
ಭಾರತೀಯ ಚಿತ್ರರಂಗದಲ್ಲಿ ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಚಾಲ್ತಿಯಲ್ಲಿದೆ. ಎಲ್ಲ ಸ್ಟಾರ್ ಹೀರೋಗಳು ಕೂಡ ಬಹುಭಾಷೆಯಲ್ಲಿ ಸಿನಿಮಾ ಮಾಡಲು ಉತ್ಸಾಹ ತೋರಿಸುತ್ತಿದ್ದಾರೆ. ಕಾಲಿವುಡ್ ನಟ ಅರುಣ್ ವಿಜಯ್ (Arun Vijay) ಕೂಡ ಈ ಸಾಲಿನಲ್ಲಿದ್ದಾರೆ. ಅವರು ಅಭಿನಯಿಸಿರುವ ‘ಮಿಷನ್: ಚಾಪ್ಟರ್ 1’ (Mission: Chapter 1) ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರವನ್ನು ಎಂ. ರಾಜಶೇಖರ್ ಹಾಗೂ ಎಸ್. ಸ್ವಾತಿ ಅವರು ನಿರ್ಮಿಸಿದ್ದಾರೆ. ಕಾಲಿವುಡ್ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಲೈಕಾ ಪ್ರೊಡಕ್ಷನ್ಸ್’ (Lyca Productions) ಮೂಲಕ ‘ಮಿಷನ್: ಚಾಪ್ಟರ್ 1’ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈಗ ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಇದರಲ್ಲಿ ಅರುಣ್ ವಿಜಯ್ ಅವರ ಭರ್ಜರಿ ಆ್ಯಕ್ಷನ್ ಗಮನ ಸೆಳೆದಿದೆ. ಜೊತೆಗೆ ಸೆಂಟಿಮೆಂಟ್ ಕಹಾನಿ ಕೂಡ ಸಿನಿಮಾದಲ್ಲಿದೆ ಎಂಬುದಕ್ಕೆ ಸುಳಿವು ಸಿಕ್ಕಿದೆ.
ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ‘ಮಿಷನ್: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗಲಿದೆ. ಈ ಎಲ್ಲ ಭಾಷೆಯಲ್ಲೂ ಟೀಸರ್ ಅನಾವರಣ ಆಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಂಡನ್ ಜೈಲೊಂದರಲ್ಲಿ ಈ ಸಿನಿಮಾದ ಬಹುಪಾಲು ಕಥೆ ನಡೆಯುತ್ತಿದೆ. ಅದರ ಝಲಕ್ ಟೀಸರ್ನಲ್ಲಿ ಕಾಣಿಸಿದೆ. ಜೈಲಿನಲ್ಲಿ ನಡೆಯುವ ರೋಚಕ ತಿರುವುಗಳು, ಜೈಲು ಅಧಿಕಾರಿಯಾಗಿ ಆಮಿ ಜಾಕ್ಸನ್ ಅಬ್ಬರದ ಜೊತೆ ಹೊಡೆದಾಟದ ದೃಶ್ಯಗಳು ಆ್ಯಕ್ಷನ್ ಪ್ರಿಯರ ಕಣ್ಮನ ಸೆಳೆದಿದೆ. ಅಲ್ಲದೇ, ಅಪ್ಪ-ಮಗಳ ಬಾಂಧವ್ಯ ಕೂಡ ಟೀಸರ್ನಲ್ಲಿ ಕೌತುಕ ಮೂಡಿಸಿದೆ.
ಇದನ್ನೂ ಓದಿ: Dasara Movie Collection: 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ದಸರಾ’; ಮೊದಲ ಬಾರಿ ಶತಕೋಟಿ ಕ್ಲಬ್ ಸೇರಿದ ನಾನಿ
ವಿಜಯ್ ಅವರು ‘ಮಿಷನ್: ಚಾಪ್ಟರ್ 1’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಇಂಡಿಯನ್’, ‘2.0’, ‘ಕೈದಿ 150’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಸುಭಾಸ್ಕರನ್ ಅವರು ಈಗ ‘ಪೊನ್ನಿಯಿನ್ ಸೆಲ್ವನ್ 2’, ‘ಇಂಡಿಯನ್ 2’ ಮುಂತಾದ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ವಿತರಣೆಯಲ್ಲೂ ಅವರ ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆ ಮುಂಚೂಣಿಯಲ್ಲಿದೆ. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದಲ್ಲಿ ‘ಮಿಷನ್: ಚಾಪ್ಟರ್ 1’ ಸಿನಿಮಾವನ್ನು ಈ ಸಂಸ್ಥೆಯೇ ರಿಲೀಸ್ ಮಾಡಲಿದೆ.
ಈ ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಟೀಸರ್ನಲ್ಲಿ ಕಾಣಿಸಿರುವ ದೃಶ್ಯಗಳ ಮೇಕಿಂಗ್ ಅದ್ದೂರಿಯಾಗಿದೆ. ಸಂದೀಪ್ ಕೆ. ವಿಜಯ್ ಅವರು ಛಾಯಾಗ್ರಹಣ, ಆಂಥೋನಿ ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಅರುಣ್ ವಿಜಯ್ ಹಾಗೂ ಆಮಿ ಜಾಕ್ಸನ್ ಜೊತೆ ನಿಮಿಷಾ ಸಜಯನ್, ಭರತ್ ಭೋಪಣ್ಣ, ಅಭಿ ಹಾಸನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.