ಒಂದು ರುಪಾಯಿಗೆ ಪಿವಿಆರ್, ಐನಾಕ್ಸ್​ಗಳಲ್ಲಿ ಭರಪೂರ ಮನರಂಜನೆ

|

Updated on: Apr 21, 2023 | 3:21 PM

PVR-Inox: ಕೇವಲ ಒಂದು ರುಪಾಯಿಗೆ ಪಿವಿಆರ್-ಐನಾಕ್ಸ್​ಗಳಂಥಹಾ ಮಲ್ಟಿಪ್ಲೆಕ್ಸ್​ಗಳಲ್ಲಿ ಮನೊರಂಜನೆ ಪಡೆಯಬಹುದು, ಗುಣಮಟ್ಟದ ದೃಶ್ಯ, ಸೌಂಡ್​ನ ಅನುಭೂತಿ ಪಡೆಯಬಹುದು!

ಒಂದು ರುಪಾಯಿಗೆ ಪಿವಿಆರ್, ಐನಾಕ್ಸ್​ಗಳಲ್ಲಿ ಭರಪೂರ ಮನರಂಜನೆ
ಪಿವಿಆರ್
Follow us on

ಮಲ್ಟಿಪ್ಲೆಕ್ಸ್​ಗಳಲ್ಲಿ (Multiplex) ಸಿನಿಮಾ ನೋಡುವ ಅನುಭವ ಅದ್ಭುತ, ಆದರೆ ಪಿವಿಆರ್ (PVR), ಐನಾಕ್ಸ್​ (Inox)ಗಳಂಥಹಾ ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ನೋಡುವುದು ಬಹಳ ಖರ್ಚಿನ ಬಾಬತ್ತು. ಕೊಡುವ ಸೇವೆಗಿಂತಲೂ ತುಸು ಹೆಚ್ಚೇ ಶುಲ್ಕವನ್ನು ಮಲ್ಟಿಪ್ಲೆಕ್ಸ್​​ಗಳು ಪಡೆಯುತ್ತವೆ ಎಂಬುದು ಗ್ರಾಹಕರ ಬಹು ಸಮಯದ ದೂರು. ಆದರೆ ಇದೀಗ ಕೇವಲ ಒಂದು ರುಪಾಯಿಗೆ ಮಲ್ಟಿಪ್ಲೆಕ್ಸ್​ಗಳಲ್ಲಿ 30 ನಿಮಿಷಗಳ ಕಾಲ ಮನೊರಂಜನೆ ಪಡೆಯಬಹುದು, ಅಂಥಹದ್ದೊಂದು ಆಫರ್​ ಅನ್ನು ಪಿವಿಆರ್ ಹಾಗೂ ಐನಾಕ್ಸ್​ಗಳು ಜಂಟಿಯಾಗಿ ಪ್ರೇಕ್ಷಕರಿಗೆ ನೀಡುತ್ತಿವೆ.

ಕೇವಲ ಒಂದು ರುಪಾಯಿ ನೀಡಿ 30 ನಿಮಿಷಗಳ ಕಾಲ ಐನಾಕ್ಸ್ ಹಾಗೂ ಪಿವಿಆರ್​ಗಳಲ್ಲಿ ಅವರು ತೋರಿಸುವ ಸಿನಿಮಾ ಟ್ರೈಲರ್​ಗಳನ್ನು ನೋಡಬಹುದಾಗಿದೆ. ಅದ್ಭುತ ಸೌಂಡ್, ಗುಣಮಟ್ಟದ ದೃಶ್ಯಗಳನ್ನು ವೀಕ್ಷಿಸುವ ಜೊತೆಗೆ ನೆಚ್ಚಿನ ನಟರ, ಸಿನಿಮಾಗಳ ಟ್ರೈಲರ್​ ಅನ್ನು ಎಕ್ಸ್​ಕ್ಲೂಸಿವ್ ಆಗಿ ನೋಡುವ ಅವಕಾಶವನ್ನೂ ಇದು ಕಲ್ಪಿಸಿದೆ. ”ಪ್ರೇಕ್ಷಕರಿಗೆ ಅದ್ಭುತ ಅನುಭೂತಿಯ ಪರಿಚಯ ಮಾಡಿಸುವುದು ಹಾಗೂ ಸಿನಿಮಾವನ್ನು ನೋಡಲು ಅಣಿಗೊಳಿಸಲು ಈ ಯೋಜನೆಯ ಉದ್ದೇಶ” ಎಂದಿದ್ದಾರೆ ಐನಾಕ್ಸ್​ನ ಸಿಇಓ ಅಲೋಕ್ ಟಂಡನ್.

ಈ ಟ್ರೈಲರ್ ಪ್ರದರ್ಶನವು ಏಪ್ರಿಲ್ 7 ರಿಂದಲೇ ಭಾರತದಾದ್ಯಂತ ಪಿವಿಆರ್ ಹಾಗೂ ಐನಾಕ್ಸ್​ಗಳಲ್ಲಿ ಪ್ರಾರಂಭವಾಗಿದೆ. ದಕ್ಷಿಣ ಭಾರತದ ಪಿವಿಆರ್ ಹಾಗೂ ಐನಾಕ್ಸ್​ಗಳಲ್ಲಿ ಬೆಲೆ ತುಸು ಹೆಚ್ಚಿರಲಿದೆ. ಮಲ್ಟಿಪ್ಲೆಕ್ಸ್​ಗಳು ನೀಡಿರುವ ಮಾಹಿತಿಯಂತೆ ಟ್ರೈಲರ್​ ಶೋಗಳು ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದು 50% ಗೂ ಹೆಚ್ಚು ಆಕ್ಯುಪೆನ್ಸಿ ಈ ಟ್ರೈಲರ್​ ಶೋಗಳಿಗೆ ಇವೆಯಂತೆ. ಟ್ರೈಲರ್ ಶೋಗಳು ಲಾಂಚ್ ಆದಾಗಿನಿಂದ ಎರಡು ವಾರದೊಳಗಾಗಿ ಸುಮಾರು 40000 ಮಂದಿ ಈ ಶೋಗಳನ್ನು ನೋಡಿರುವುದಾಗಿ ಸಿಇಓ ಅಲೋಕ್ ಟಂಡನ್ ಹೇಳಿದ್ದಾರೆ.

ಇದನ್ನೂ ಓದಿ:Inox-PVR Merger: ಐನಾಕ್ಸ್- ಪಿವಿಆರ್​ ಮಹಾವಿಲೀನ; ಆಗಲಿದೆ 1500ಕ್ಕೂ ಹೆಚ್ಚು ತೆರೆಗಳುಳ್ಳ ಸಿನಿಮಾ ಪ್ರದರ್ಶಕ ಸಂಸ್ಥೆ

ಪಿವಿಆರ್ ಸಿಇಓ ಗೌತಮ್ ದತ್ತ ಮಾತನಾಡಿ, ”ಒಂದು ರುಪಾಯಿ ಬೆಲೆ ಇಟ್ಟಿರುವುದು, ಶೋಗೆ ಬರುವ ಪ್ರತಿಕ್ರಿಯೆಗಳನ್ನು ಮಾಪನ ಮಾಡುವುದಕ್ಕಷ್ಟೆ. ಟಿಕೆಟ್ ಶೋ ಆದರಷ್ಟೆ ಅಂಕಿ-ಅಂಶಗಳು ಸಿಗುತ್ತವೆ. ಈ ಟ್ರೈಲರ್ ಶೋಗಳಿಂದ ಬಿಗ್​ಬಜೆಟ್ ಸಿನಿಮಾಗಳಿಗೆ ಹಾಗೂ ಇನ್ನಿತರೆ ಸಣ್ಣ-ಮಧ್ಯಮ ಬಜೆಟ್ ಸಿನಿಮಾಗಳಿಗೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಲಿದೆ. ಟ್ರೈಲರ್ ಶೋಗಳ ಮೂಲಕ ಸಿನಿಮಾಗಳಿಗೆ ದೊಡ್ಡ ಮಟ್ಟದ ಪ್ರಚಾರ ಸಿಗಲಿದೆ. ಈ ಯೋಜನೆಯಿಂದಾಗಿ ನಮ್ಮಲ್ಲಿ ಸಿನಿಮಾ ನೋಡುಗರ ಸಂಖ್ಯೆ ಮುಂದಿನ ಕೆಲವು ತಿಂಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಲಿದೆ ಎಂಬುದು ನಮ್ಮ ನಂಬಿಕೆ” ಎಂದಿದ್ದಾರೆ.

ಟ್ರೈಲರ್ ಶೋನಲ್ಲಿ ತೋರಿಸಲಾಗುವ ಟ್ರೈಲರ್​ಗಳನ್ನು ಪಿವಿಆರ್ ಹಾಗೂ ಐನಾಕ್ಸ್​ಗಳು ತಾವೇ ಆಯ್ಕೆ ಮಾಡಿಕೊಳ್ಳಲಿವೆ. ಮುಂದಿನ ದಿನಗಳಲ್ಲಿ ಬಿಡುಗಡೆ ಆಗಲಿರುವ ಹಾಲಿವುಡ್, ಬಾಲಿವುಡ್ ಹಾಗೂ ಸ್ಥಳೀಯ ಭಾಷೆಗಳ ಸಿನಿಮಾಗಳ ಟೀಸರ್ ಹಾಗೂ ಟ್ರೈಲರ್​ಗಳನ್ನು ಈ ಶೋಗಳಲ್ಲಿ ಪ್ರದರ್ಶಿತಗೊಳಿಸಲಾಗುತ್ತದೆ. ಪ್ರಸ್ತುತ, ಕಿಸಿ ಕ ಭಾಯ್ ಕಿಸಿ ಕಿ ಜಾನ್, ಪೊನ್ನಿಯನ್ ಸೆಲ್ವನ್ 2, ಓಫನ್​ಹೈಮರ್ ಇನ್ನಿತರೆ ಕೆಲವು ಸಿನಿಮಾಗಳು ಟ್ರೈಲರ್​ಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಈ ಟ್ರೈಲರ್​ಶೋಗಳಿಗೆ ಕೌಂಟರ್​ನಲ್ಲಿ ಹಾಗೂ ಆನ್​ಲೈನ್​ನಲ್ಲಿ ಟಿಕೆಟ್ ಖರೀದಿ ಮಾಡಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Fri, 21 April 23