ಕನ್ನಡದ ನಟಿ ಶ್ರೀಲೀಲಾ (Sreeleela) ತೆಲುಗು ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ತೆಲುಗಿನ ಸ್ಟಾರ್ ನಟರಾದ ಮಹೇಶ್ ಬಾಬು, ಪವನ್ ಕಲ್ಯಾಣ್ (Pawan Kalyan), ನಂದಮೂರಿ ಬಾಲಕೃಷ್ಣ, ಯುವಸ್ಟಾರ್ಗಳಾಗಿ ವಿಜಯ್ ದೇವರಕೊಂಡ ಇನ್ನೂ ಕೆಲವು ಸ್ಟಾರ್ ನಟರು ಸಹ ತಮ್ಮ ಸಿನಿಮಾಕ್ಕೆ ಶ್ರೀಲೀಲಾರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದು ಇತರೆ ಕೆಲವು ನಟಿಯರ ಅಸೂಯೆಗೆ ಕಾರಣವಾಗಿದೆ.
ಅಂಜಲಿ ತೆಲುಗಿನ ಜನಪ್ರಿಯ ನಟಿ ಆದರೆ ಅನುಷ್ಕಾ ಶೆಟ್ಟಿ, ತಮನ್ನಾ, ಕಾಜಲ್ ಅಗರ್ವಾಲ್ ರೀತಿ ದೊಡ್ಡ ಹೆಸರು ಗಳಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದರೂ ಕೆಲವು ನೆನಪುಳಿವ ಸಿನಿಮಾಗಳಲ್ಲಿ ಅಂಜಲಿ ನಟಿಸಿದ್ದಾರೆ. ಇದೀಗ ಅವರ ನಟನೆಯ ‘ಗೀತಾಂಜಲಿ ಮಳ್ಳೊಂಚ್ಚಿಂದಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ, ನಟಿ ಶ್ರೀಲೀಲಾ ಜೊತೆ ಹೋಲಿಸಿದ ಪತ್ರಕರ್ತೆಯೊಬ್ಬರ ಮೇಲೆ ಅಸಮಾಧಾನ ಪ್ರದರ್ಶನ ಮಾಡಿದರು.
‘ಅಂಜಲಿ ಅವರೆ ನೀವು ತೆಲುಗಿನ ಪ್ರೇಕ್ಷಕರ ಮೆಚ್ಚಿನ ನಟಿ. ಆದರೆ ನಿಮಗೆ ಶ್ರೀಲೀಲಾಗೆ ಸಿಕ್ಕ ರೀತಿಯ ಯಶಸ್ಸು ಸಿಕ್ಕಿಲ್ಲ’ ಎಂದರು. ಪತ್ರಕರ್ತೆಯ ಮಾತನ್ನು ಅರ್ಧಕ್ಕೆ ನಿಲ್ಲಿಸಿದ ಅಂಜಲಿ, ಸಿಟ್ಟಿನಿಂದಲೇ, ‘ನಿಮ್ಮ ಮಾತು ನಾನು ಒಪ್ಪುವುದಿಲ್ಲ. ನಾನು ಎಂದಿಗೂ ಹೆಚ್ಚು ಸಿನಿಮಾದಲ್ಲಿ ನಟಿಸಬೇಕು, ನಾನು ನಂಬರ್ 1 ನಂಬರ್ 2 ಎಂದೆಲ್ಲ ರೇಸ್ನಲ್ಲಿ ಇಲ್ಲ. ಇರುವುದೂ ಇಲ್ಲ. ನನಗೆ ನಾನು ಮಾಡುವ ಪಾತ್ರಗಳು ಮುಖ್ಯ, ನಾನು ಕೆಲವು ಬಹಳ ಒಳ್ಳೆಯ ಪಾತ್ರಗಳಲ್ಲಿ ನಟಿಸಿದ್ದೇನೆ’’ ಎಂದಿದ್ದಾರೆ.
ಇದನ್ನೂ ಓದಿ:ಪವನ್ ಕಲ್ಯಾಣ್ 4ನೇ ಮದುವೆಯಾಗ್ತಾರೆ, ರಾಜಕೀಯದಲ್ಲಿ ಏಳ್ಗೆಯಿಲ್ಲ: ವೇಣು ಸ್ವಾಮಿ ಭವಿಷ್ಯ
ಮುಂದುವರೆದು, ‘ನಾನು ಈಗಲೂ ಸಹ ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದೇನೆ. ನಾನು ತೆಲುಗು ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಿಲ್ಲ ಬದಲಿಗೆ ಬೇರೆ-ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಇಂದು ಇಲ್ಲಿಗೆ ಬರುವುದು ಸಹ ನನಗೆ ಬಹಳ ಕಷ್ಟವಾಗಿತ್ತು, ತಮಿಳು, ಕನ್ನಡ, ಮಲಯಾಳಂ ಭಾಷೆಗಳ ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದೇನೆ. ತೆಲುಗು ಚಿತ್ರರಂಗದಲ್ಲಿ ಮಾತ್ರವೇ ನಟಿಸುತ್ತಿದ್ದರೆ ನನಗೂ ಸಹ ಬೇರೆ ನಟಿಯರಂತೆ ಐದು ಆರು ಸಿನಿಮಾಗಳು ಸಿಗುತ್ತಿದ್ದವೇನೋ’’ ಎಂದಿದ್ದಾರೆ ಅಂಜಲಿ.
ಅಂಜಲಿ, ಕನ್ನಡದ ‘ಹೊಂಗನಸು’, ಪುನೀತ್ ರಾಜ್ಕುಮಾರ್ ನಟನೆಯ ‘ರಣವಿಕ್ರಮ’, ಶಿವರಾಜ್ ಕುಮಾರ್ ನಟನೆಯ ‘ಭೈರಾಗಿ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಇವರು ನಟಿಸಿರುವ ‘ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚಟ್ಟು’, ತಮಿಳಿನಲ್ಲಿ ನಟಿಸಿರುವ ‘ಅಂಗಾಡಿ ತೇರು’, ‘ಮಂಕತ್ತ’, ‘ಸಿಂಗಂ 2’, ‘ಎಂಗೆಯುಮ್ ಎಪ್ಪೋತುಮ್’ ‘ಪಾವ ಕತೆಗಳ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ