Bigg Boss Kannada : ಶಂಕರ್ ಅಶ್ವತ್ಥ್ ಬಗ್ಗೆ 45 ವರ್ಷದಿಂದ ಅನೇಕರಿಗೆ ಗೊತ್ತಿರದ ರಹಸ್ಯ ಬಿಗ್ ಬಾಸ್​ನಲ್ಲಿ ಬಯಲು!

Shankar Ashwath: ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಮೊದಲ ವಾರದ ಪಂಚಾಯತಿಯಲ್ಲಿ ಹಲವು ವಿಷಯಗಳು ಚರ್ಚೆಗೆ ಬಂದಿವೆ. ತಮ್ಮ ವೈಯಕ್ತಿಕ ವಿಚಾರಗಳ ಕುರಿತು ಶಂಕರ್ ಅಶ್ವತ್ಥ್ ಮುಕ್ತವಾಗಿ ಮಾತನಾಡಿದ್ದಾರೆ.

Bigg Boss Kannada : ಶಂಕರ್ ಅಶ್ವತ್ಥ್ ಬಗ್ಗೆ 45 ವರ್ಷದಿಂದ ಅನೇಕರಿಗೆ ಗೊತ್ತಿರದ ರಹಸ್ಯ ಬಿಗ್ ಬಾಸ್​ನಲ್ಲಿ ಬಯಲು!
ಶಂಕರ್​ ಅಶ್ವತ್ಥ್​
Follow us
ರಾಜೇಶ್ ದುಗ್ಗುಮನೆ
|

Updated on: Mar 07, 2021 | 10:46 AM

ಹಿರಿಯ ನಟ ಶಂಕರ್ ಅಶ್ವತ್ಥ್ ಅವರ ಬಗ್ಗೆ ಸಿನಿಪ್ರಿಯರಿಗೆ ತುಂಬ ಗೌರವದ ಭಾವನೆ ಇದೆ. ಸ್ವಾಭಿಮಾನದಿಂದ ಅವರು ಕ್ಯಾಬ್ ಚಾಲಕನಾದ ವಿಷಯ ಕೇಳಿದ ಬಳಿಕವಂತೂ ಅವರ ಮೇಲಿನ ಗೌರವ ಇನ್ನೂ ಹೆಚ್ಚಾಗಿತ್ತು. ಅದೇನೇ ಇರಲಿ, ಈಗ ಬಿಗ್ ಬಾಸ್ ಸ್ಪರ್ಧಿ ಆಗಿರುವ ಶಂಕರ್ ಅವರು ಎಲ್ಲರ ಜೊತೆ ಮುಕ್ತವಾಗಿ ಬೆರೆಯುತ್ತಿದ್ದಾರೆ. ವೀಕೆಂಡ್ ಎಪಿಸೋಡ್​ನಲ್ಲಿ ಇನ್ನೊಂದು ರಹಸ್ಯವನ್ನು ಅವರು ಜಗಜ್ಜಾಹೀರು ಪಡಿಸಿದ್ದಾರೆ.

ಮೊದಲ ವಾರದ ಪಂಚಾಯತಿಯಲ್ಲಿ ಎಲ್ಲರನ್ನೂ ಕಿಚ್ಚ ಸುದೀಪ್ ಮಾತನಾಡಿಸಿದ್ದಾರೆ. ಇಷ್ಟು ದಿನಗಳ ಬಿಗ್ ಬಾಸ್ ಮನೆಯೊಳಗಿನ ಅನುಭವವನ್ನು ಹಂಚಿಕೊಳ್ಳುವ ಅವಕಾಶ ನೀಡಿದರು. ಆಗ ಶಂಕರ್ ಅಶ್ವತ್ಥ್ ಅವರು ತಮ್ಮ ಒಂದು ಕೆಟ್ಟ ಅಭ್ಯಾಸದ ಬಗ್ಗೆ ಹೇಳಿಕೊಂಡರು. ಕಳೆದ 45 ವರ್ಷಗಳಿಂದಲೂ ತಾವು ಸಿಗರೇಟ್ ಸೇದುತ್ತಿರುವ ವಿಷಯವನ್ನು ಅವರು ಒಪ್ಪಿಕೊಂಡಿದ್ದಾರೆ.

‘ಬಿಗ್ ಬಾಸ್ ಬಗ್ಗೆ ತುಂಬ ಹಿಂದೆಯೇ ಹಿರಿಯರೊಬ್ಬರು ನನಗೆ ಹೇಳಿದ್ದರು. ಬಿಗ್ ಬಾಸ್ ಮನೆಯೊಳಗೆ ಹೋದರೆ ಕೆಟ್ಟದನ್ನು ಬಿಡುತ್ತೀರಿ ಅಥವಾ ಒಳ್ಳೆಯದನ್ನು ಕಲಿಯುತ್ತೀರಿ ಎಂದಿದ್ದರು. ಕಳೆದ 45 ವರ್ಷದಿಂದ ನಾನು ಸಿಗರೇಟ್ ಸೇದುತ್ತಿದ್ದೇನೆ. ಈ ವಿಷಯ ಬಹುತೇಕರಿಗೆ ಗೊತ್ತಿಲ್ಲ. ಆದರೆ ಕಳೆದ ಎರಡು ವಾರದಿಂದ ನಾನು ಸಿಗರೇಟ್ ಮುಟ್ಟಿಲ್ಲ’ ಎಂದು ತಮ್ಮಲ್ಲಿ ಆಗಿರುವ ಒಂದು ಒಳ್ಳೆಯ ಬದಲಾವಣೆ ಬಗ್ಗೆ ಶಂಕರ್ ಹೇಳಿಕೊಂಡಿದ್ದಾರೆ. ಅದಕ್ಕೆ ಎಲ್ಲರಿಂದ ಚಪ್ಪಾಳೆ ಸಿಕ್ಕಿದೆ.

ಒಟ್ಟಾರೆಯಾಗಿ ಶಂಕರ್ ಅಶ್ವತ್ಥ್ ಅವರು ಬಿಗ್ ಬಾಸ್​ನಲ್ಲಿ ಪರ್ಫಾರ್ಮ್ ಮಾಡುತ್ತಿರುವ ಬಗ್ಗೆ ಸುದೀಪ್ ಕೂಡ ಪ್ರಶಂಸೆ ವ್ಯಕ್ತಪಡಿಸಿದರು. ಮನೆಯ ಇತರೆ ಸದಸ್ಯರಿಗೂ ಶಂಕರ್ ಬಗ್ಗೆ ಗೌರವ ಇದೆ. ಅನೇಕ ಅಭಿಪ್ರಾಯಗಳನ್ನು ಅವರು ಯಾವುದೇ ಮುಚ್ಚುಮರೆ ಇಲ್ಲದೆ ಹಂಚಿಕೊಳ್ಳುತ್ತಿದ್ದಾರೆ. ಹಿರಿಯರಾದ ಅವರ ಮಾತಿಗೆ ಎಲ್ಲ ಸ್ಪರ್ಧಿಗಳು ಮನ್ನಣೆ ನೀಡುತ್ತಿದ್ದಾರೆ. ಆದರೆ ಈ ವಾತಾವರಣ ಇನ್ನೆಷ್ಟು ದಿನ ಹಾಗೇ ಇರಲಿದೆಯೋ ಗೊತ್ತಿಲ್ಲ.

ಮೊದಲ ವಾರ ಯಾರು ಎಲಿಮಿನೇಟ್​ ಆಗುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ವೀಕ್ಷಕರು ಕಾಯುತ್ತಿದ್ದಾರೆ. ಈಗಾಗಲೇ ಶುಭಾ ಪೂಂಜಾ ಮತ್ತು ವಿಶ್ವನಾಥ್​ ಅವರು ಸೇಫ್​ ಆಗಿದ್ದಾರೆ. ರಘು, ನಿರ್ಮಲಾ ಚೆನ್ನಪ್ಪ ಮತ್ತು ಧನುಶ್ರೀ ಈ ಮೂವರಲ್ಲಿ ಒಬ್ಬರು ಬಿಗ್​ ಬಾಸ್​ ಮನೆಯಿಂದ ಹೊರಬರುವುದು ಖಚಿತ ಎಂದು ಸುದೀಪ್​ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada: ಈ ಬಾರಿ ಬಿಗ್​ ಬಾಸ್​ ಗೆಲ್ಲುವ ಸ್ಪರ್ಧಿ ಇವರೇ.. ಎಂದು ಭವಿಷ್ಯ ನುಡಿದ ಶಂಕರ್​ ಅಶ್ವತ್ಥ್​! ಆದರೆ

Bigg Boss Kannada: ಜೈಲುಪಾಲಾದ ಬಿಗ್​ ಬಾಸ್​ ಸ್ಪರ್ಧಿ ಧನುಶ್ರೀ! ಮೊದಲ ವಾರವೇ ಕಳಪೆ ಹಣೆಪಟ್ಟಿ