ಶಮಂತ್ ಅಲಿಯಾಸ್ ಬ್ರೋ ಗೌಡ ಅವರ ಸ್ವಾರ್ಥಕ್ಕೆ ಇಡೀ ಮನೆಯವರು ಬಲಿ ಪಶು ಆಗಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಬ್ರೋ ಗೌಡ ಮಾಡಿದ ಒಂದೇ ತಪ್ಪಿಗೆ ಇಡೀ ಮನೆಯಲ್ಲಿ ರಾಮಾಯಣವೇ ನಡೆದು ಹೋಗಿದೆ. ಸದ್ಯ, ಬಿಗ್ ಬಾಸ್ ಮನೆ ಮಂದಿಯವರಿಗೆ ಬೆಡ್ ರೂಂ ಬೆಲೆ ಗೊತ್ತಾಗುತ್ತಿದೆ. ಇದಕ್ಕಾಗಿ ಬೆಡ್ಗಾಗಿ ಕಿತ್ತಾಟ ಹೊಡೆದಾಟ ನಡೆದಿದೆ.
ಕಳೆದ ವಾರ ಮೈಕ್ ಇದ್ದ ಹೊರತಾಗಿಯೂ ಬ್ರೋ ಗೌಡ ಎಲ್ಲರ ಕಿವಿಯಲ್ಲಿ ಹೋಗಿ ಮಾತನಾಡುತ್ತಿದ್ದರು. ಈ ಮೂಲಕ ಶಮಂತ್ ಅವರು ಬಿಗ್ ಬಾಸ್ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದಿದ್ದರು. ಅದಕ್ಕೆ ಶಿಕ್ಷೆಯಾಗಿ ಬಿಗ್ ಬಾಸ್ ಮೂರನೇ ವಾರದ ಎಲಿಮಿನೇಷನ್ಗೆ ಶಮಂತ್ ನೇರವಾಗಿ ನಾಮಿನೇಟ್ ಆಗಬೇಕು ಅಥವಾ ಮನೆಯವರೆಲ್ಲರೂ ಬೆಡ್ರೂಂ ಏರಿಯಾವನ್ನು ಬಿಟ್ಟುಕೊಡಬೇಕು ಎನ್ನುವ ಕಂಡೀಷನ್ ಹಾಕಿದ್ದರು ಸುದೀಪ್. ಮನೆಯವರೆಲ್ಲರೂ ಶಮಂತ್ಗಾಗಿ ಬೆಡ್ರೂಂ ಬಿಟ್ಟುಕೊಟ್ಟಿದ್ದರು. ಈಗ ಮನೆಯವರೆಲ್ಲರಿಗೂ ಬೆಡ್ ರೂಂನ ಬೆಲೆ ಗೊತ್ತಾಗುತ್ತಿದೆ. ಅದನ್ನು ಪಡೆದುಕೊಳ್ಳಲು ಎಲ್ಲರೂ ಕಿತ್ತಾಡುತ್ತಿದ್ದಾರೆ.
ಟಾಸ್ಕ್ವೊಂದರಲ್ಲಿ ಗೆದ್ದ ಅರವಿಂದ್-ದಿವ್ಯಾ ಉರುಡುಗ ಜೋಡಿಗೆ ವಿಶೇಷವಾದ ಚಾರ್ಜರ್ ಸಿಕ್ಕಿತು. ಅದನ್ನು ಅವರೇ ಇಟ್ಟುಕೊಳ್ಳಬಹುದು ಅಥವಾ ಅದನ್ನು ತ್ಯಾಗ ಮಾಡಿ ಮನೆಯ ಎಲ್ಲರಿಗೂ ಬೆಡ್ ರೂಮ್ ಕೊಡಿಸಬಹುದು. ಈ ಎರಡು ಅವಕಾಶಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ದಿವ್ಯಾ ಮತ್ತು ಅರವಿಂದ್ 10 ನಿಮಿಷ ಸಮಯಾವಕಾಶ ಕೇಳಿದರು. ಖಂಡಿತವಾಗಿಯೂ ಅವರು ಆ ಚಾರ್ಜರ್ ತ್ಯಾಗ ಮಾಡಿ, ಮನೆಯ ಸದಸ್ಯರಿಗೆ ಬೆಡ್ ರೂಮ್ ಕೊಡಿಸುತ್ತಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅವರ ಊಹೆ ತಪ್ಪಾಯಿತು. ಇದು ಒಂದು ಗೇಮ್. ಇಲ್ಲಿ ಭಾವನೆಗಳಿಗೆ ಬಲಿ ಆಗಬಾರದು ಎಂಬ ಕಾರಣಕ್ಕೆ ದಿವ್ಯಾ ಮತ್ತು ಅರವಿಂದ್ ಚಾರ್ಜರ್ ಅನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ನಿರ್ಧರಿಸಿದ್ದರು.
ಈ ಬಗ್ಗೆ ಮಾತನಾಡಿರುವ ರಘು ಗೌಡ, ನಮಗೆ ಬೆಡ್ ರೂಂ ಮರಳಿ ಸಿಗುತ್ತದೆ ಎಂದು ಭಾವಿಸಿದ್ದೆವು. ಆದರೆ, ನನ್ನ ಊಹೆ ತಪ್ಪಾಗಿದೆ. ಈಗ ನಮಗೆ ಬೆಡ್ರೂಂನ ಬೆಲೆ ಗೊತ್ತಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಪ್ರಶಾಂತ್ ಸಂಬರಗಿ ಕೂಡ ಹೌದು ಎಂದಿದ್ದಾರೆ. ಇನ್ನು, ದಿವ್ಯಾ ಉರುಡುಗ ಎಲ್ಲರ ಬಳಿ ಹೋಗಿ ಸಾರಿ ಕೇಳುತ್ತಿದ್ದರೂ ಯಾರೂ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಈ ವಿಚಾರದ ಬಗ್ಗೆ ಮಾತನಾಡಿರುವ ಅರವಿಂದ್, ಇದು ಟಾಸ್ಕ್. ಟಾಸ್ಕ್ ರೂಪದಲ್ಲೇ ಸ್ವೀಕರಿಸಬೇಕು. ಅದನ್ನು ಬಿಟ್ಟು ದೊಡ್ಡ ದೊಡ್ಡ ಮಾತುಗಳನ್ನು ಆಡುವುದಲ್ಲ. ಅಷ್ಟಕ್ಕೂ ಇವರು ಟಾಸ್ಕ್ ಮಾಡೋಕೆ ಬಂದಿದ್ದಾರಾ ಅಥವಾ ಗೇಮ್ ಆಡೋದಕ್ಕಾ ಎಂದು ಕೇಳುವ ಮೂಲಕ ಶುಭಾ ಪೂಂಜಾಗೆ ತಿರುಗೇಟು ನೀಡಿದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಅಶ್ವತ್ಥ್ ಶಂಕರ್ ನಿಜವಾದ ಬಣ್ಣ ಬಯಲು..
Published On - 10:19 pm, Wed, 17 March 21