ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್ (Aamir Khan) ಅವರ ಸಂಪೂರ್ಣ ಗಮನ ಈಗ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಮೇಲಿದೆ. ಸಾಕಷ್ಟು ಸಮಯ ತೆಗೆದುಕೊಂಡು ಅವರು ಈ ಸಿನಿಮಾ ಮಾಡಿದ್ದಾರೆ. ಆಗಸ್ಟ್ 11ರಂದು ವಿಶ್ವಾದ್ಯಂತ ಈ ಚಿತ್ರ ಬಿಡುಗಡೆ ಆಗಲಿದೆ. ಆ ಪ್ರಯುಕ್ತ ಅವರು ಈಗ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಚಿತ್ರದಲ್ಲಿ ಆಮಿರ್ ಖಾನ್ಗೆ ಜೋಡಿಯಾಗಿ ಕರೀನಾ ಕಪೂರ್ ಖಾನ್ ನಟಿಸಿದ್ದಾರೆ. ಇದರ ಪ್ರಚಾರದ ಸಲುವಾಗಿ ಜನಪ್ರಿಯ ‘ಕಾಫಿ ವಿತ್ ಕರಣ್ ಸೀಸನ್ 7’ (Koffee With Karan 7) ಶೋಗೆ ಹಾಜರಿ ಹಾಕಿದ್ದಾರೆ. ಎಪಿಸೋಡ್ ಶೂಟಿಂಗ್ ಸಂದರ್ಭದ ಫೋಟೋ ವೈರಲ್ ಆಗಿದೆ. ಇದರಲ್ಲಿ ಆಮಿರ್ ಖಾನ್ ಅವರು ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ.
ಈ ಮೊದಲು ಆಮಿರ್ ಖಾನ್ ಸಿಕ್ಕಾಪಟ್ಟೆ ಸಿಗರೇಟ್ ಸೇದುತ್ತಿದ್ದರು. ಅದಕ್ಕೆ ಕುಟುಂಬದವರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿತ್ತು. ಧೂಮಪಾನದ ಸಹವಾಸ ಬಿಟ್ಟುಬಿಡುವಂತೆ ಮಕ್ಕಳಾದ ಇರಾ ಖಾನ್ ಮತ್ತು ಜುನೈದ್ ಖಾನ್ ಅವರು ಒತ್ತಾಯ ಮಾಡಿದ್ದರು. ಹಾಗಿದ್ದರೂ ಸಂಪೂರ್ಣ ತ್ಯಜಿಸಲು ಆಮಿರ್ ಖಾನ್ಗೆ ಸಾಧ್ಯವಾಗಿರಲಿಲ್ಲ. ಆದರೆ ಪುತ್ರ ಆಜಾದ್ ಖಾನ್ ಜನಿಸಿದ ಬಳಿಕ ಅವರು ಸಿಗರೇಟ್ ಬಿಟ್ಟಿದ್ದರು ಎಂದು ವರದಿ ಆಗಿತ್ತು.
ಪುತ್ರ ಆಜಾದ್ ಖಾನ್ ಸಲುವಾಗಿ ಆಮಿರ್ ಖಾನ್ ಅವರು ಸಿಗರೇಟ್ ಚಟ ಬಿಟ್ಟಿದ್ದಾರೆ ಎಂಬುದನ್ನು ನಿಜ ಎಂದೇ ಅಭಿಮಾನಿಗಳು ನಂಬಿದ್ದರು. ಆದರೆ ಈಗ ವೈರಲ್ ಆಗಿರುವ ಈ ಫೋಟೋದಲ್ಲಿ ಅವರು ಪೈಪ್ ಸೇದುತ್ತಿರುವುದು ಕಾಣಿಸಿದೆ. ‘ಒತ್ತಡದ ಕಾರಣದಿಂದ ಆಮಿರ್ ಖಾನ್ ಮತ್ತೆ ಸಿಗರೇಟ್ ಸೇದಲು ಪ್ರಾರಂಭಿದ್ದಾರೆ..’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗುತ್ತಿದೆ.
ಆಮಿರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರು ‘ಕಾಫಿ ವಿತ್ ಕರಣ್’ ಶೋಗೆ ಬರಬೇಕು ಎಂಬುದು ಕೊನೇ ಕ್ಷಣದಲ್ಲಿ ಆದ ನಿರ್ಧಾರ ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಈ ಹಿಂದೆ ಕರಣ್ ಜೋಹರ್ ಹಂಚಿಕೊಂಡ ಲಾಂಚಿಂಗ್ ಪ್ರೋಮೋದಲ್ಲಿ ಇವರಿಬ್ಬರು ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಇಬ್ಬರೂ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಪ್ರಮೋಷನ್ ಸಲುವಾಗಿ ‘ಕಾಫಿ ವಿತ್ ಕರಣ್’ ಶೋಗೆ ಹಾಜರಿ ಹಾಕಿದ್ದಾರೆ. ಆ ಎಪಿಸೋಡ್ ನೋಡಲು ಅಭಿಮಾನಿಗಳು ಕಾದಿದ್ದಾರೆ.