AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲ ಅನುಷ್ಕಾ ಶೆಟ್ಟಿ; ಆತಂಕದಲ್ಲಿದೆ ‘ಮಿಸ್​ ಶೆಟ್ಟಿ..’ ಭವಿಷ್ಯ

ಆರಂಭದಲ್ಲಿ ಅನುಷ್ಕಾ ಶೆಟ್ಟಿ ಅವರು ಈ ರೀತಿ ಇರಲಿಲ್ಲ. ತಮ್ಮ ಸಿನಿಮಾಗಳ ಪ್ರಚಾರದಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅದು ಸಿನಿಮಾಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು. ಆದರೆ ಈಗ ಅವರು ‘ಮಿಸ್​ ಶೆಟ್ಟಿ ಮಿಸ್ಟರ್​ ಪೊಲಿಶೆಟ್ಟಿ’ ಸಿನಿಮಾದ ಪ್ರಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲ ಅನುಷ್ಕಾ ಶೆಟ್ಟಿ; ಆತಂಕದಲ್ಲಿದೆ ‘ಮಿಸ್​ ಶೆಟ್ಟಿ..’ ಭವಿಷ್ಯ
ಅನುಷ್ಕಾ ಶೆಟ್ಟಿ
ಮದನ್​ ಕುಮಾರ್​
|

Updated on: Aug 27, 2023 | 2:33 PM

Share

ಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ಈಗ ಸಿನಿಮಾಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ‘ಬಾಹುಬಲಿ 2’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆದರೂ ಕೂಡ ಅವರು ಆ ಬಳಿಕ ಹೆಚ್ಚು ಸಿನಿಮಾಗಳನ್ನು ಮಾಡಲಿಲ್ಲ. ಇದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಮಾಡಿದ ಕೆಲವು ಸಿನಿಮಾಗಳು ಕೂಡ ನಿರೀಕ್ಷಿತ ಮಟ್ಟದ ಗೆಲುವು ಕಾಣಲಿಲ್ಲ. ಈ ಹಂತದಲ್ಲಿ ಅನುಷ್ಕಾ ಶೆಟ್ಟಿ ಅವರು ಹೆಚ್ಚು ಶ್ರಮ ಹಾಕಿ ಕೆಲಸ ಮಾಡಬೇಕಿದೆ. ಆದರೆ ಅವರು ಆ ಬಗ್ಗೆ ಗಮನ ಹರಿಸುತ್ತಿರುವಂತೆ ಕಾಣುತ್ತಿಲ್ಲ. ಈಗ ಅವರು ನಟಿಸಿರುವ ಹೊಸ ಸಿನಿಮಾ ‘ಮಿಸ್​ ಶೆಟ್ಟಿ ಮಿಸ್ಟರ್​ ಪೊಲಿಶೆಟ್ಟಿ’ (Miss Shetty Mr Polishetty) ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಪ್ರಚಾರ ಮಾಡಲು ಅನುಷ್ಕಾ ಶೆಟ್ಟಿ ಉತ್ಸಾಹ ತೋರುತ್ತಿಲ್ಲ. ಈ ಬಗ್ಗೆ ಟಾಲಿವುಡ್​ (Tollywood) ಅಂಗಳದಲ್ಲಿ ಚರ್ಚೆ ಶುರುವಾಗಿದೆ. ಅನುಷ್ಕಾ ಶೆಟ್ಟಿ ಅವರು ಯಾಕೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಆರಂಭದಲ್ಲಿ ಅನುಷ್ಕಾ ಶೆಟ್ಟಿ ಅವರು ಈ ರೀತಿ ಇರಲಿಲ್ಲ. ತಮ್ಮ ಸಿನಿಮಾಗಳ ಪ್ರಚಾರದಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅದು ಸಿನಿಮಾಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು. ಆದರೆ ಈಗ ಅವರು ‘ಮಿಸ್​ ಶೆಟ್ಟಿ ಮಿಸ್ಟರ್​ ಪೊಲಿಶೆಟ್ಟಿ’ ಸಿನಿಮಾದ ಪ್ರಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಮೇಲೆ ನಿರೀಕ್ಷಿತ ಮಟ್ಟದಲ್ಲಿ ಹೈಪ್​ ಕ್ರಿಯೇಟ್​ ಆಗಿಲ್ಲ. ಪರಿಸ್ಥಿತಿ ಹೀಗಿರುವಾಗ ಅನುಷ್ಕಾ ಶೆಟ್ಟಿ ಅವರು ಪ್ರಚಾರ ಮಾಡದಿದ್ದರೆ ಖಂಡಿತವಾಗಿಯೂ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ಪೆಟ್ಟು ಬೀಳಲಿದೆ ಎಂಬುದು ಅನೇಕರ ಅಭಿಪ್ರಾಯ. ನೆಪಮಾತ್ರಕ್ಕೆ ಎಂಬಂತೆ ಸಿನಿಮಾವನ್ನು ಪ್ರಚಾರ ಮಾಡುವ ಸಲುವಾಗಿ ಅನುಷ್ಕಾ ಶೆಟ್ಟಿ ಅವರು ಒಂದು ವಿಡಿಯೋ ಸಂದರ್ಶನ ನೀಡಲಿದ್ದಾರೆ. ಅದನ್ನೇ ಎಲ್ಲ ಮಾಧ್ಯಮಗಳಿಗೂ ಹಂಚಲಾಗುವುದು. ಪ್ರತ್ಯೇಕವಾಗಿ ಯಾರಿಗೂ ಅವರು ಸಂದರ್ಶನ ನೀಡುವುದಿಲ್ಲ ಎಂಬ ಸುದ್ದಿ ಕೇಳಿಬಂದಿದೆ.

ಇದನ್ನೂ ಓದಿ: ನಟಿ ಅನುಷ್ಕಾ ಶೆಟ್ಟಿ ಸಂಭಾವನೆ ಎಷ್ಟು? ಕಡಿಮೆ ಸಿನಿಮಾ ಮಾಡಿದರೂ ಪಡೆಯುತ್ತಾರೆ ಕೋಟಿ ಕೋಟಿ ಹಣ

ಇತ್ತೀಚೆಗೆ ‘ಮಿಸ್​ ಶೆಟ್ಟಿ ಮಿಸ್ಟರ್​ ಪೊಲಿಶೆಟ್ಟಿ’ ಸಿನಿಮಾದ ಟ್ರೇಲರ್​ ಲಾಂಚ್​ ಆಯಿತು. ಅದಕ್ಕೆ ಅನುಷ್ಕಾ ಶೆಟ್ಟಿ ಅವರು ಹಾಜರಿ ಹಾಕಲಿಲ್ಲ. ಅವರ ಅನುಪಸ್ಥಿತಿಯಿಂದ ಅಭಿಮಾನಿಗಳಿಗೆ ಬೇಸರ ಆಗಿದ್ದು ನಿಜ. ಚಿತ್ರತಂಡದ ಜೊತೆ ಅನುಷ್ಕಾ ಶೆಟ್ಟಿ ಅವರು ಏನಾದರೂ ಕಿರಿಕ್​ ಮಾಡಿಕೊಂಡಿರಬಹುದೇ ಎಂಬ ಅನುಮಾನ ಕೂಡ ಅಭಿಮಾನಿಗಳಲ್ಲಿ ಮೂಡಿದೆ. ಅಲ್ಲದೇ, ಈ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆಯೂ ಕೆಲವರಿಗೆ ಅಸಮಾಧಾನ ಇದೆ. ಯಾಕೆಂದರೆ, ಬಹುನಿರೀಕ್ಷಿತ ‘ಜವಾನ್’ ಸಿನಿಮಾದ ಎದುರು ‘ಮಿಸ್​ ಶೆಟ್ಟಿ ಮಿಸ್ಟರ್​ ಪೊಲಿಶೆಟ್ಟಿ’ ಚಿತ್ರ ರಿಲೀಸ್​ ಆಗುತ್ತಿದೆ.

ಇದನ್ನೂ ಓದಿ: ಶಾರುಖ್​ ಖಾನ್​ ವಿಚಾರದಲ್ಲಿ ತಪ್ಪು ಮಾಡಿದ್ರಾ ಅನುಷ್ಕಾ ಶೆಟ್ಟಿ; ಅಭಿಮಾನಿಗಳಿಗೆ ಶುರುವಾಯ್ತು ಚಿಂತೆ

‘ಮಿಸ್​ ಶೆಟ್ಟಿ ಮಿಸ್ಟರ್​ ಪೊಲಿಶೆಟ್ಟಿ’ ಸಿನಿಮಾ ಸೆಪ್ಟೆಂಬರ್​ 7ರಂದು ಬಿಡುಗಡೆ ಆಗುತ್ತಿದೆ. ಅದೇ ದಿನ ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾ ತೆರೆಕಾಣುತ್ತಿದೆ. ‘ಜವಾನ್​’ ಚಿತ್ರದ ಬಗ್ಗೆ ಎಷ್ಟರಮಟ್ಟಿಗಿನ ಕ್ರೇಜ್​ ಸೃಷ್ಟಿ ಆಗಿದೆ ಎಂಬುದನ್ನು ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಅಂಥ ಮಾಸ್​ ಸಿನಿಮಾದ ಎದುರಿನಲ್ಲಿ ‘ಮಿಸ್​ ಶೆಟ್ಟಿ ಮಿಸ್ಟರ್​ ಪೊಲಿಶೆಟ್ಟಿ’ ಸಿನಿಮಾವನ್ನು ಬಿಡುಗಡೆ ಮಾಡುತ್ತಿರುವುದು ಸರಿಯಾದ ನಿರ್ಧಾರ ಅಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.