ಹೀಗಿತ್ತು ಆದಿಪುರುಷ್ ಸಿನಿಮಾ ಫೈಟ್​ಗಳ ತಾಲೀಮು: ವಿಡಿಯೋ ನೋಡಿದವರಿಗೇಕೋ ಅನುಮಾನ

Adipurush: ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದೆ. ಆದರೆ ವಿಡಿಯೋ ನೋಡಿದವರು ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಹೀಗಿತ್ತು ಆದಿಪುರುಷ್ ಸಿನಿಮಾ ಫೈಟ್​ಗಳ ತಾಲೀಮು: ವಿಡಿಯೋ ನೋಡಿದವರಿಗೇಕೋ ಅನುಮಾನ
ಆದಿಪುರುಷ್
Follow us
ಮಂಜುನಾಥ ಸಿ.
|

Updated on:Jun 28, 2023 | 10:57 PM

ಆದಿಪುರುಷ್ (Adipurush) ಸಿನಿಮಾ ಬಿಡುಗಡೆ ಆಗಿ ಭರಪೂರ ನೆಗೆಟಿವ್ ವಿಮರ್ಶೆಗಳನ್ನು ಪಡೆದುಕೊಂಡಿದೆ. ಸಿನಿಮಾದ ವಿರುದ್ಧ ಹಲವರು ರೊಚ್ಚಿಗೆದ್ದು ಟೀಕಿಸಿದ್ದಾರೆ. ಕೆಲವರಂತೂ ದೂರುಗಳನ್ನು ಸಹ ದಾಖಲಿಸಿದ್ದಾರೆ. ಸಿನಿಮಾದ ಮೇಕಿಂಗ್ ಎಲ್ಲ ಓಕೆ, ಸಾಕಷ್ಟು ಖರ್ಚು ಮಾಡಿದ್ದಾರೆ ಆದರೆ ಸಿನಿಮಾದ ಪಾತ್ರಗಳನ್ನು ತಿದ್ದು ತೀಡಿ ರಾಢಿ ಎಬ್ಬಿಸಿದ್ದಾರೆ ಎಂಬುದೇ ಸಿನಿಪ್ರೇಮಿಗಳ ಮುಖ್ಯ ದೂರು. ಅಸಲಿಗೆ ರಾಮಾಯಣವನ್ನು (Ramayana) ಹೊಸ ತಂತ್ರಜ್ಞಾನದ ಮೂಲಕ ಹೇಳುವುದು ನಿರ್ದೇಶಕ ಓಂ ರಾವತ್ ಉದ್ದೇಶವಾಗಿತ್ತು ತಂತ್ರಜ್ಞಾನವನ್ನು ಸೀಮಿತ ಪರಿಧಿಯಲ್ಲಿ ಬಳಸಿದ್ದಾರೆ ಸಹ. ಹಾಗಿದ್ದರೂ ಹೆಚ್ಚು ಜನರಿಗೆ ಇಷ್ಟವಾಗುವ ಫಲಿತಾಂಶವನ್ನು ಪಡೆಯಲು ವಿಫಲರಾಗಿದ್ದಾರೆ ನಿರ್ದೇಶಕ. ಇದೀಗ ಆದಿಪುರುಷ್ ಸಿನಿಮಾಕ್ಕೆ ತಾಲೀಮು ಹೇಗೆ ಮಾಡಲಾಗಿತ್ತು ಎಂಬುದನ್ನು ತಿಳಿಸುವ ವಿಡಿಯೋ ಒಂದು ಬಿಡುಗಡೆ ಆಗಿದೆ. ಆದರೆ ವಿಡಿಯೋ ನೋಡಿದ ಮೇಲೆ ಕೆಲವು ಅನುಮಾನಗಳು ಸಹ ಹುಟ್ಟಿವೆ.

ಆದಿಪುರುಷ್ ಸಿನಿಮಾದ ಆರಂಭದಲ್ಲ ಬರುವ ಫೈಟ್ ಒಂದನ್ನು ಹೇಗೆ ಚಿತ್ರೀಕರಿಸಲಾಯಿತು. ಚಿತ್ರೀಕರಣಕ್ಕೆ ಮುನ್ನ ತಾಲೀಮು ಹೇಗಿತ್ತು ಎಂಬುದನ್ನು ತೋರಿಸುವ ವಿಡಿಯೋ ಒಂದು ಬಿಡುಗಡೆ ಆಗಿದೆ. ಪ್ರಭಾಸ್ ಬದಲಿಗೆ ಫೈಟರ್​ಗಳನ್ನು ಇರಿಸಿಕೊಂಡು ಡಮ್ಮಿ ಫೈಟ್ ಒಂದನ್ನು ಚಿತ್ರೀಕರಿಸಲಾಗಿದೆ. ಆ ನಂತರ ಡ್ಯೂಪ್ ಬದಲಿಗೆ ಪ್ರಭಾಸ್​ ಅದೇ ಫೈಟ್​ ಅನ್ನು ಮಾಡಿದ್ದಾರೆ ಬಳಿಕ ಆ ಫೈಟ್ ದೃಶ್ಯಗಳಿಗೆ ಗ್ರಾಫಿಕ್ಸ್ ಅಳವಡಿಸಲಾಗಿದೆ.

ವಿಡಿಯೋ ನೋಡಿದವರು ಇಷ್ಟೆಲ್ಲ ಶ್ರಮ ಪಟ್ಟು ಫೈಟ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆಯಾ ಎಂದು ಭೇಷ್ ಎಂದಿದ್ದಾರೆ. ಆದರೆ ಇನ್ನು ಕೆಲವರು ಡಮ್ಮಿ ಫೈಟರ್​ಗಳನ್ನು ಬಳಸಿ ಫೈಟ್ ದೃಶ್ಯ ಚಿತ್ರೀಕರಿಸಿ ಆ ನಂತರ ಡಮ್ಮಿ ಫೈಟರ್​ ಮುಖದ ಬದಲಾಗಿ ಪ್ರಭಾಸ್ ಮುಖವನ್ನು ಅಂಟಿಸಿರುವ ಸಾಧ್ಯತೆ ಇದೆ ಎಂದು ಅನುಮಾನಿಸಿದ್ದಾರೆ. ವಿಡಿಯೋದಲ್ಲಿ ತೋರಿಸಲಾಗಿರುವ ಫೈಟ್ ದೃಶ್ಯಗಳು ಬಹಳ ಕ್ಲಿಷ್ಟವಾಗಿವೆ, ತರಬೇತಿ ಪಡೆದಿರುವ ಡಮ್ಮಿ ಫೈಟರ್ ಲೀಲಾಜಾಲವಾಗಿ ಹಾರಿ, ಬಾಗಿ ಎಲ್ಲ ಫೈಟ್​ಗಳನ್ನು ಮಾಡಿದ್ದಾನೆ ಆದರೆ ಪ್ರಭಾಸ್​ಗೆ ಅಷ್ಟು ಫ್ಲೆಕ್ಸಿಬಲ್ ಆಗಿ ಫೈಟ್ ಮಾಡಲು ಸಾಧ್ಯವಾ ಎಂದೂ ಸಹ ಕೆಲವರು ಪ್ರಶ್ನೆ ಮಾಡಿದ್ದಾರೆ.

ಆದಿಪುರುಷ್ ಸಿನಿಮಾ ರಾಮಾಯಣದ ಕತೆ ಆಧರಿಸಿದ ಸಿನಿಮಾ ಆಗಿದ್ದು ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ಸೀತೆಯ ಪಾತ್ರದಲ್ಲಿ ಕೃತಿ ಸೆನನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನ ಪಾತ್ರದಲ್ಲಿ ದೇವದತ್ ನಾಗರೆ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡಿದ್ದು, ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:56 pm, Wed, 28 June 23