20 ವರ್ಷದ ಬಳಿಕ ಮತ್ತೆ ರೀ ಎಂಟ್ರಿಗೆ ಸಜ್ಜಾದ ನಟಿ, ಇಷ್ಟು ವರ್ಷ ಎಲ್ಲಿದ್ದರು?
Anshu: ಚಿತ್ರರಂಗಕ್ಕೆ ಕಾಲಿಟ್ಟು ಅವಕಾಶಗಳ ಮೇಲೆ ಅವಕಾಶಗಳನ್ನು ಪಡೆಯುತ್ತಿದ್ದ ಹೊತ್ತಿನಲ್ಲಿಯೇ ಚಿತ್ರರಂಗದಿಂದ ಕಣ್ಮರೆಯಾಗಿದ್ದ ನಟಿ ಈಗ 20 ವರ್ಷಗಳ ಬಳಿಕ ಮತ್ತೆ ಬಂದಿದ್ದಾರೆ. ಯಾರಿದು?
ನಾಯಕಿಯರಿಗೆ ಚಿತ್ರರಂಗದಲ್ಲಿ ಆಯಸ್ಸು ಕಡಿಮೆ ಎನ್ನಲಾಗುತ್ತದೆ. ಹತ್ತು ವರ್ಷ ಒಬ್ಬ ನಟಿ ನಾಯಕಿಯಾಗಿಯೇ ನಟಿಸದರೆಂದರೆ ಅದನ್ನು ದೊಡ್ಡ ಸಾಧನೆಯೆಂದೇ ಗುರುತಿಸಲಾಗುತ್ತದೆ. ಇದೇ ಕಾರಣಕ್ಕೆ ನಟಿಯರು ನಾಯಕಿಯಾಗಿ ಚಿತ್ರರಂಗಕ್ಕೆ (Movie Industry) ಕಾಲಿಟ್ಟಾಗ ಸಿಕ್ಕ-ಸಿಕ್ಕ ಅವಕಾಶಗಳನ್ನೆಲ್ಲ ಬಾಚಿಕೊಂಡು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಾರೆ. ಆದರೆ ಇಲ್ಲೊಬ್ಬ ನಟಿ, ಚಿತ್ರರಂಗದಲ್ಲಿ ಕಾಲಿಟ್ಟಾಗ ಸಖತ್ ಹೆಸರು ಗಳಿಸಿ, ಅವಕಾಶಗಳು ಒಂದರ ಹಿಂದೊಂದು ಬರುತ್ತಿರುವ ಸಮಯದಲ್ಲಿಯೇ ಚಿತ್ರರಂಗದಿಂದ ಹಠಾತ್ತನೆ ಮರೆಯಾಗಿ ಈಗ ಬರೋಬ್ಬರಿ 20 ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಬಂದಿದ್ದಾರೆ.
2002ರಲ್ಲಿ ಬಿಡುಗಡೆ ಆದ ಅಕ್ಕಿನೇನಿ ನಾಗಾರ್ಜುನ ನಟನೆಯ ‘ಮನ್ಮುದುಡು’ ಸಿನಿಮಾ ಪ್ರಿಯರಿಗೆ ನೆನಪಿರುತ್ತದೆ. ತೆಲುಗು ಹಾಸ್ಯ ಸಿನಿಮಾಗಳಲ್ಲಿ ಇದು ಕಲ್ಟ ಸ್ಥಾನ ಪಡೆದುಕೊಂಡಿದೆ. ಈಗಲೂ ಈ ಸಿನಿಮಾದ ದೃಶ್ಯಗಳು ರೀಲ್ಸ್ಗಳಲ್ಲಿ ಆಗಾಗ್ಗೆ ಕಾಣುತ್ತಿರುತ್ತವೆ. ಸಿನಿಮಾದ ಮುಖ್ಯ ನಾಯಕಿ ಸೊನಾಲಿ ಬೇಂದ್ರೆ ಆಗಿದ್ದರೂ ಸಹ ಇದೇ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದ ಅಂಶು ಅಂಬಾನಿ ಸಖತ್ ಜನ ಮೆಚ್ಚುಗೆ ಗಳಿಸಿದ್ದರು. ‘ಮನ್ಮದುಡು’ ಸಿನಿಮಾದಲ್ಲಿ ಅವರದ್ದು ಸಣ್ಣ ಪಾತ್ರವಾದರು, ಜನ ಇಷ್ಟಪಟ್ಟಿದ್ದರು.
ಇದನ್ನೂ ಓದಿ:Medha Shankar: ‘12th ಫೇಲ್ ನಾಯಕಿ ಮೇಧಾ ಖಾತೆಯಲ್ಲಿ ಇತ್ತು ಕೇವಲ 257 ರೂಪಾಯಿ
‘ಮನ್ಮದುಡು’ ಸಿನಿಮಾ ಮಾಡಿದ ಬೆನ್ನಲ್ಲೆ ಅವರಿಗೆ ಪ್ರಭಾಸ್ ನಟನೆಯ ‘ರಾಘವೇಂದ್ರ’ ಸಿನಿಮಾದ ಆಫರ್ ಸಿಕ್ಕಿತು. ಆ ಸಿನಿಮಾದ ಬಳಿಕ ಅದೇ ವರ್ಷ (2003) ಭೂಮಿಕ ನಟನೆಯ ‘ಮಿಸ್ಸಮ್ಮ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದರು. ಅದಾದ ಮರು ವರ್ಷ ತಮಿಳಿನ ‘ಜೈ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಇದೇ ಅವರ ಕೊನೆಯ ಸಿನಿಮಾ. ಕೆವಲ ಮೂರು ಸಿನಿಮಾ ಮಾಡಿ ಹಠಾತ್ತನೆ ಚಿತ್ರರಂಗದಿಂದ ಕಣ್ಮರೆಯಾದರು. ಈಗ ಬರೋಬ್ಬರಿ 20 ವರ್ಷಗಳ ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸಲೆಂದು ಬಂದಿದ್ದಾರೆ.
ಅಂಶು ಅಂಬಾನಿ ಈಗ ಅಂಶು ಸಾಗರ್ ಹೇಳಿರುವಂತೆ, ಅವರು ಮೂಲತಃ ಲಂಡನ್ನಲ್ಲಿ ಜನಿಸಿ ಅಲ್ಲಿಯೇ ವಾಸವಿದ್ದವರು. ‘ಮನ್ಮುದುಡು’ ಸಿನಿಮಾದ ಬಳಿಕ ಹಲವು ಆಫರ್ಗಳು ಅವರಿಗೆ ದೊರಕಿತು. ಆದರೆ ಭಾರತದಲ್ಲಿ ಅವರನ್ನು ನೋಡಿಕೊಳ್ಳಲು ಕುಟುಂಬದವರು ಯಾರೂ ಇರಲಿಲ್ಲ. ಈಗಿನಂತೆ ಆಗ ಸಂಪರ್ಕ ಸಾಧನಗಳು ಸಹ ಹೆಚ್ಚಿಗಿರಲಿಲ್ಲ. ಅಲ್ಲದೆ ಸಿನಿಮಾದ ಅವಕಾಶಗಳು ಹುಡುಕಿ ಬರಲು ಪಿಆರ್ ಏಜೆನ್ಸಿಗಳಿರಲಿಲ್ಲ. ಕಚೇರಿಗಳಿರಲಿಲ್ಲ, ಈ ಕಾರಣದಿಂದ ಎಷ್ಟೋ ನಿರ್ಮಾಪಕರಿಗೆ ಅಂಶು ಅವರನ್ನು ಸಂಪರ್ಕ ಮಾಡಲು ಸಹ ಸಾಧ್ಯವಾಗಲಿಲ್ಲವಂತೆ. ಅಲ್ಲದೆ ಲಂಡನ್ನಿಂದ ಸಿನಿಮಾಗಳಿಗಾಗಿ ಭಾರತಕ್ಕೆ ಬಂದು ಹೋಗಿ ಮಾಡುವುದು ಸಹ ಬಹಳ ಕಷ್ಟವಾಗಿತ್ತಂತೆ ಹಾಗಾಗಿ ಅವರು ಭಾರತ ತೊರೆದು ಲಂಡನ್ಗೆ ಮರಳಿಬಿಟ್ಟರಂತೆ.
‘ಮನ್ಮದುಡು’ ಸಿನಿಮಾ ಮಾಡಿದಾಗ ಅವರಿಗಿನ್ನೂ 17 ವರ್ಷ ವಯಸ್ಸು, ಆಗಿನ್ನೂ ಕಾಲೇಜು ಕಲಿಯುತ್ತಿದ್ದರಂತೆ. 2004 ರಲ್ಲಿ ಚಿತ್ರರಂಗ ತೊರೆದು ವಾಪಸ್ ಹೋಗಿ ಶಿಕ್ಷಣ ಪೂರ್ಣಗೊಳಿಸಿ ಥೆರಪಿಸ್ಟ್ ಆಗಿ ಲಂಡನ್ನಲ್ಲಿಯೇ ಕೆಲಸ ಪ್ರಾರಂಭ ಮಾಡಿದರು ಅಂಶು, ಅಲ್ಲಿಯೇ ಉದ್ಯಮಿ ಸಾಗರ್ ಎಂಬುವರನ್ನು ವಿವಾಹವಾಗಿ ಇಬ್ಬರು ಮಕ್ಕಳ ತಾಯಿಯೂ ಆದರು. ಈಗ ಬರೋಬ್ಬರಿ 20 ವರ್ಷಗಳ ಬಳಿಕ ಅಂಶು ಭಾರತಕ್ಕೆ ವಾಪಸ್ ಆಗಿದ್ದು ಮತ್ತೆ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ