ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ 5 ಅತ್ಯುತ್ತಮ ದೇಶಭಕ್ತಿ ಸಿನಿಮಾ: ಯಾವ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯ?
Patriotic Movies: ದೇಶಕ್ಕಾಗಿ ಪ್ರಾಣ ಅರ್ಪಿಸಿದ ಹುತಾತ್ಮರಿಗೆ, ಸ್ವಾತಂತ್ರ್ಯ ತಂದುಕೊಟ್ಟ ವೀರರಿಗೆ, ಗಡಿಯಲ್ಲಿ ಕಾಯುತ್ತಿರುವ ಸೈನಿಕರಿಗೆ ಸಿನಿಮಾಗಳ ಮೂಲಕ ಗೌರವ ಸಲ್ಲಿಸುವ ಕೆಲಸ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ದೇಶಭಕ್ತಿ ಹೊಮ್ಮಿಸುವ 5 ಬೆಸ್ಟ್ ಸಿನಿಮಾಗಳ ಮೇಲೊಂದು ಕಿರುನೋಟ ಇಲ್ಲಿದೆ.
ಆ.15 ಎಂದರೆ ಭಾರತೀಯರ ಪಾಲಿಗೆ ಹಬ್ಬ. ದೇಶಾದ್ಯಂತ ಇಂದು 75ನೇ ಸ್ವಾತಂತ್ರ್ಯ ದಿನಾಚರಣೆ (75th Independence Day) ಸಂಭ್ರಮ ಮನೆ ಮಾಡಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಅನೇಕ ವೀರರನ್ನು ಸ್ಮರಿಸಲಾಗುತ್ತಿದೆ. ಸ್ವಾತಂತ್ರ್ಯ ದೊರಕಿಸಿ ಕೊಡಲು ಹೋರಾಡಿ ಮಡಿದ ಯೋಧರ ಕಥೆಯನ್ನು ಅನೇಕ ಸಿನಿಮಾಗಳು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿವೆ. ಇನ್ನು, ಸ್ವಾತಂತ್ರ್ಯ ಬಂದ ನಂತರ ಕೂಡ ಗಡಿಯಲ್ಲಿ ನಿಂತು ದೇಶದ ರಕ್ಷಣೆ ಮಾಡುತ್ತಿರುವ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಹಲವು ಸಿನಿಮಾಗಳು ಮೂಡಿಬಂದಿವೆ. ಆ ಮೂಲಕ ಯುದ್ಧಭೂಮಿಯಲ್ಲಿ ಮಡಿದ ಸೈನಿಕರಿಗೂ ನಮನ ಸಲ್ಲಿಸಲಾಗಿದೆ. ಸ್ವಾತಂತ್ರ್ಯೋತ್ಸವಕ್ಕೆ ಪ್ರಯುಕ್ತ ನೋಡಬಹುದಾದ 5 ಅತ್ಯುತ್ತಮ ದೇಶಭಕ್ತಿ ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲಿದೆ.
ಭುಜ್: ದಿ ಪ್ರೈಡ್ ಆಫ್ ಇಂಡಿಯಾ
ಅಜಯ್ ದೇವಗನ್, ಸೋನಾಕ್ಷಿ ಸಿನ್ಹಾ, ನೋರಾ ಫತೇಹಿ ನಟಿಸಿರುವ ‘ಭುಜ್: ದಿ ಪ್ರೈಡ್ ಆಫ್ ಇಂಡಿಯಾ’ ಸಿನಿಮಾ ಈಗಷ್ಟೇ ಬಿಡುಗಡೆ ಆಗಿದೆ. ಆ.13ರಂದು ತೆರೆಕಂಡ ಈ ಚಿತ್ರಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. 1971ರಲ್ಲಿ ಭುಜ್ ವಾಯುನೆಲೆ ಮೇಲೆ ನಡೆದ ದಾಳಿಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ.
ಉರಿ: ದಿ ಸರ್ಜಿಕಲ್ ಸ್ಟ್ರೈಕ್
ಪಾಕ್ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತಿಯಾಗಿ ಭಾರತೀಯ ಸೈನಿಕರು ತಕ್ಕ ಪಾಠ ಕಲಿಸಿದ ಘಟನೆಯನ್ನು ಆಧರಿಸಿ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರ ಮೂಡಿಬಂದಿದೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್, ಯಾಮಿ ಗೌತಮ್ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಆದಿತ್ಯ ಧಾರ್ ನಿರ್ದೇಶನ ಮಾಡಿರುವ ಈ ಚಿತ್ರ ಅಮೇಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಹೃತಿಕ್ ನಟನೆಯ ‘ಲಕ್ಷ್ಯ’
ಬಾಲಿವುಡ್ನ ಸ್ಟಾರ್ ನಟ ಹೃತಿಕ್ ರೋಷನ್ ಅಭಿನಯಿಸಿರುವ ‘ಲಕ್ಷ್ಯ’ ಸಿನಿಮಾ ತೆರೆಕಂಡು 17 ವರ್ಷಗಳೇ ಕಳೆದಿವೆ. ಸಿನಿಪ್ರಿಯರ ಫೇವರಿಟ್ ಚಿತ್ರಗಳ ಪಟ್ಟಿಯಲ್ಲಿ ಈ ಚಿತ್ರಕ್ಕೆ ಈಗಲೂ ವಿಶೇಷ ಸ್ಥಾನವಿದೆ. ಕಾರ್ಗಿಲ್ ಯುದ್ಧದ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಿದ್ದು, ಅಮೇಜಾನ್ ಪ್ರೈಂನಲ್ಲಿ ಲಭ್ಯವಿದೆ.
ಅಕ್ಷಯ್ ಕುಮಾರ್ ಅಭಿನಯದ ‘ಕೇಸರಿ’
ದೇಶಭಕ್ತಿ ಸಿನಿಮಾಗಳನ್ನು ಮಾಡುವಲ್ಲಿ ಅಕ್ಷಯ್ ಕುಮಾರ್ ಸದಾ ಆಸಕ್ತಿ ತೋರಿಸುತ್ತಾರೆ. ಅವರು ನಟಿಸಿದ ‘ಕೇಸರಿ’ ಚಿತ್ರ 2019ರಲ್ಲಿ ತೆರೆಕಂಡು ಹಿಟ್ ಆಯಿತು. ಸರಗಡಿ ಯುದ್ಧವನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದ್ದು, ಹವಿಲ್ದಾರ್ ಇಶಾರ್ ಸಿಂಗ್ ಎಂಬ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಅಮೇಜಾನ್ ಪ್ರೈಮ್ನಲ್ಲಿ ಲಭ್ಯವಿರುವ ಈ ಚಿತ್ರದ ಹಾಡುಗಳು ಕೂಡ ಸೂಪರ್ ಹಿಟ್ ಆಗಿವೆ.
ಆಲಿಯಾ ಭಟ್ ನಟನೆಯ ‘ರಾಝಿ’
ದೇಶಭಕ್ತಿ ಸಿನಿಮಾಗಳಲ್ಲಿ ತುಂಬಾ ಭಿನ್ನವಾಗಿ ನಿಲ್ಲುವ ಸಿನಿಮಾ ‘ರಾಝಿ’. ದೇಶಭಕ್ತಿ ಎಂದರೆ ಬರೀ ಯುದ್ಧಭೂಮಿಯಲ್ಲಿ ಹೋರಾಡುವುದಷ್ಟೇ ಅಲ್ಲ. ಅದರ ಹೊರತಾಗಿಯೂ ದೇಶ ಕಾಯುವ ಕೆಲಸ ಬೇರೆ ಬೇರೆ ಇರುತ್ತವೆ ಎಂಬುದಕ್ಕೆ ‘ರಾಝಿ’ ಸಿನಿಮಾ ಅತ್ಯುತ್ತಮ ಉದಾಹರಣೆ. ಈ ಸಿನಿಮಾದಲ್ಲಿ ಆಲಿಯಾ ಭಟ್ ನಟನೆ ಅತ್ಯುತ್ತಮವಾಗಿದೆ. ನೆಟ್ಫ್ಲಿಕ್ಸ್ನಲ್ಲಿ ರಾಝಿ ಚಿತ್ರ ಲಭ್ಯವಿದೆ.
ಇದನ್ನೂ ಓದಿ: