‘ಕಾಶ್ಮೀರ ನರಕ ಆಗುತ್ತಿದೆ’: ಪಹಲ್ಗಾಮ್‌ ಉಗ್ರರ ದಾಳಿಗೆ ನಟ ಸಲ್ಮಾನ್ ಖಾನ್ ಖಂಡನೆ

ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಪಹಲ್ಗಾಮ್‌ ಹತ್ಯಾಕಾಂಡದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟ ಸಲ್ಮಾನ್ ಖಾನ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ವರ್ಗದ ರೀತಿ ಇರುವ ಕಾಶ್ಮೀರ ಈಗ ನರಕ ಆಗುತ್ತಿದೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಅಕ್ಷಯ್ ಕುಮಾರ್, ಶಾರುಖ್ ಖಾನ್, ಕಂಗನಾ ರಣಾವತ್ ಮುಂತಾದವರು ಕೂಡ ಪ್ರತಿಕ್ರಿಯಿಸಿದ್ದಾರೆ.

‘ಕಾಶ್ಮೀರ ನರಕ ಆಗುತ್ತಿದೆ’: ಪಹಲ್ಗಾಮ್‌ ಉಗ್ರರ ದಾಳಿಗೆ ನಟ ಸಲ್ಮಾನ್ ಖಾನ್ ಖಂಡನೆ
Salman Khan

Updated on: Apr 23, 2025 | 7:31 PM

ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ (Pahalgam) ಉಗ್ರರು ನಡೆಸಿದ ದಾಳಿಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಭಯೋತ್ಪಾದಕರ ಹೇಯ ಕೃತ್ಯದಿಂದ 28 ಜನರ ಪ್ರಾಣ ಹೋಗಿದ್ದು, ದೇಶಾದ್ಯಂತ ಶೋಕದ ವಾತಾವರಣ ನಿರ್ಮಾಣ ಆಗಿದೆ. ಉಗ್ರರ ದಾಳಿಯನ್ನು ಸೆಲೆಬ್ರಿಟಿಗಳು ಕೂಡ ಖಂಡಿಸಿದ್ದಾರೆ. ಮಂಗಳವಾರ (ಏಪ್ರಿಲ್ 22) ನಡೆದ ಭಯೋತ್ಪಾದಕ (Pahalgam Terror Attack) ದಾಳಿಯಿಂದಾಗಿ ಎಲ್ಲರಲ್ಲೂ ಆತಂಕ ಮೂಡಿದೆ. ಭೂಮಿ ಮೇಲಿನ ಸ್ವರ್ಗದ ರೀತಿ ಇರುವ ಕಾಶ್ಮೀರವನ್ನು ನೋಡಲು ತೆರಳಿದ್ದ ಪ್ರವಾಸಿಗರನ್ನೇ ಗುರಿಯಾಗಿಸಿ ಉಗ್ರರು ದಾಳಿ ಮಾಡಿದ್ದಾರೆ. ಈ ಬಗ್ಗೆ ಸಲ್ಮಾನ್ ಖಾನ್ (Salman Khan) ಅವರು ಸಂತಾಪ ಸೂಚಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್ ಅವರು ಪಹಲ್ಗಾಮ್​ ಹತ್ಯಾಕಾಂಡದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ‘ಕಾಶ್ಮೀರವು ಭೂಮಿಯ ಮೇಲಿನ ಸ್ವರ್ಗ. ಆದರೆ ಅದು ನರಕ ಆಗುತ್ತಿದೆ. ಅಮಾಯಕರನ್ನು ಟಾರ್ಗೆಟ್ ಮಾಡಲಾಗಿದೆ. ಅವರ ಕುಟುಂಬದವರಿಗಾಗಿ ನನ್ನ ಹೃದಯ ಮಿಡಿಯುತ್ತದೆ. ಓರ್ವ ಅಮಾಯಕನನ್ನು ಕೊಲ್ಲುವುದು ಎಂದರೆ ಇಡೀ ಜಗತ್ತನ್ನು ಕೊಂದಂತೆ’ ಎಂದು ಸಲ್ಮಾನ್ ಖಾನ್ ಅವರು ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸಲ್ಮಾನ್ ಖಾನ್ ಮಾತ್ರವಲ್ಲದೇ ಶಾರುಖ್ ಖಾನ್, ಕಿಯಾರಾ ಅಡ್ವಾಣಿ, ಯಶ್, ಅನುಪಮ್ ಖೇರ್, ಕಂಗನಾ ರಣಾವತ್, ರಶ್ಮಿಕಾ ಮಂದಣ್ಣ, ಅನುಷ್ಕಾ ಶರ್ಮಾ, ಅಕ್ಷಯ್ ಕುಮಾರ್, ಪವನ್ ಕಲ್ಯಾಣ್, ಚಿರಂಜೀವಿ ಮುಂತಾದ ಸೆಲೆಬ್ರಿಟಿಗಳು ಕೂಡ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ನಡುವೆ ಪಾಕ್ ಕಲಾವಿದರಿಗೆ ಭಾರತೀಯ ಚಿತ್ರರಂಗದಲ್ಲಿ ಅವಕಾಶ ನೀಡಬಾರದು ಎಂಬ ಒತ್ತಾಯ ಕೂಡ ಕೇಳಿಬಂದಿದೆ.

ಇದನ್ನೂ ಓದಿ
ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಉಗ್ರರ ರೇಖಾಚಿತ್ರ ಬಿಡುಗಡೆ
ಪಾಕ್ ಸೇನೆಗೆ ನಡುಕ ಶುರು: ಉಪಗ್ರಹ ಚಿತ್ರಗಳಿಂದ ಬಹಿರಂಗವಾಯ್ತು ರಹಸ್ಯ
ಮೆಹಂದಿ ಮಾಸುವ ಮುನ್ನವೇ ನವವಿವಾಹಿತೆಯ ಕುಂಕುಮ ಅಳಿಸಿದ ಉಗ್ರರು
ಪಹಲ್ಗಾಮ್ ದಾಳಿ: ಅಜಿತ್ ದೋವಲ್, ಜೈಶಂಕರ್ ಭೇಟಿಯಾದ ಪ್ರಧಾನಿ ಮೋದಿ

ಉಗ್ರರ ದಾಳಿ ಬಗ್ಗೆ ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ. ‘ಪಹಲ್ಗಾಮ್‌ನಲ್ಲಿ ನಡೆದಿರುವ ವಿಶ್ವಾಸಘಾತುಕ ಕೃತ್ಯ ಹಾಗೂ ಅಮಾನವೀಯ ಹಿಂಸಾಚಾರದ ಬಗ್ಗೆ ದುಃಖ ಹಾಗೂ ಕೋಪವನ್ನು ವ್ಯಕ್ತಪಡಿಸಲು ಪದಗಳು ಸಾಲುತ್ತಿಲ್ಲ. ಈ ಸಮಯದಲ್ಲಿ, ನಾವು ದೇವರ ಕಡೆಗೆ ನೋಡಿ, ಸಂತ್ರಸ್ತರ ಕುಟುಂಬದವರಿಗಾಗಿ ಪ್ರಾರ್ಥಿಸಬಹುದು. ಆಳವಾದ ಸಂತಾಪವನ್ನು ವ್ಯಕ್ತಪಡಿಸಬಹುದು. ಒಂದು ದೇಶವಾಗಿ ನಾವು ಒಗ್ಗಟ್ಟಿನಿಂದ ನಿಂತು ಈ ಘೋರ ಕೃತ್ಯದ ವಿರುದ್ಧ ನ್ಯಾಯ ಪಡೆಯೋಣ’ ಎಂದು ಶಾರುಖ್ ಖಾನ್ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಪಾಕ್ ನಟನ ಜತೆ ಭಾರತದ ಸಿನಿಮಾ; ಉಗ್ರರ ದಾಳಿ ನಂತರ ಬ್ಯಾನ್​ಗೆ ಒತ್ತಾಯ

ನಟ ಸಂಜಯ್ ದತ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಭಯೋತ್ಪಾದಕರು ನಮ್ಮ ದೇಶದ ಜನರನ್ನು ಹೀನವಾಗಿ ಕೊಂದಿದ್ದಾರೆ. ಇದನ್ನು ಕ್ಷಮಿಸುವಂತಿಲ್ಲ. ನಾವು ಸುಮ್ಮನೆ ಇರುವವರಲ್ಲ ಎಂಬುದು ಈ ಉಗ್ರರಿಗೆ ತಿಳಿಯಬೇಕು. ನಾವು ಪ್ರತಿಯಾಗಿ ಆಕ್ರಮಣ ಮಾಡಬೇಕು. ಅವರಿಗೆ ಪಾಠ ಕಲಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಲ್ಲಿ ಮನವಿ ಮಾಡುತ್ತೇನೆ’ ಎಂದು ಸಂಜಯ್ ದತ್ ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.