ಕರುನಾಡ ರಾಜರತ್ನ ಪುನೀತ್ ರಾಜ್ಕುಮಾರ್ (Puneeth Rajkumar) ಭೌತಿಕವಾಗಿ ನಮ್ಮನ್ನಗಲಿರಬಹುದು. ಆದರೆ ಅಭಿಮಾನಿಗಳ ಎದೆಯಲ್ಲಿ ಎಂದಿಗೂ ಅಜರಾಮರು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಬೀದರ್ನ ಈ ಅಭಿಮಾನಿ. ಅಪ್ಪಟ ಅಪ್ಪು ಅಭಿಮಾನಿಗಳಾಗಿರುವ ಬೀದರ್ನ ಈ ದಂಪತಿ ಇದೀಗ ಮಗುವಿಗೆ ತಮ್ಮ ನೆಚ್ಚಿನ ನಟನ ಹೆಸರನ್ನು ನಾಮಕರಣ ಮಾಡಿದ್ದಾರೆ. ಅದು ಕೂಡ ಶಿವಣ್ಣನ ಬಾಯಾರೆ ಎಂಬುದು ವಿಶೇಷ.
ಮಗುವಿನೊಂದಿಗೆ ಶಿವರಾಜ್ ಕುಮಾರ್ ಮನೆಗೆ ಬಂದಿದ್ದ ದಂಪತಿಗಳು ತಮ್ಮ ಮನದಾಸೆಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಮಗುವಿಗೆ ಅಪ್ಪು ಎಂದು ಹೆಸರಿಡಬೇಕೆಂದು ತಮ್ಮ ಬಯಕೆಯನ್ನು ತಿಳಿಸಿದ್ದರು. ಅಲ್ಲದೆ ಈ ನಾಮಕರಣ ಕಾರ್ಯವನ್ನು ನೀವೇ ನೆರವೇರಿಸಿಕೊಡಬೇಕೆಂದು ಶಿವಣ್ಣ ಅವರಲ್ಲಿ ಕೇಳಿಕೊಂಡಿದ್ದಾರೆ.
ಅಪ್ಪು ಅಭಿಮಾನಿಯ ಈ ಮನದಿಂಗಿತವನ್ನು ಕೇಳಿದ ಬಳಿಕ ಶಿವಣ್ಣ ಮಗುವಿಗೆ ಅಪ್ಪು ಅಂತ ಹೆಸರಿಟ್ಟು ಮುತ್ತಿಟ್ಟರು. ಅಲ್ಲದೆ ರಾಜವಂಶದ ಈ ಅಭಿಮಾನಿಗಳಿಗೆ ಆತಿಥ್ಯ ನೀಡಿ ಕಳುಹಿಸಿಕೊಟ್ಟರು. ಇದೀಗ ಶಿವಣ್ಣ ಬಾಯಿಂದ ಅಪ್ಪು ಎಂದು ಕರೆಸಿಕೊಂಡಿರುವ ಪುಟ್ಟ ಪುಟಾಣಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟೇ ಅಲ್ಲದೆ ರಾಜರತ್ನನ ಅಭಿಮಾನಿ ದಂಪತಿ ಕೂಡ ಫುಲ್ ಖುಷಿಯಾಗಿದ್ದಾರೆ.
ಒಟ್ಟಿನಲ್ಲಿ ಭೌತಿಕವಾಗಿ ನಮ್ಮಿಂದ ದೂರವಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಮರ ಎಂಬುದನ್ನು ಪ್ರತಿದಿನ ಅಭಿಮಾನಿಗಳು ನಿರೂಪಿಸುತ್ತಾ ಸಾಗುತ್ತಿದ್ದಾರೆ. ಏಕೆಂದರೆ ಕಳೆದ ವರ್ಷ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದ ಸಿದ್ದು ಮತ್ತು ಕಾವೇರಿ ದಂಪತಿ ಕೂಡ ತಮ್ಮ ಮೊದಲನೇ ಮಗುವಿಗೆ ಪುನೀತ್ ರಾಜ್ಕುಮಾರ್ ಎಂದು ನಾಮಕರಣ ಮಾಡಿದ್ದರು. ಇನ್ನು ಹಲವು ಅಭಿಮಾನಿಗಳು ಕೂಡ ಅಪ್ಪು ಹೆಸರನ್ನು ತಮ್ಮ ಮಕ್ಕಳಿಗೆ ನಿಕ್ ನೇಮ್ ಆಗಿ ಇರಿಸಿಕೊಂಡಿದ್ದಾರೆ.
ಈ ಮೂಲಕ ಪ್ರತಿಕ್ಷಣದಲ್ಲೂ ಪುನೀತ್ ರಾಜ್ಕುಮಾರ್ ಎಂಬ ರಾಜಕುಮಾರನನ್ನು ನೆನೆಯುತ್ತಿದ್ದಾರೆ. ಒಟ್ಟಿನಲ್ಲಿ ಅಪ್ಪು ಅಮರ…ಅಜರಾಮರ ಎಂಬುದನ್ನು ಅಭಿಮಾನಿಗಳು ಪ್ರತಿ ಸಂದರ್ಭದಲ್ಲೂ ನಿರೂಪಿಸುತ್ತಿರುವುದು ಅವರು ಗಳಿಸಿದ ಕೀರ್ತಿಗೆ ಪ್ರೀತಿಗೆ ಸಾಕ್ಷಿ ಎನ್ನಬಹುದು.