
ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೇಂಜ್’ (Dhurandhar: The Revenge) ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಚಿತ್ರದ ಪ್ರತಿಯೊಬ್ಬ ಕಲಾವಿದರಿಗೂ ಪ್ರೇಕ್ಷಕರಿಂದ ಅಪಾರ ಪ್ರೀತಿ ವ್ಯಕ್ತವಾಗುತ್ತಿದೆ. ಈ ನಡುವೆ, ರಾಜಕಾರಣಿ ರಾಘವ್ ಚಡ್ಡಾ ಅವರು ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ವೈರಲ್ ಆಗಿದೆ. ಇತ್ತೀಚೆಗೆ ರಾಜಕೀಯದ ಏರಿಳಿತಗಳ ಕಾರಣದಿಂದ ಸುದ್ದಿಯಲ್ಲಿದ್ದ ರಾಘವ್ ಚಡ್ಡಾ (Raghav Chadha) ಅವರು ಈಗ ಬಾಲಿವುಡ್ ನಟನ ಸ್ನೇಹದ ಕಾರಣಕ್ಕಾಗಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಗುರುವಾರ (ಏ.9) ಇನ್‌ಸ್ಟಾಗ್ರಾಮ್‌ನಲ್ಲಿ ಸಂಜಯ್ ದತ್ ಅವರೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡ ರಾಘವ್ ಚಡ್ಡಾ, ಸಂಜು ಬಾಬಾ ಅವರ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಫೋಟೋಗಳಲ್ಲಿ ಇಬ್ಬರೂ ಕುರ್ತಾ ಧರಿಸಿ, ರಾಘವ್ ಅವರ ಮನೆಯ ತೋಟದಲ್ಲಿ ಕುಳಿತು ಹರಟೆ ಹೊಡೆಯುತ್ತಿರುವುದನ್ನು ಕಾಣಬಹುದು. ಅವರ ಫೋಸ್ಟ್ ವೈರಲ್ ಆಗಿದೆ.
‘ಕೆಲವು ಸಮಯದ ಹಿಂದೆ ನನ್ನ ನಿವಾಸಕ್ಕೆ ಅತಿಥಿಯಾಗಿ ಬಂದಿದ್ದ ಅತ್ಯಂತ ಆತ್ಮೀಯ ವ್ಯಕ್ತಿಗಳಲ್ಲಿ ಒಬ್ಬರಾದ ಸಂಜಯ್ ದತ್ ಅವರಿಗೆ ಆತಿಥ್ಯ ನೀಡುವ ಅವಕಾಶ ಸಿಕ್ಕಿತು. ಧುರಂಧರ್ ಚಿತ್ರದಿಂದ ನಿಮಗೆ ಸಿಗುತ್ತಿರುವ ಪ್ರೀತಿಯನ್ನು ಕಂಡು ಸಂತೋಷವಾಯಿತು. ನಿಮ್ಮ ಔರಾ ಮೊದಲಿನಂತೆಯೇ ಇದೆ ಮತ್ತು ಪ್ರತಿ ಕಾಲಘಟ್ಟದಲ್ಲೂ ನಿಮ್ಮ ಮೇಲಿರುವ ಅಭಿಮಾನ ಅಚಲವಾಗಿದೆ. ಈ ಯಶಸ್ಸಿಗೆ ನೀವು ಅರ್ಹರು. ನಾನು ಯಾವಾಗಲೂ ನಿಮಗೆ ಬೆಂಬಲವಾಗಿರುತ್ತೇನೆ’ ಎಂದು ರಾಘವ್ ಚಡ್ಡಾ ಬರೆದುಕೊಂಡಿದ್ದಾರೆ.
‘ಧುರಂಧರ್’ ಚಿತ್ರದಲ್ಲಿ ಸಂಜಯ್ ದತ್ ಅವರು ಎಸ್‌ಪಿ ಚೌಧರಿ ಅಸ್ಲಂ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರವು ಪಾಕಿಸ್ತಾನದ ರಿಯಲ್ ಲೈಫ್ ಪೊಲೀಸ್ ಅಧಿಕಾರಿ ಎಸ್‌ಪಿ ಚೌಧರಿ ಅಸ್ಲಂ ಅವರ ಜೀವನದಿಂದ ಪ್ರೇರಿತವಾಗಿದೆ. ಸಂಜಯ್ ದತ್ ಅವರ ಗಂಭೀರ ನಟನೆಗೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ: ‘ಧುರಂಧರ್ 2’ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ನಿರೀಕ್ಷೆಯಲ್ಲಿ ಸಂಜಯ್ ದತ್
ವಿಶೇಷವೆಂದರೆ, ಖುದ್ದು ಚೌಧರಿ ಅಸ್ಲಂ ಅವರ ಪತ್ನಿ ನೌರೀನ್ ಅಸ್ಲಂ ಕೂಡ ಸಂಜಯ್ ದತ್ ಅವರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ‘ಪರದೆಯ ಮೇಲೆ ನೋಡುವಾಗ ಒಂದು ಕ್ಷಣ ನನ್ನ ಪತಿ ಅಸ್ಲಂ ಅವರೇ ಬಂದಿದ್ದಾರೆ ಎಂದು ಅನಿಸಿತು’ ಎಂದು ಅವರು ಭಾವುಕರಾಗಿ ಹೇಳಿದ್ದಾರೆ. ‘ಧುರಂಧರ್ 2’ ಸಿನಿಮಾದಿಂದಾಗಿ ಸಂಜಯ್ ದತ್ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.