‘ಹೇರಾ ಪೇರಿ 3’: ಮುನಿಸು ಮರೆತು ಅಕ್ಷಯ್ ಜೊತೆ ಕೈಜೋಡಿಸಿದ ಪರೇಶ್ ರಾವಲ್
Hera Peri 3: ‘ಹೇರಾ ಪೇರಿ 3’ ಸಿನಿಮಾದಿಂದ ಹೊರ ಹೋಗಿರುವುದಾಗಿ ನಟ ಪರೇಶ್ ರಾವಲ್ ಘೋಷಿಸಿದ್ದರು. ಇದು ಸಿನಿಮಾ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಇದೀಗ ಸ್ವತಃ ಪರೇಶ್ ರಾವಲ್ ಎಲ್ಲವೂ ಸರಿ ಹೋಗಿದ್ದು, ‘ಹೇರಾ ಪೇರಿ 3’ ಸಿನಿಮಾ ಖಂಡಿತ ನಿರ್ಮಾಣ ಆಗಲಿದೆ. ನಾನು ಸಹ ಸಿನಿಮಾನಲ್ಲಿ ನಟಿಸಲಿದ್ದೇನೆ ಎಂದಿದ್ದಾರೆ.

‘ಹೇರಾ ಪೇರಿ’ (Hera Peri) ಸಿನಿಮಾ ಬಾಲಿವುಡ್ನ ಕಲ್ಟ್ ಕಾಮಿಡಿ ಸಿನಿಮಾಗಳಲ್ಲಿ ಒಂದಾಗಿದೆ. ಮಲಯಾಳಂ ಸಿನಿಮಾ ಆಗಿರುವ ‘ಬಾಬು ರಾವ್ ಕಾಲಿಂಗ್’ ಸಿನಿಮಾದ ರೀಮೇಕ್ ಆಗಿರುವ ‘ಹೇರಾ ಪೇರಿ’ ಮಲಯಾಳಂ ಸಿನಿಮಾದ ಹೋಲಿಕೆಯಲ್ಲಿ ಭಾರಿ ದೊಡ್ಡ ಹಿಟ್ ಆಯ್ತು. ಸಿನಿಮಾದ ಎರಡನೇ ಭಾಗ ‘ಹೇರಾ ಪೇರಿ 2’ ಸಿನಿಮಾ ಸಹ ಬಿಡುಗಡೆ ಆಗಿ ಅದೂ ಸಹ ದೊಡ್ಡ ಹಿಟ್ ಆಯ್ತು. ಇತ್ತೀಚೆಗಷ್ಟೆ ‘ಹೇರಾ ಪೇರಿ 3’ ಸಿನಿಮಾ ಘೋಷಿಸಲಾಗಿತ್ತು. ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಬೇಕಿದ್ದ ಸಮಯದಲ್ಲಿ ನಟ ಪರೇಶ್ ರಾವಲ್ ಅವರು ತಾವು ಸಿನಿಮಾದಿಂದ ಹೊರ ಹೋಗುತ್ತಿರುವುದಾಗಿ ಘೋಷಿಸಿದರು.
ಪರೇಶ್ ರಾವಲ್ ‘ಹೇರಾ ಪೇರಿ 3’ ಸಿನಿಮಾದಿಂದ ಹೊರ ಹೋಗಿದ್ದು ಸಿನಿಮಾದ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತ್ತು. ಆದರೆ ಇದೀಗ ಪರೇಶ್ ರಾವಲ್ ಅವರು ‘ಹೇರಾ ಪೇರಿ 3’ ಸಿನಿಮಾಕ್ಕೆ ಮರಳಿದ್ದು, ಸ್ವತಃ ಪರೇಶ್ ರಾವಲ್ ಅವರೇ ತಾವು ‘ಹೇರಾ ಪೇರಿ 3’ ಸಿನಿಮಾನಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ. ಪ್ರೇಕ್ಷಕರ ಪ್ರೀತಿಯನ್ನು ಗೌರವಿಸಿ ತಾವು ‘ಹೇರಾ ಪೇರಿ 3’ ಸಿನಿಮಾ ಮಾಡಲು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:ರಾಜಿ ಮಾಡಿದ್ರೆ ‘ಹೇರಾ ಫೇರಿ 3’ಗೆ ಬರ್ತಾರಾ ಪರೇಶ್ ರಾವಲ್? ನಟನ ಉತ್ತರ ಏನು?
ಸಂದರ್ಶನವೊಂದರಲ್ಲಿ ಮಾತನಾಡಿರುವ ಪರೇಶ್ ರಾವಲ್, ‘ನಮ್ಮ ಕೆಲಸ ಹೆಚ್ಚು ಜನರಿಗೆ ತಲುಪಿದೆ ಎಂದಾಗ ನಾವು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಜನ ಪ್ರೀತಿಸಿದಾಗ ಆ ಪ್ರೀತಿಗೆ ಗೌರವ ಕೊಡಬೇಕಾಗುತ್ತದೆ. ಜನರ ಪ್ರೀತಿಯನ್ನು ಲಘುವಾಗಿ ಪರಿಗಣಿಸುವಂತಿಲ್ಲ. ‘ಹೇರಾ ಪೇರಿ 3’ ಸಿನಿಮಾ ಮೊದಲು ಆಗುತ್ತಿತ್ತು, ಈಗಲೂ ಆಗುತ್ತದೆ. ಏನೆಂದರೆ ಕೆಲವರನ್ನು ಫೈನ್ ಟ್ಯೂನ್ ಮಾಡಬೇಕಿತ್ತು, ಅದು ಆಗಿದೆ. ಪ್ರಿಯದರ್ಶನ್, ಅಕ್ಷಯ್ ಕುಮಾರ್, ಸುನಿಲ್ ಎಲ್ಲರೂ ಕ್ರಿಯಾಶೀಲ ವ್ಯಕ್ತಿಗಳು ಮತ್ತು ವರ್ಷಗಳಿಂದಲೂ ಗೆಳೆಯರು. ‘ಹೇರಾ ಪೇರಿ 3’ ಸಿನಿಮಾ 100% ಆಗಿಯೇ ಆಗುತ್ತದೆ’ ಎಂದಿದ್ದಾರೆ.
ಈ ಹಿಂದೆ ಅವರು ‘ಹೇರಾ ಪೇರಿ 3’ ಸಿನಿಮಾದಿಂದ ಹೊರ ನಡೆದಿದ್ದರು. ಸಿನಿಮಾದ ನಿರ್ಮಾಪಕ ಅಕ್ಷಯ್ ಕುಮಾರ್ ಅವರು ಪರೇಶ್ ರಾವಲ್ ಅವರಿಗೆ ನೊಟೀಸ್ ಕಳಿಸಿ, 25 ಕೋಟಿ ಪರಿಹಾರಕ್ಕೆ ಒತ್ತಾಯಿಸಿದ್ದರು. ಅದಾದ ಬಳಿಕ ಮತ್ತೆ ನಟರುಗಳ ನಡುವೆ ಸಂಧಾನ ನಡೆದಂತಿದ್ದು, ಇದೀಗ ಪರೇಶ್ ರಾವಲ್ ಮತ್ತೆ ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




