ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲಾದ ರಣವೀರ್ ಪತ್ನಿ
ಅವರು ಹಲವು ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಆಗಿಲ್ಲ.
ನಟಿ ದೀಪಿಕಾ ಪಡುಕೋಣೆ (Deepika Padukone) ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಈ ಕಾರಣದಿಂದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೆಪ್ಟೆಂಬರ್ 26ರ ರಾತ್ರಿ ದೀಪಿಕಾ ಅಸ್ವಸ್ಥತರಾದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಅವರು ಹಲವು ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಆಗಿಲ್ಲ.
ದೀಪಿಕಾ ಪಡುಕೋಣೆ ಅವರು ಮುಂಬೈನ ನಿವಾಸದಲ್ಲಿ ಇರುವಾಗಲೇ ಆರೋಗ್ಯದಲ್ಲಿ ಏರಿಳಿತ ಉಂಟಾಗಿದೆ. ಈ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಿಂಕ್ವಿಲ್ಲಾ ವರದಿ ಮಾಡಿದೆ. ಕೆಲವು ತಿಂಗಳ ಹಿಂದೆ ಇದೇ ಮಾದರಿಯ ವರದಿ ಬಿತ್ತರ ಆಗಿತ್ತು. ಅವರು ಹೈದರಾಬಾದ್ನಲ್ಲಿ ಶೂಟಿಂಗ್ನಲ್ಲಿ ಬ್ಯುಸಿ ಇದ್ದರು. ಈ ವೇಳೆ ಅವರು ಅಸ್ವಸ್ಥರಾಗಿ, ಆಸ್ಪತ್ರೆಗೆ ದಾಖಲಾದರು ಎಂಬ ಸುದ್ದಿ ಹರಿದಾಡಿತ್ತು. ಆದರೆ, ಆ ಬಗ್ಗೆ ಯಾರೂ ಸ್ಪಷ್ಟನೆ ನೀಡಿಲ್ಲ.
ದೀಪಿಕಾ ಪಡುಕೋಣೆ ಅವರಿಗೆ ಪದೇ ಪದೇ ಅನಾರೋಗ್ಯ ಉಂಟಾಗುತ್ತಿರುವ ಬಗ್ಗೆ ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಸದ್ಯ ದೀಪಿಕಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎನ್ನಲಾಗಿದೆ. ಈ ಬಗ್ಗೆ ನಟಿಯಿಂದಲೇ ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಅಪಾರ್ಟ್ಮೆಂಟ್ ಖರೀದಿಸಿದ್ದ ದೀಪಿಕಾ
ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮುಂಬೈನಲ್ಲಿ ಸೆಟಲ್ ಆಗಿದ್ದಾರೆ. ಸಿನಿಮಾ, ಜಾಹೀರಾತುಗಳಿಂದ ದೊಡ್ಡ ಸಂಭಾವನೆ ಪಡೆಯುವ ಈ ದಂಪತಿ ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಮುಂಬೈನಲ್ಲಿ ಹಲವು ಮನೆಗಳನ್ನು ಇವರು ಹೊಂದಿದ್ದಾರೆ. ಈ ದಂಪತಿ ಇತ್ತೀಚೆಗೆ ಬರೋಬ್ಬರಿ 119 ಕೋಟಿ ರೂಪಾಯಿ ಕೊಟ್ಟು ಮುಂಬೈನ ಸಮುದ್ರದ ಅಂಚಿನಲ್ಲಿ ಐಷಾರಾಮಿ ಫ್ಲಾಟ್ ಖರೀದಿ ಮಾಡಿದ್ದರು.
ರಣವೀರ್ ಸಿಂಗ್ ಹಾಗೂ ದೀಪಿಕಾ ಖರೀದಿಸಿದ ಈ ಅಪಾರ್ಟ್ಮೆಂಟ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಈ ಅಪಾರ್ಟ್ಮೆಂಟ್ನಿಂದ ಅರಬ್ಬೀ ಸಮುದ್ರ ಕಾಣಿಸಲಿದೆ. ವಿಶೇಷ ಎಂದರೆ ರಣವೀರ್ ಹಾಗೂ ದೀಪಿಕಾ ಬಾಲಿವುಡ್ನ ಸ್ಟಾರ್ ನಟರಾದ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರ ನೆರೆ ಮನೆಯವರಾಗಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರಕ್ಕೆ ನಾಯಕಿ. ಹೃತಿಕ್ ನಟನೆಯ ‘ಫೈಟರ್’ ಚಿತ್ರಕ್ಕೂ ಅವರು ಹೀರೋಯಿನ್ ಆಗಿದ್ದಾರೆ. ‘ಪ್ರಾಜೆಕ್ಟ್ ಕೆ’ ಸೇರಿ ಇನ್ನೂ ಹಲವು ಚಿತ್ರಗಳು ಅವರ ಕೈಯಲ್ಲಿವೆ.
Published On - 6:31 pm, Tue, 27 September 22