವತಃ ಅನಿರುದ್ಧ್ ರವಿಚಂದರ್ ಅವರು ಒಪ್ಪಿಕೊಂಡಿದ್ದಾರೆ. ಅವರ ಮಾತು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅನಿರುದ್ಧ್ ಅವರು ಪ್ರಾಮಾಣಿಕವಾಗಿ ಈ ವಿಷಯ ಒಪ್ಪಿಕೊಂಡಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ (Anirudh Ravichander) ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಸ್ಟಾರ್ ನಟರ ಸಿನಿಮಾಗಳಿಗೆ ಸಂಗೀತ ನೀಡಿ ಅವರು ಸೈ ಎನಿಸಿಕೊಂಡಿದ್ದಾರೆ. ಅವರ ಬತ್ತಳಿಕೆಯಿಂದ ಬಂದ ‘ಜವಾನ್’, ‘ಜೈಲರ್’, ‘ಲಿಯೋ’ ಮುಂತಾದ ಸಿನಿಮಾಗಳ ಹಾಡುಗಳನ್ನು ಕೇಳಿ ಫ್ಯಾನ್ಸ್ ಎಂಜಾಯ್ ಮಾಡಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ‘ಕೂಲಿ’ ಸಿನಿಮಾಗೂ ಸಂಗೀತ ನೀಡಿದ್ದಾರೆ. ಆ ಸಿನಿಮಾ ಆಗಸ್ಟ್ 14ರಂದು ಬಿಡುಗಡೆ ಆಗಲಿದೆ. ಈ ಪ್ರಯುಕ್ತ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಚಾಟ್ ಜಿಪಿಟಿ ಬಗ್ಗೆ ಮಾತನಾಡಿದ್ದಾರೆ. ತಾವು ಕೂಡ ಎಐ (AI) ಬಳಸುವುದಾಗಿ ಅನಿರುದ್ಧ್ ರವಿಚಂದರ್ ಹೇಳಿದ್ದಾರೆ.
ಅನಿರುದ್ಧ್ ರವಿಚಂದರ್ ಅವರು ಪ್ರತಿ ಸಿನಿಮಾಗೆ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹಾಗಿದ್ದರೂ ಕೂಡ ಅವರು ಕೆಲವೊಮ್ಮೆ ಚಾಟ್ ಜಿಪಿಟಿ ಬಳಸಿ ಮ್ಯೂಸಿಕ್ ಮಾಡುತ್ತಾರೆ ಎಂಬುದು ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ. ಅಲ್ಲದೇ, ಕ್ರಿಯೇಟಿವ್ ಕೆಲಸದಲ್ಲಿ ಚಾಟ್ ಜಿಪಿಟಿ ಬಳುಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಅನಿರುದ್ಧ್ ರವಿಚಂದರ್ ಅವರು ಹೇಳಿದ್ದಾರೆ.
‘ನಾನು ಚಾಟ್ ಜಿಪಿಟಿ ಓಪನ್ ಮಾಡಿದೆ. ಇದು ಪೂರ್ತಿ ಸಾಂಗ್. ಆದರೆ 2 ಸಾಲಿನಲ್ಲಿ ನಾನು ನಿಂತಿದ್ದೇನೆ. ಏನು ಮಾಡಲಿ ಅಂತ ಚಾಟ್ ಜಿಪಿಟಿಗೆ ಕೇಳಿದೆ. ಇದು ನಿಜ. ಪ್ರಾಮಾಣಿಕವಾಗಿ ಹೇಳ್ತೀನಿ. ಕೇವಲ 2 ದಿನಗಳ ಹಿಂದೆ ಈ ರೀತಿ ಆಯಿತು. ಚಾಟ್ ಜಿಪಿಟಿ ಪ್ರೀಮಿಯಮ್ ಸಬ್ಸ್ಕ್ರೈಬ್ ಮಾಡಿದ್ದೆ. ಮುಂದಿನ 2 ಸಾಲಿಗೆ ಕೆಲವು ಐಡಿಯಾ ಕೊಡು ಅಂತ ಚಾಟ್ ಜಿಪಿಟಿಗೆ ಕೇಳಿದೆ’ ಎಂದಿದ್ದಾರೆ ಅನಿರುದ್ಧ್ ರವಿಚಂದರ್.
‘ಚಾಟ್ ಜಿಪಿಟಿ ನನಗೆ 10 ಲೈನ್ಸ್ ನೀಡಿತು. ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಸಾಂಗ್ ಪೂರ್ಣಗೊಳಿಸಿದೆ’ ಎಂದು ಅನಿರುದ್ಧ್ ರವಿಚಂದರ್ ಅವರು ಹೇಳಿದ್ದಾರೆ. ಈ ರೀತಿ ಕೆಲಸ ಮಾಡಲು ಅವರಿಗೆ 10 ಕೋಟಿ ರೂಪಾಯಿ ಸಂಭಾವನೆ ಕೊಡಬೇಕಾ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: ಅನಿರುದ್ಧ್ ರವಿಚಂದರ್ಗೆ ಕಿವಿಮಾತು ಹೇಳಿದ ಎಆರ್ ರೆಹಮಾನ್
ಅಂದಹಾಗೆ, ತಾವು ಚಾಟ್ ಜಿಪಿಟಿ ಬಳಸಿ ಸಿದ್ಧಪಡಿಸಿದ ಸಾಂಗ್ ಯಾವುದು ಎಂಬುದನ್ನು ಅನಿರುದ್ಧ್ ರವಿಚಂದರ್ ಅವರು ಬಹಿರಂಗಪಡಿಸಿಲ್ಲ. ಎಲ್ಲ ಕ್ಷೇತ್ರದಲ್ಲಿಯೂ ಈಗ ಎಐ ಬಳಕೆ ಆಗುತ್ತಿದೆ. ಪೂರ್ತಿ ಸಿನಿಮಾವನ್ನೇ ಎಐ ಬಳಸಿ ನಿರ್ಮಾಣ ಮಾಡಲಾಗುತ್ತಿದೆ. ಸಂಗೀತ ಸಂಯೋಜನೆ, ಸಾಹಿತ್ಯ ರಚನೆಯಂತಹ ಕೆಲಸಗಳಿಗೂ ಎಐ ಸಹಾಯ ಪಡೆಯಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








