New Kannada Movies: ‘ಬನಾರಸ್’, ‘ಕಂಬ್ಳಿಹುಳ’ ಜತೆ ಈ ವಾರ ಹಲವು ಸಿನಿಮಾ ರಿಲೀಸ್; ಪ್ರೇಕ್ಷಕರ ಆಯ್ಕೆ ಯಾವುದು?
Banaras | Kamblihula: ಅನೇಕ ಸಿನಿಮಾಗಳು ನವೆಂಬರ್ 4ರಂದು ಬಿಡುಗಡೆ ಆಗುತ್ತಿದೆ. ಈಗಾಗಲೇ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಚಿತ್ರಗಳ ಜೊತೆ ಹೊಸ ಸಿನಿಮಾಗಳು ಪೈಪೋಟಿಗೆ ಇಳಿಯಲಿವೆ.
ಪ್ರತಿ ಶುಕ್ರವಾರ ಎಂದರೆ ಸಿನಿಮಾಪ್ರಿಯರಿಗೆ ವಿಶೇಷ. ಯಾವ ಹೊಸ ಚಿತ್ರ ರಿಲೀಸ್ ಆಗಲಿದೆ ಎಂದು ಚಿತ್ರಪ್ರೇಮಿಗಳು ಕಾದು ಕುಳಿತಿರುತ್ತಾರೆ. ಅದೇ ರೀತಿ ಸಿನಿಮಾ ಮಂದಿಗೂ ಕೂಡ ಶುಕ್ರವಾರ ಎಂದರೆ ಹಣೆಬರಹ ಬದಲಾಗುವ ದಿನ. ಕೆಲವರಿಗೆ ಅದೃಷ್ಟ ಒಲಿಯಬಹುದು, ಇನ್ನು ಕೆಲವರ ಕೈ ಸುಟ್ಟು ಹೋಗಬಹುದು. ಅಂಥ ಎಲ್ಲ ಸಾಧ್ಯತೆಗಳಿಗೂ ಶುಕ್ರವಾರ ಸಾಕ್ಷಿ ಆಗುತ್ತದೆ. ಈ ವಾರ (ನ.4) ಕೂಡ ಹಲವು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಕನ್ನಡದಲ್ಲಿ ‘ಬನಾರಸ್’ (Banaras), ‘ಕಂಬ್ಳಿಹುಳ’ (Kamblihula) ಚಿತ್ರಗಳು ಬಹಳ ನಿರೀಕ್ಷೆ ಮೂಡಿಸಿವೆ. ಅದರ ಜೊತೆಗೆ ‘ನಹೀ ಜ್ಞಾನೇನ ಸದೃಶ್ಯಂ’, ‘ಸೆಪ್ಟೆಂಬರ್ 13’, ‘ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ’ ಸಿನಿಮಾಗಳು ಕೂಡ ತೆರೆಕಾಣುತ್ತಿವೆ. ಅದೇ ರೀತಿ ಪರಭಾಷೆಯಲ್ಲೂ ಹಲವು ಚಿತ್ರಗಳು ಈ ಶುಕ್ರವಾರ ಥಿಯೇಟರ್ ಬಾಗಿಲು ಬಡಿಯುತ್ತಿವೆ.
ಇದು ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ. ‘ಬನಾರಸ್’ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದ ಜೊತೆಗೆ ತಮಿಳು, ಹಿಂದಿ, ಮಲಯಾಳಂ ಹಾಗೂ ತೆಲುಗಿಗೆ ಡಬ್ ಆಗಿ ಈ ಸಿನಿಮಾ ತೆರೆಕಾಣುತ್ತಿದೆ. ಖ್ಯಾತ ನಿರ್ದೇಶಕ ಜಯತೀರ್ಥ ಅವರು ಇದಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಹೊಸ ನಟ ಝೈದ್ ಖಾನ್ ಹಾಗೂ ನಟಿ ಸೋನಲ್ ಮಾಂಥೆರೋ ಅವರು ಜೋಡಿಯಾಗಿ ನಟಿಸಿದ್ದಾರೆ. ತಿಲಕ್ ರಾಜ್ ಬಲ್ಲಾಳ್ ಅವರ ನಿರ್ಮಾಣ ಮಾಡಿದ್ದಾರೆ.
ಕನ್ನಡದ ಹೊಸ ಪ್ರತಿಭೆಗಳು ಸೇರಿಕೊಂಡು ಮಾಡಿರುವ ‘ಕಂಬ್ಳಿಹುಳ’ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಟ್ರೇಲರ್ ಮೂಲಕ ಈ ಚಿತ್ರ ಗಮನ ಸೆಳೆದಿದೆ. ಅಂಜನ್ ನಾಗೇಂದ್ರ, ಅಶ್ವಿತಾ ಹೆಗಡೆ, ರೋಹಿತ್ ಕುಮಾರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನವೀನ್ ಶ್ರೀನಿವಾಸ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್ ಒಂದು ಮಿಲಿಯನ್ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ.
ಹಿಂದಿಯಲ್ಲಿ ಜಾನ್ವಿ ಕಪೂರ್ ನಟನೆಯ ‘ಮಿಲಿ’ ಸಿನಿಮಾ ಬಿಡುಗಡೆ ಆಗುತ್ತಿದೆ. ಇದು ಮಲಯಾಳಂನ ‘ಹೆಲನ್’ ಸಿನಿಮಾದ ರಿಮೇಕ್. ಫ್ರೀಜರ್ನಲ್ಲಿ ಸಿಲುಕಿಕೊಂಡು ಪ್ರಾಣ ಉಳಿಸಿಕೊಳ್ಳಲು ಕಷ್ಟಪಡುವ ಯುವತಿಯ ಪಾತ್ರದಲ್ಲಿ ಜಾನ್ವಿ ಕಪೂರ್ ಅವರು ನಟಿಸಿದ್ದಾರೆ. ಇದರ ಜೊತೆಗೆ ‘ಫೋನ್ ಭೂತ್’ ಚಿತ್ರ ಸಹ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್, ಇಶಾನ್ ಖಟ್ಟರ್, ಸಿದ್ಧಾಂತ್ ಚತುರ್ವೇದಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಸೋನಾಕ್ಷಿ ಸಿನ್ಹಾ ಹಾಗೂ ಹುಮಾ ಖುರೇಶಿ ನಟಿಸಿರುವ ‘ಡಬಲ್ ಎಕ್ಸ್ ಎಲ್’ ಸಿನಿಮಾ ಕೂಡ ನ.4ರಂದು ತೆರೆಕಾಣಿತ್ತಿದೆ.
ತೆಲುಗಿನಲ್ಲಿ ‘ಊರ್ವಶಿವೋ ರಾಕ್ಷಸಿವೋ’, ‘ಲೈಕ್ ಶೇರ್ ಸಬ್ಸ್ಕ್ರೈಬ್’ ಚಿತ್ರಗಳು ರಿಲೀಸ್ ಆಗುತ್ತಿವೆ. ತಮಿಳುನಲ್ಲಿ ‘ಕಾಫಿ ವಿತ್ ಕಾದಲ್’, ‘ಲವ್ ಟುಡೇ’, ‘ನಿತಾಮ್ ಒರು ವಾನಂ’ ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:56 pm, Thu, 3 November 22