
ಬಾಲಿವುಡ್ನ ‘ಸನ್ ಆಫ್ ಸರ್ದಾರ್ 2’ (Son of Sardaar 2) ಸಿನಿಮಾ ನೋಡಲು ಕಾದಿದ್ದ ಅಜಯ್ ದೇವಗನ್ (Ajay Devgn) ಅಭಿಮಾನಿಗಳಿಗೆ ನಿರಾಸೆ ಆಗಿದೆ. ಜುಲೈ 25ರಂದು ಈ ಸಿನಿಮಾ ಬಿಡುಗಡೆ ಆಗಲಿದೆ ಎಂದು ಫ್ಯಾನ್ಸ್ ನಿರೀಕ್ಷೆ ಮಾಡಿದ್ದರು. ಅದಕ್ಕೆ ಚಿತ್ರತಂಡ ಕೂಡ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಕೊನೇ ಕ್ಷಣದಲ್ಲಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಜುಲೈ 25ರ ಬದಲಿಗೆ ಆಗಸ್ಟ್ 1ರಂದು ಸಿನಿಮಾ ತೆರೆಕಾಣಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಅಚ್ಚರಿ ಏನೆಂದರೆ, ಈ ಬದಲಾವಣೆಗೆ ಹೊಸ ಹೀರೋ ನಟನೆಯ ‘ಸೈಯಾರಾ’ (Saiyaara) ಸಿನಿಮಾದ ಪೈಪೋಟಿಯೇ ಕಾರಣ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ.
‘ಸನ್ ಆಫ್ ಸರ್ದಾರ್ 2’ ಸಿನಿಮಾದ ಬಿಡುಗಡೆಗೆ ಕೇವಲ 6 ದಿನ ಬಾಕಿ ಇದೆ ಎನ್ನುವಾಗ ರಿಲೀಸ್ ದಿನಾಂಕ ಬದಲಾವಣೆ ಮಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅದಕ್ಕೆ ಕಾರಣ ಏನು ಎಂಬ ಬಗ್ಗೆ ಗುಸುಗುಸು ಹಬ್ಬಿದೆ. ಕೊನೇ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇರುವ ಕಾರಣದಿಂದ ಈ ರೀತಿ ಮಾಡಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅಸಲಿ ಕಾರಣ ಬೇರೆಯೇ ಇದೆ ಎಂಬುದು ಜನರ ಅಭಿಪ್ರಾಯ.
ಜುಲೈ 18ರಂದು ಅಹಾನ್ ಪಾಂಡೆ ನಟನೆಯ ‘ಸೈಯಾರಾ’ ಸಿನಿಮಾ ಬಿಡುಗಡೆ ಆಗಿದೆ. ಮೋಹಿತ್ ಸೂರಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಹೊಸ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದರೂ ಕೂಡ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಮೊದಲ ದಿನವೇ 21.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಎಲ್ಲರ ಅಚ್ಚರಿಗೆ ಕಾರಣ ಆಗಿದೆ. ಈ ಸಿನಿಮಾದ ಎದುರು ಪೈಪೋಟಿ ನೀಡಲು ಅಜಯ್ ದೇವಗನ್ ಹೆದರಿರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
2ನೇ ದಿನ ಕೂಡ ‘ಸೈಯಾರಾ’ ಭರ್ಜರಿ ಕಲೆಕ್ಷನ್ ಮಾಡಿದೆ. ವರದಿಗಳ ಪ್ರಕಾರ, ಜುಲೈ 19ರಂದು ಈ ಸಿನಿಮಾಗೆ 24 ಕೋಟಿ ರೂಪಾಯಿ ಕಮಾಯಿ ಆಗಿದೆ. ಅಂದರೆ ಕೇವಲ 2 ದಿನಕ್ಕೆ ಚಿತ್ರದ ಒಟ್ಟು ಕಲೆಕ್ಷನ್ 45 ಕೋಟಿ ರೂಪಾಯಿ ಆಗಿದೆ. ಹಾಗಾಗಿ 2ನೇ ವೀಕೆಂಡ್ನಲ್ಲಿ ಕೂಡ ಈ ಸಿನಿಮಾದ ಹವಾ ಜೋರಾಗಿಯೇ ಇರಲಿದೆ. ಆ ಕಾರಣದಿಂದ ಅಜಯ್ ದೇವಗನ್ ಅವರು ಕ್ಲ್ಯಾಶ್ ತಪ್ಪಿಸಲು ‘ಸನ್ ಆಫ್ ಸರ್ದಾರ್ 2’ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಜಯ್ ದೇವಗನ್ ಕುಡಿಯೋ ವಿಸ್ಕಿ ಬೆಲೆ ಎಷ್ಟು? ಆ ದುಡ್ಡಲ್ಲಿ ಒಂದು ಬೈಕ್ ಖರೀದಿಸಬಹುದು
ಕಾಮಿಡಿ ಕಹಾನಿ ಇರುವ ‘ಸನ್ ಆಫ್ ಸರ್ದಾರ್ 2’ ಸಿನಿಮಾದಲ್ಲಿ ಅಜಯ್ ದೇವಗನ್ ಜೊತೆ ಮೃಣಾಲ್ ಠಾಕೂರ್, ರವಿ ಕಿಶನ್, ಖುಬ್ರಾ ಸೇಠ್, ಚಂಕಿ ಪಾಂಡೆ, ಶರತ್ ಸಕ್ಸೇನಾ, ಸಂಜಯ್ ಮಿಶ್ರಾ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ವಿಜಯ್ ಕುಮಾರ್ ಅರೋರಾ ಅವರು ನಿರ್ದೇಶನ ಮಾಡಿದ್ದಾರೆ. ಸ್ವತಃ ಅಜಯ್ ದೇವಗನ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.