
ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ (Gold Suresh) ಮೇಲೆ ವಂಚನೆ ಆರೋಪ ಎದುರಾಗಿದೆ. ಅದಕ್ಕೆ ಅವರು ಸುದ್ದಿಗೋಷ್ಠಿ (Gold Suresh Press Meet) ಕರೆದು ಸ್ಪಷ್ಟನೆ ನೀಡಿದ್ದಾರೆ. ಕೇಬಲ್ ಚಾನೆಲ್ನ ಸೆಟಪ್ ಮಾಡುವುದಾಗಿ ಮೈನುದ್ದಿನ್ ಎಂಬುವವರಿಗೆ ಗೋಲ್ಡ್ ಸುರೇಶ್ ಹೇಳಿದ್ದರು. ಅದಕ್ಕಾಗಿ 14 ಲಕ್ಷ ರೂಪಾಯಿಗೆ ಒಪ್ಪಂದ ಆಗಿತ್ತು. ಸುರೇಶ್ ಅವರು 4 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದರು. ಆ ಬಳಿಕ ಹಂತ ಹಂತವಾಗಿ ಸುರೇಶ್ಗೆ ಮೈನುದ್ದೀನ್ ಅವರು 7 ಲಕ್ಷ ರೂ. ನೀಡಿದ್ದರು. 2017ರಲ್ಲಿ ಈ ಒಪ್ಪಂದ ನಡೆದಿತ್ತು. ಆದರೆ ಸುರೇಶ್ ಆ ಕೆಲಸ ಅರ್ಧಕ್ಕೆ ಬಿಟ್ಟರು ಹಾಗೂ ಹಣವನ್ನು ಮರಳಿ ನೀಡಿಲ್ಲ ಎಂದು ಮೈನುದ್ದೀನ್ ಆರೋಪಿಸಿದ್ದಾರೆ. ಅದಕ್ಕೆ ಗೋಲ್ಡ್ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
‘ದುಡ್ಡು ಕೊಟ್ಟರೆ ಮಾತ್ರ ಕೆಲಸ ಮುಂದುವರಿಸುತ್ತೇನೆ ಅಂತ ಅವರಿಗೆ ಹೇಳಿದ್ದೆ. ಯಾಕೆಂದರೆ ಈ ರೀತಿ ತುಂಬ ಪೆಟ್ಟುಗಳನ್ನು ನಾನು ತಿಂದಿದ್ದೆ. ಅವರ ವರ್ತನೆ ನನಗೆ ಇಷ್ಟ ಆಗಲಿಲ್ಲ. ಹಾಗಾಗಿ ಕೆಲಸ ಮಾಡಲ್ಲ ಅಂತ ಹೇಳಿ ಬೆಂಗಳೂರಿಗೆ ವಾಪಸ್ ಬಂದೆ. ಅವರು ನಮಗೆ 7 ಲಕ್ಷ ರೂಪಾಯಿ ನೀಡಿದ್ದರು. ಕೆಲಸ ಮಾಡಲ್ಲ ಎಂದರೆ ದುಡ್ಡು ವಾಪಸ್ ಕೊಡಿ ಅಂದರು. ಅಲ್ಲಿಯವರೆಗೆ ಕೆಲಸಕ್ಕೆ ತಗುಲಿದ ಹಣವನ್ನು ಬಿಟ್ಟು ಉಳಿದ ಹಣವನ್ನು ನಾನು ಅವರಿಗೆ ವಾಪಸ್ ನೀಡಿದ್ದೇನೆ’ ಎಂದು ಗೋಲ್ಡ್ ಸುರೇಶ್ ಹೇಳಿದ್ದಾರೆ.
‘2018ರಿಂದ ನಾನು ನನ್ನ ಪಾಡಿಗೆ ಬಿಸ್ನೆಸ್ ಮಾಡಿಕೊಂಡಿದ್ದೆ. ಈಗ ಆ ವ್ಯಕ್ತಿ ಸಡನ್ ಆಗಿ ಬಂದು ದುಡ್ಡು ಕೊಡಬೇಕು ಎಂದರು. ಇದು ಬಿಸ್ನೆಸ್ ವಿಷಯ. ಸಿವಿಲ್ ಕೋರ್ಟ್ನಲ್ಲಿ ಕೇಸ್ ಮಾಡಬಹುದಿತ್ತು. ಅಗ್ರಿಮೆಂಟ್ ಮುಗಿದು ಹೋಗಿದ್ದರೆ ಅದರ ಮೇಲೆ ಕೇಸ್ ಮಾಡಲು 3 ವರ್ಷ ಸಮಯ ಇರುತ್ತದೆ. ಅದನ್ನು ಕೂಡ ಅವರು ಮಾಡಿಲ್ಲ’ ಎಂದಿದ್ದಾರೆ ಗೋಲ್ಡ್ ಸುರೇಶ್.
‘ಸಡನ್ ಆಗಿ ಬೆಳಗ್ಗೆ ಒಂದು ಕರೆ ಬರುತ್ತದೆ. 6 ಲಕ್ಷ ರೂಪಾಯಿ ಹಣ ನೀಡದಿದ್ದರೆ ಮಾಧ್ಯಮಗಳ ಎದುರು ಹೋಗುತ್ತೇನೆ ಎಂದರು. ಈ ರೀತಿ ನನಗೆ ಬೆದರಿಕೆ ಹಾಕಿದರು. ನಾನು ಬಿಗ್ ಬಾಸ್ ಮುಗಿಸಿ ಬಂದ ಮೇಲೆ ಈ ವ್ಯಕ್ತಿ ಫೋನ್ ಮಾಡಿ ಸಹಾಯ ಮಾಡಿ ಅಂತ ಕೇಳಿದರು. ಹಾಗಾಗಿ ಮಾನವೀಯತೆ ದೃಷ್ಟಿಯಿಂದ 50 ಸಾವಿರ ರೂಪಾಯಿ ಕೊಡಿಸಿದ್ದೇನೆ. ಇದನ್ನು ಹೊರತುಪಡಿಸಿ ನಮಗೂ ಅವರಿಗೂ ಯಾವುದೇ ವ್ಯವಹಾರ ಇಲ್ಲ’ ಎಂದು ಗೋಲ್ಡ್ ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಹನುಮಂತನ ಮದುವೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡ ಗೋಲ್ಡ್ ಸುರೇಶ್
‘ಆತನ ವಿರುದ್ಧ ನಾನು ಕ್ರಮ ತೆಗೆದುಕೊಂಡಿದ್ದೇನೆ. ನ್ಯಾಯಾಲಯದ ಮೂಲಕ ಹೋರಾಟ ಮಾಡುತ್ತೇನೆ. ಮಾಧ್ಯಮಗಳಲ್ಲಿ ಆ ವ್ಯಕ್ತಿ ಏನು ಬೇಕಾದರೂ ಹೇಳುತ್ತಾನೆ. ನಾನು ಒಂದು ಕಡೆ ಇರುವ ವ್ಯಕ್ತಿ ಅಲ್ಲ. ಬಿಸ್ನೆಸ್ ಮ್ಯಾನ್ ಆದ್ದರಿಂದ ಅನೇಕ ಕಡೆಗಳಿಗೆ ಹೋಗುತ್ತೇನೆ. ನನ್ನ ಮೇಲೆ ಏನೂ ಕೇಸ್ ಆಗಿಲ್ಲ. ಆದರೆ ಆ ವ್ಯಕ್ತಿ ಮೇಲೆ ಕೇಸ್ ಹಾಕಿದ್ದೇನೆ’ ಎಂದಿದ್ದಾರೆ ಸುರೇಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.