2ನೇ ವೀಕೆಂಡ್ನಲ್ಲಿ ಮತ್ತೆ ಏರಿಕೆ ಆಯ್ತು ‘ಸಿತಾರೆ ಜಮೀನ್ ಪರ್’ ಕಲೆಕ್ಷನ್
ಆಮಿರ್ ಖಾನ್ ನಟನೆಯ ‘ಸಿತಾರೆ ಜಮೀನ್ ಪರ್’ ಸಿನಿಮಾಗೆ 2ನೇ ವಾರಾಂತ್ಯದಲ್ಲೂ ಉತ್ತಮ ಕಲೆಕ್ಷನ್ ಆಗಿದೆ. ಹೊಸ ಸಿನಿಮಾಗಳು ಬಿಡುಗಡೆ ಆಗಿದ್ದರೂ ಕೂಡ ಕಳೆದ ವಾರ ತೆರೆಕಂಡ ಈ ಸಿನಿಮಾ ಗಟ್ಟಿಯಾಗಿ ನಿಂತಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾದ ಕಲೆಕ್ಷನ್ 107 ಕೋಟಿ ರೂಪಾಯಿ ಗಡಿ ದಾಟಿದೆ.

ನಟ ಆಮಿರ್ ಖಾನ್ (Aamir Khan) ಅವರು ಖುಷಿಯಾಗಿದ್ದಾರೆ. ‘ಸಿತಾರೆ ಜಮೀನ್ ಪರ್’ ಸಿನಿಮಾದ ಗೆಲುವೇ ಈ ಖುಷಿಗೆ ಕಾರಣ. ಚಿತ್ರಮಂದಿರದಲ್ಲಿ ಈ ಸಿನಿಮಾ ಗೆಲ್ಲುತ್ತದೆ ಎಂದು ಅವರು ಭರವಸೆ ಇಟ್ಟುಕೊಂಡಿದ್ದರು. ಅದರಂತೆಯೇ ಆಗಿದೆ. ಭಾರತದ ಮಾರುಕಟ್ಟೆಯಲ್ಲಿ ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ವಾರದ ದಿನಗಳಲ್ಲಿ ಕಲೆಕ್ಷನ್ (Box Office Collection) ಒಂದಂಕಿಗೆ ಕುಸಿದಿತ್ತು. ಆದರೆ 2ನೇ ವೀಕೆಂಡ್ನಲ್ಲಿ ಮತ್ತೆ ಚೇತರಿಸಿಕೊಂಡಿದೆ. ಭಾನುವಾರ (ಜೂನ್ 29) ಕೂಡ ಉತ್ತಮ ಕಲೆಕ್ಷನ್ ಆಗುತ್ತಿದೆ.
‘ಸಿತಾರೆ ಜಮೀನ್ ಪರ್’ ಚಿತ್ರವನ್ನು ಆರ್.ಎಸ್. ಪ್ರಸನ್ನ ಅವರು ನಿರ್ದೇಶಿಸಿದ್ದಾರೆ. ಆಮಿರ್ ಖಾನ್ ಅವರು ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆ ನಿರ್ಮಾಣ ಕೂಡ ಮಾಡಿದ್ದಾರೆ. ಅವರ ಜೊತೆ ನಾಯಕಿಯಾಗಿ ಜೆನಿಲಿಯಾ ದೇಶಮುಖ್ ತೆರೆ ಹಂಚಿಕೊಂಡಿದ್ದಾರೆ. ವಿಶೇಷ ಚೇತನ ವ್ಯಕ್ತಿಗಳ ಬಗ್ಗೆ ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ತೋರಿಸಲಾಗಿದೆ.
ಮೊದಲ ದಿನ ‘ಸಿತಾರೆ ಜಮೀನ್ ಪರ್’ ಚಿತ್ರ ಸಾಧಾರಣ ಓಪನಿಂಗ್ ಪಡೆದುಕೊಂಡಿತ್ತು. ಅಂದು ಈ ಚಿತ್ರಕ್ಕೆ 10.70 ಕೋಟಿ ರೂಪಾಯಿ ಗಳಿಕೆ ಆಯಿತು. ಆದರೆ ಮೊದಲ ವೀಕೆಂಡ್ನಲ್ಲಿ ಹಣದ ಹೊಳೆ ಹರಿಯಿತು. ಮೊದಲ ಶನಿವಾರವಾದ ಜೂನ್ 21ರಂದು 19.90 ಕೋಟಿ ರೂಪಾಯಿ ಹಾಗೂ ಮೊದಲ ಭಾನುವಾರವಾದ ಜೂನ್ 22ರಂದು ಬರೋಬ್ಬರಿ 26.70 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು.
ನಂತರದ ದಿನಗಳಲ್ಲಿ ಕಲೆಕ್ಷನ್ ಕುಸಿದಿತ್ತು. ಎರಡನೇ ಶುಕ್ರವಾರ ಜೂನ್ 27ರಂದು ಈ ಸಿನಿಮಾ ಕೇವಲ 6.67 ಕೋಟಿ ರೂಪಾಯಿ ಗಳಿಸಿತ್ತು. ಆದರೆ ಜೂನ್ 28ರ ಶನಿವಾರ ಕಲೆಕ್ಷನ್ನಲ್ಲಿ ಏರಿಕೆ ಆಗಿದ್ದು, 12.55 ಕೋಟಿ ರೂಪಾಯಿ ಆದಾಯ ಬಂದಿದೆ. ಭಾನುವಾರ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. ಭಾರತದಲ್ಲಿ ಈ ಸಿನಿಮಾದ ಒಟ್ಟು ಕಲೆಕ್ಷನ್ 107 ಕೋಟಿ ರೂಪಾಯಿ ದಾಟಿದೆ.
ಇದನ್ನೂ ಓದಿ: ಆಮಿರ್ ಖಾನ್-ಸಿದ್ದರಾಮಯ್ಯ ಮುಖಾಮುಖಿ, ಶುಭ ಕೋರಿದ ಸಿಎಂ
ಎಲ್ಲ ಭಾಷೆಯಲ್ಲೂ ಹೊಸ ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಬಾಲಿವುಡ್ನಲ್ಲಿ ಕಾಜೋಲ್ ನಟನೆಯ ‘ಮಾ’, ಹಾಲಿವುಡ್ನಲ್ಲಿ ಬ್ರಾಡ್ ಪಿಟ್ ಅಭಿನಯದ ‘ಎಫ್1: ದ ಮೂವೀ’, ಟಾಲಿವುಡ್ನಲ್ಲಿ ಮಂಚು ವಿಷ್ಣು ನಟನೆಯ ‘ಕಣ್ಣಪ್ಪ’, ಸಿನಿಮಾಗಳು ಬಿಡುಗಡೆ ಆಗಿವೆ. ಈ ಹೊಸ ಚಿತ್ರಗಳಿಗೆ ‘ಸಿತಾರೆ ಜಮೀನ್ ಪರ್’ ಸಿನಿಮಾ ಪೈಪೋಟಿ ನೀಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








