Ram Setu: ‘ರಾಮ್ ಸೇತು’ ಚಿತ್ರಕ್ಕೆ ಅಕ್ಷಯ್ ಕುಮಾರ್ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ಲಾಭ-ನಷ್ಟದ ಲೆಕ್ಕಾಚಾರ
Akshay Kumar Remuneration: ‘ರಾಮ್ ಸೇತು’ ಸಿನಿಮಾ ಬರೋಬ್ಬರಿ 140ರಿಂದ 150 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗಿದೆ ಎನ್ನಲಾಗಿದೆ. ಅದರಲ್ಲಿ ದೊಡ್ಡ ಮೊತ್ತವು ಅಕ್ಷಯ್ ಕುಮಾರ್ ಅವರ ಸಂಭಾವನೆಗೆ ಖರ್ಚಾಗಿದೆ.
2022ರಲ್ಲಿ ಹೇಳಿಕೊಳ್ಳುವಂತಹ ಗಳಿಕೆ ಮಾಡಿದ ಬಾಲಿವುಡ್ ಚಿತ್ರಗಳು ಸಂಖ್ಯೆ ಕಡಿಮೆ. ಹಿಂದಿ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲು ಅನುಭವಿಸಿದ ವರ್ಷ ಇದು. ಅದರ ನಡುವೆ ಕೆಲವು ಚಿತ್ರಗಳು ಸಮಾಧಾನಕರವಾಗಿ ಕಲೆಕ್ಷನ್ ಮಾಡಿವೆ. ಆ ಪೈಕಿ ಅಕ್ಷಯ್ ಕುಮಾರ್ ನಟನೆಯ ‘ರಾಮ್ ಸೇತು’ (Ram Setu) ಚಿತ್ರ ಕೂಡ ಒಂದು. ಅಕ್ಟೋಬರ್ 25ರಂದು ಈ ಚಿತ್ರ ಬಿಡುಗಡೆ ಆಯಿತು. ಈವರೆಗೂ ಮಾಡಿರದ ಒಂದು ವಿಶೇಷ ಪಾತ್ರವನ್ನು ಅಕ್ಷಯ್ ಕುಮಾರ್ ಅವರು ಅವರು ಈ ಸಿನಿಮಾದಲ್ಲಿ ಮಾಡಿದ್ದಾರೆ. ‘ರಾಮ್ ಸೇತು’ ಚಿತ್ರಕ್ಕಾಗಿ ಅಕ್ಷಯ್ ಕುಮಾರ್ ಪಡೆದ ಸಂಭಾವನೆ (Akshay Kumar Remuneration) ಎಷ್ಟು? ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಮೂಲಗಳ ಪ್ರಕಾರ ಬರೋಬ್ಬರಿ 50 ಕೋಟಿ ರೂಪಾಯಿ ಸಂಬಳ ಅಕ್ಷಯ್ ಕುಮಾರ್ (Akshay Kumar) ಜೇಬು ಸೇರಿದೆ.
ಭಾರತದಿಂದ ಶ್ರೀಲಂಕಾದವರೆಗೆ ರಾಮ ಸೇತು ಇತ್ತು ಎಂಬ ಉಲ್ಲೇಖ ರಾಮಾಯಣದಲ್ಲಿದೆ. ಆ ಸೇತುವೆ ನಿಜವೋ ಅಥವಾ ಕೇವಲ ಕಾಲ್ಪನಿಕವೋ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪುರಾತತ್ವ ಶಾಸ್ತ್ರಜ್ಞನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅವರು ಕಾಣಿಸಿಕೊಂಡಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಡೀಸೆಂಟ್ ಓಪನಿಂಗ್ ಪಡೆದುಕೊಂಡಿತು. 4 ದಿನಕ್ಕೆ 41.45 ಕೋಟಿ ರೂಪಾಯಿ ಗಳಿಸಿದೆ. 5ನೇ ದಿನವಾದ ಶನಿವಾರದ (ಅ.29) ಕಲೆಕ್ಷನ್ ಸೇರಿದರೆ ಅರ್ಧ ಶತಕ ಆಗುವ ನಿರೀಕ್ಷೆ ಇದೆ.
‘ರಾಮ್ ಸೇತು’ ಸಿನಿಮಾ ಬರೋಬ್ಬರಿ 140ರಿಂದ 150 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗಿದೆ ಎನ್ನಲಾಗಿದೆ. ಅದರಲ್ಲಿ 50 ಕೋಟಿ ರೂಪಾಯಿ ಅಕ್ಷಯ್ ಕುಮಾರ್ ಅವರ ಸಂಭಾವನೆಗೆ ಖರ್ಚಾಗಿದೆ. ಈ ಚಿತ್ರದಲ್ಲಿ ಖ್ಯಾತ ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನುಸ್ರತ್ ಬರುಚಾ ಕೂಡ ಅಭಿನಯಿಸಿದ್ದಾರೆ. ಮೂಲಗಳ ಪ್ರಕಾರ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ 4 ಕೋಟಿ ರೂಪಾಯಿ ಸಂಬಳ ನೀಡಲಾಗಿದೆ. ನುಸ್ರತ್ ಬರುಚಾ ಅವರು 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಅಕ್ಷಯ್ ಕುಮಾರ್ ಅವರು 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದು ಮಾತ್ರವಲ್ಲದೇ ಈ ಚಿತ್ರದ ಸಹ-ನಿರ್ಮಾಪಕರೂ ಆಗಿರುವುದರಿಂದ ಲಾಭದ ಹಣದಲ್ಲಿಯೂ ಅವರಿಗೆ ಪಾಲು ಸಿಗಲಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಮಾತ್ರವಲ್ಲದೇ ಒಟಿಟಿ ಪ್ರಸಾರ ಹಕ್ಕು, ಟಿವಿ ಪ್ರಸಾರ ಹಕ್ಕುಗಳಿಂದಲೂ ಆದಾಯ ಬರಲಿದೆ. ಎಲ್ಲಾ ಸೇರಿದರೆ ಈ ಚಿತ್ರ ಒಂದು ಹಂತಕ್ಕೆ ಸೇಫ್ ಆಗುತ್ತದೆ ಎಂಬುದು ವ್ಯವಹಾರ ಬಲ್ಲವರ ಅಭಿಪ್ರಾಯ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.