ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ (Smriti Irani) ಅವರು ಸೋಲು ಅನುಭವಿಸಿದ್ದಾರೆ. ಅಮೇಥಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರು ಸೋಲು ಕಂಡಿದ್ದಾರೆ. ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಬಿಜೆಪಿ (BJP) ಸಂಸದೆಯಾಗಿ ಇಷ್ಟು ದಿನ ಕೆಲಸ ಮಾಡಿದ್ದ ಸ್ಮೃತಿ ಇರಾನಿ ಅವರು ತಮ್ಮ ಜೊತೆಗಿದ್ದ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಪೋಸ್ಟ್ಗೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ‘ನಿಮ್ಮ ಜೊತೆ ನಾವು ಇದ್ದೇವೆ’ ಎಂದು ಕಮೆಂಟ್ ಮಾಡುವ ಮೂಲಕ ಮೌನಿ ರಾಯ್ (Mouni Roy), ಸೋನು ಸೂದ್ ಮುಂತಾದವರು ಬೆಂಬಲ ಸೂಚಿಸಿದ್ದಾರೆ.
‘ಎಂಥ ಬದುಕು.. ಒಂದು ದಶಕದ ಈ ಸಮಯದಲ್ಲಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗಿದ್ದು, ಬದುಕುಗಳನ್ನು ಕಟ್ಟಿದ್ದು, ಭರವಸೆಗಳನ್ನು, ಆಕಾಂಕ್ಷೆಗಳನ್ನು ಪೋಷಿಸಿದ್ದು, ಮೂಲ ಸೌಕರ್ಯ ಕಲ್ಪಿಸಲು ಕೆಲಸ ಮಾಡಿದ್ದು, ರಸ್ತೆ, ನಾಲೆ, ಮೆಡಿಕಲ್ ಕಾಲೇಜ್ ಹಾಗೂ ಇನ್ನೂ ಇತ್ಯಾದಿ. ನನ್ನ ಸೋಲು ಮತ್ತು ಗೆಲುವಿನಲ್ಲಿ ಜೊತೆಯಾಗಿ ನಿಂತ ಎಲ್ಲರಿಗೂ ನಾನು ಚಿರಋಣಿ. ಇಂದು ಸಂಭ್ರಮಿಸುತ್ತಿರುವವರಿಗೆ ಅಭಿನಂದನೆಗಳು. ಜೋಶ್ ಹೇಗಿದೆ? ಈಗಲೂ ಹೈ ಆಗಿದೆ ಎನ್ನುತ್ತೇನೆ’ ಎಂದು ಸ್ಮೃತಿ ಇರಾನಿ ಪೋಸ್ಟ್ ಮಾಡಿದ್ದಾರೆ.
ಸ್ಮೃತಿ ಇರಾನಿ ಅವರ ಈ ಪೋಸ್ಟ್ಗೆ ಬಾಲಿವುಡ್ ನಟಿ ಮೌನಿ ರಾಯ್ ಪ್ರತಿಕ್ರಿಯಿಸಿದ್ದಾರೆ. ‘ಯಾವಾಗಲೂ ನಿಮ್ಮ ಜೊತೆ ಇರುತ್ತೇವೆ’ ಎಂದು ಮೌನಿ ಅವರು ಕಮೆಂಟ್ ಮಾಡಿದ್ದಾರೆ. ಸ್ಮೃತಿ ಇರಾನಿ ಮತ್ತು ಮೌನಿ ರಾಯ್ ಅವರ ನಂಟು ಬಹಳ ವರ್ಷಗಳ ಹಿಂದಿನದ್ದು. ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ’ ಸೀರಿಯಲ್ನಲ್ಲಿ ಮೌನಿ ರಾಯ್ ಮತ್ತು ಸ್ಮೃತಿ ಇರಾನಿ ಅವರು ಒಟ್ಟಿಗೆ ನಟಿಸಿದ್ದರು.
ಇದನ್ನೂ ಓದಿ: ಬೆಂಗಳೂರಲ್ಲಿ ‘ಬದ್ಮಾಶ್’ ರೆಸ್ಟೋರೆಂಟ್ ಬಿಸ್ನೆಸ್ ವಿಸ್ತರಿಸಿದ ಮೌನಿ ರಾಯ್
ನಟ ಸೋನು ಸೂದ್ ಅವರು ಕಮೆಂಟ್ ಸೆಕ್ಷನ್ನಲ್ಲಿ ಕೆಂಪು ಹಾರ್ಟ್ ಎಮೋಜಿ ಪೋಸ್ಟ್ ಮಾಡಿದ್ದಾರೆ. ‘ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸಿ, ಅಷ್ಟೇ’ ಎಂದು ಬಾಲಿವುಡ್ ನಟಿ ನೀನಾ ಗುಪ್ತಾ ಅವರು ಕಮೆಂಟ್ ಮಾಡಿದ್ದಾರೆ. ‘ಪ್ರತಿದಿನ ನಿಮ್ಮೊಂದಿಗೆ ಇರುತ್ತೇವೆ. ನೀವು ಒಳ್ಳೆಯ ಕೆಲಸ ಮಾಡುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ’ ಎಂದು ನಟಿ ಆಷ್ಕಾ ಗೊರಾಡಿಯಾ ಅವರು ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.