ಸಂಗೀತ ಕಾರ್ಯಕ್ರಮದಲ್ಲಿ ಅವ್ಯವಸ್ಥೆ: ಕ್ಷಮೆ ಕೇಳಿದ ಎಆರ್ ರೆಹಮಾನ್, ತನಿಖೆಗೆ ಆದೇಶ
AR Rahman: ಎಆರ್ ರೆಹಮಾನ್ರ ಲೈವ್ ಕಾನ್ಸರ್ಟ್ನಲ್ಲಿ ತೀವ್ರ ಅವ್ಯವಸ್ಥೆಯಿಂದಾಗಿ ಹಲವರು ಅನಾನುಕೂಲತೆ ಎದುರಿಸಿದ್ದಾರೆ. ಕೆಲವು ಮಹಿಳೆಯರ ಮೇಲೆ ದೌರ್ಜನ್ಯ ಸಹ ನಡೆದಿದೆ. ಕಾರ್ಯಕ್ರಮದ ಅವ್ಯವಸ್ಥೆ ಬಗ್ಗೆ ಹಲವರು ದೂರಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚೆನ್ನೈನಲ್ಲಿ ಇತ್ತೀಚೆಗೆ ನಡೆದ ಎಆರ್ ರೆಹಮಾನ್ರ (AR Rahman) ಲೈವ್ ಸಂಗೀತ (Music) ಕಾರ್ಯಕ್ರಮ ತನ್ನ ಅವ್ಯವಸ್ಥೆಯಿಂದ ಸುದ್ದಿಯಾಗಿದೆ. ‘ಮರಕ್ಕುಮ್ ನಿಂಜಮ್’ ಹೆಸರಿನಲ್ಲಿ ಚೆನ್ನೈನ ಇಸಿಆರ್ನಲ್ಲಿ ಸೆಪ್ಟೆಂಬರ್ 10ರ ರಾತ್ರಿ ಎಆರ್ ರೆಹಮಾನ್ ಲೈವ್ ಕಾನ್ಸರ್ಟ್ ನಡೆದಿತ್ತು. ಕಾರ್ಯಕ್ರಮಕ್ಕೆ ಸುಮಾರು 40,000 ಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ತೀವ್ರ ಅವ್ಯವಸ್ಥೆಯಿಂದ ಕೂಡಿದ ಕಾರ್ಯಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಸ್ವತಃ ಎಆರ್ ರೆಹಮಾನ್ ಕ್ಷಮೆ ಕೇಳಿದ್ದಾರೆ. ಮಾತ್ರವಲ್ಲದೆ ಘಟನೆ ಕುರಿತು ತನಿಖೆಗೆ ಪೊಲೀಸ್ ಇಲಾಖೆ ಮುಂದಾಗಿದೆ.
ಎಸಿಟಿಸಿ ಇವೆಂಟ್ಸ್ನವರು ಈ ಇವೆಂಟ್ ಅನ್ನು ಆಯೋಜನೆ ಮಾಡುವ ಜವಾಬ್ದಾರಿ ಹೊತ್ತಿದ್ದರು. ಭಾರಿ ಸಂಖ್ಯೆಯ ಜನ ಕಾರ್ಯಕ್ರಮಕ್ಕೆ ಆಗಮಸಿದ ಕಾರಣ ಅತಿಯಾದ ನೂಕು ನುಗ್ಗಲು ಉಂಟಾಗಿದೆ. ಪೊಲೀಸ್ ಭದ್ರತೆ ಸಹ ಸೂಕ್ತವಾಗಿರಲಿಲ್ಲ ಎನ್ನಲಾಗಿದ್ದು, ಹಲವು ಯುವತಿಯರು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿರುವುದಾಗಿಯೂ ವರದಿಗಳಾಗಿವೆ. ಟಿಕೆಟ್ ಖರೀದಿಸಿದ ಹಲವರು ಇವೆಂಟ್ನ ಒಳಗೆ ಸಹ ಹೋಗಲು ಆಗದ ಸ್ಥಿತಿ ನಿರ್ಮಾಣವಾಗಿತ್ತೆಂದು ಹಲವರು ದೂರಿದ್ದಾರೆ.
ಸುಸ್ತಾಗಿ ಬಿದ್ದವರು, ಮಕ್ಕಳನ್ನು ಕಳೆದುಕೊಂಡು ಪರದಾಡಿದವರು, ಟಿಕೆಟ್ ಖರೀದಿಸಿಯೂ ಒಳಗೆ ಹೋಗಲು ಸಾಧ್ಯವಾಗದೆ ಮರಳಿದವರು, ಗಂಟೆಗಟ್ಟಲೆ ಕ್ಯೂನಲ್ಲಿ ಕಾದವರು ಹೀಗೆ ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು ಮಾತ್ರವೇ ಅಲ್ಲದೆ, ಇವೆಂಟ್ಗೆ ಭದ್ರತೆ ಒದಗಿಸಿದ್ದ ಪೊಲೀಸ್ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ.
ಇದನ್ನೂ ಓದಿ:ಎಆರ್ ರೆಹಮಾನ್ರ ‘ರೋಜಾ ಜಾನೇ ಮನ್’ ಹಾಡು ಹುಟ್ಟಿದ್ದು ಹೇಗೆ?
ಇವೆಂಟ್ನ ಜವಾಬ್ದಾರಿ ಹೊತ್ತಿದ್ದ ಎಸಿಟಿಸಿ ಇವೆಂಟ್ಸ್ ಸರಿಯಾಗಿ ಇವೆಂಟ್ ಅನ್ನು ಆರ್ಗನೈಜ್ ಮಾಡಿರಲಿಲ್ಲ ಎನ್ನಲಾಗುತ್ತಿದೆ. 25,000 ಜನರಿಗೆ ಪರ್ಮೀಷನ್ ಪಡೆದು 36,000 ಟಿಕೆಟ್ಗಳನ್ನು ಮಾರಾಟ ಮಾಡಿದ್ದರಂತೆ. ಅಲ್ಲದೆ ಸಾವಿರಾರು ಮಂದಿ ಟಿಕೆಟ್ಗಳನ್ನು ನಕಲು ಮಾಡಿ ಇವೆಂಟ್ಗೆ ಬಂದಿದ್ದಾಗಿ, ಅದರಿಂದಲೇ ನೂಕುನುಗ್ಗಲಾಯಿತು ಎಂದು ಹೇಳಲಾಗಿದೆ.
ಈ ಬಗ್ಗೆ ಕ್ಷಮೆ ಕೇಳಿರುವ ಎಆರ್ ರೆಹಮಾನ್, ‘ಆಗಿರುವ ಘಟನೆ ನನ್ನನ್ನು ತೀವ್ರವಾಗಿ ಬಾದಿಸಿದೆ ಹಾಗೂ ಆಗಿರುವ ಎಲ್ಲ ಕೆಡುಕಿಗೂ ನಾನು ಜವಾಬ್ದಾರಿ ಹೊರುತ್ತೇನೆ” ಎಂದಿದ್ದಾರೆ. ”ಪ್ರೀತಿಯ ಚೆನ್ನೈ ಜನರೇ, ಯಾರು ಟಿಕೆಟ್ ಖರೀದಿಸಿ, ನೂಕುನುಗ್ಗಲಿನಿಂದಾಗಿ ಶೋಗೆ ಬಾರದೇ ಹೋದವರು ದಯವಿಟ್ಟು ನಿಮ್ಮ ಟಿಕೆಟ್ನ ಕಾಪಿಯನ್ನು ನಮಗೆ ಇ-ಮೇಲ್ ಮಾಡಿ ನಮ್ಮ ತಂಡ ಕೂಡಲೇ ಸ್ಪಂದಿಸಿ ಟಿಕೆಟ್ ಹಣವನ್ನು ಹಿಂದಿರುಗಿಸುತ್ತದೆ” ಎಂದಿದ್ದಾರೆ.
ಎಆರ್ ರೆಹಮಾನ್ ಈ ವರೆಗೆ ಹಲವಾರು ಲೈವ್ ಕಾನ್ಸರ್ಟ್ಗಳನ್ನು ಮಾಡಿದ್ದಾರೆ. ದೇಶ-ವಿದೇಶಗಳಲ್ಲಿಯೂ ಲೈವ್ ಕಾನ್ಸರ್ಟ್ಗಳನ್ನು ಮಾಡಿದ್ದಾರೆ. ಅವರ ಕಾನ್ಸರ್ಟ್ಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಹರಿದು ಬರುತ್ತಾರೆ. ಆದರೆ ಈ ಬಾರಿ ವ್ಯವಸ್ಥೆ ಸರಿಯಿಲ್ಲದ ಕಾರಣ ಕಾನ್ಸರ್ಟ್ಗೆ ಆಗಮಿಸಿದವರಿಗೆ ತೀವ್ರ ಸಮಸ್ಯೆ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹಲವರು ಎಆರ್ ರೆಹಮಾನ್ ಅವರನ್ನು ಟೀಕಿಸಿದ್ದಾರೆ. ಇನ್ನು ಕೆಲವರು ಎಆರ್ ರೆಹಮಾನ್ ಸಂಗೀತದ ಬಗ್ಗೆ ತಲೆಕೆಡಿಸಿಕೊಳ್ಳಬಹುದೇ ವಿನಃ ಸೀಟು ಅರೇಂಜ್ ಮಾಡುವುದು, ಪಾರ್ಕಿಂಗ್ ವ್ಯವಸ್ಥೆ ಮಾಡುವುದು, ಪೊಲೀಸ್ ಭದ್ರತೆ ಪರೀಕ್ಷಿಸುವುದು ಇನ್ನಿತರೆಗಳನ್ನು ನೋಡಲಾಗುವುದಿಲ್ಲ, ಕಾರ್ಯಕ್ರಮದ ಅವ್ಯವಸ್ಥೆ ಅವರ ತಪ್ಪಲ್ಲ” ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ