‘ಇಂಥ ಸಿನಿಮಾ ನೋಡುವಾಗ ಮೊಬೈಲ್ ಮುಟ್ಟಬೇಡಿ’: ಅಕ್ಷಯ್ ಕುಮಾರ್ ಮನವಿ
‘ಕೇಸರಿ: ಚಾಪ್ಟರ್ 2’ ಸಿನಿಮಾ ಬಿಡುಗಡೆ ಆಗುವುದಕ್ಕೂ ಮೊದಲೇ ಅಕ್ಷಯ್ ಕುಮಾರ್ ಒಂದು ಮನವಿ ಮಾಡಿಕೊಂಡಿದ್ದಾರೆ. ಚಿತ್ರಮಂದಿರದಲ್ಲಿ ಅಭಿಮಾನಿಗಳು ಈ ಸಿನಿಮಾಗೆ ಅವಮಾನ ಮಾಡಬಾರದು ಎಂದು ಅವರು ಹೇಳಿದ್ದಾರೆ. ಸಿನಿಮಾ ವೀಕ್ಷಣೆ ವೇಳೆ ಮೊಬೈಲ್ ಬಳಕೆ ಮಾಡಿಬೇಡಿ ಎಂದು ಅಕ್ಷಯ್ ಕುಮಾರ್ ಅವರು ಪ್ರೇಕ್ಷಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರು ಪ್ರತಿ ಸಿನಿಮಾದಲ್ಲೂ ವಿಶೇಷ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಬಾರಿ ಅವರು ‘ಕೇಸರಿ: ಚಾಪ್ಟರ್ 2’ (Kesari Chapter 2) ಸಿನಿಮಾದಲ್ಲಿ ದೇಶಭಕ್ತಿಯ ಕಹಾನಿ ಹೇಳಲಿದ್ದಾರೆ. 1919ರಲ್ಲಿ ನಡೆದ ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಕುರಿತು ಈ ಸಿನಿಮಾ ಮೂಡಿಬಂದಿದೆ. ಏಪ್ರಿಲ್ 18ರಂದು ‘ಕೇಸರಿ: ಚಾಪ್ಟರ್ 2’ (Kesari 2) ಚಿತ್ರ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಅಕ್ಷಯ್ ಕುಮಾರ್ ಅವರು ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದಾರೆ. ಇಂಥ ಸಿನಿಮಾಗಳನ್ನು ನೋಡುವಾಗ ದಯವಿಟ್ಟು ಮೊಬೈಲ್ ಬಳಸಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ.
ಬ್ರಿಟಿಷರು ನಡೆಸಿದ ಜಲಿಯನ್ವಾಲಾ ಬಾಗ್ ಹತ್ಯಾಕಾಂಡವನ್ನು ಪ್ರಶ್ನಿಸಿ ಸಿ. ಶಂಕರನ್ ನಾಯರ್ ಅವರು ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದರು. ಆ ಘಟನೆಯನ್ನು ಆಧರಿಸಿ ‘ಕೇಸರಿ 2’ ಸಿನಿಮಾ ಮೂಡಿಬಂದಿದೆ. ಶಂಕರನ್ ನಾಯರ್ ಪಾತ್ರವನ್ನು ಅಕ್ಷಯ್ ಕುಮಾರ್ ಅವರು ಮಾಡಿದ್ದಾರೆ. ಇಂಥ ಸಿನಿಮಾ ಮಾಡಿದ್ದಕ್ಕೆ ಅಕ್ಷಯ್ ಕುಮಾರ್ ಅವರಿಗೆ ತುಂಬ ಹೆಮ್ಮೆ ಇದೆ. ಹಾಗಾಗಿ ಫ್ಯಾನ್ಸ್ ಕೂಡ ಗಮನವಿಟ್ಟು ಸಿನಿಮಾ ನೋಡಬೇಕು ಎಂಬುದು ಅಕ್ಷಯ್ ಕುಮಾರ್ ಬಯಕೆ.
ಬಿಡುಗಡೆಗೂ ಮುನ್ನ ದೆಹಲಿಯಲ್ಲಿ ‘ಕೇಸರಿ 2’ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಆ ವೇಳೆ ಮಾಧ್ಯಮಗಳ ಜೊತೆ ಮಾತನಾಡುವಾಗ ಅಕ್ಷಯ್ ಕುಮಾರ್ ಅವರು ಈ ವಿಷಯ ತಿಳಿಸಿದರು. ‘ದಯವಿಟ್ಟು ನಿಮ್ಮ ಮೊಬೈಲ್ ಫೋನ್ಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳಿ. ಸಿನಿಮಾದ ಪ್ರತಿಯೊಂದು ಸಂಭಾಷಣೆಯನ್ನೂ ಕೇಳಿಸಿಕೊಳ್ಳಿ’ ಎಂದಿದ್ದಾರೆ ಅಕ್ಷಯ್ ಕುಮಾರ್.
‘ಗಮನವಿಟ್ಟು ಸಿನಿಮಾ ನೋಡಿದರೆ ತುಂಬ ಸಹಾಯ ಆಗುತ್ತದೆ. ಸಿನಿಮಾ ಪ್ರದರ್ಶನ ಆಗುವಾಗ ನೀವು ಇನ್ಸ್ಟಾಗ್ರಾಮ್ ನೋಡಿದರೆ ಅದರಿಂದ ಸಿನಿಮಾಗೆ ಅವಮಾನ ಆಗುತ್ತದೆ. ಹಾಗಾಗಿ ಎಲ್ಲರೂ ಫೋನ್ಗಳನ್ನು ಬದಿಗಿಟ್ಟು ಸಿನಿಮಾ ನೋಡಿ’ ಎಂದು ಅಕ್ಷಯ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಈ ಸಿನಿಮಾಗೆ ಕರಣ್ ಸಿಂಗ್ ತ್ಯಾಗಿ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ‘ಮೂರ್ಖರೇ ಆಗಿರಬೇಕು’: ಜಯಾ ಬಚ್ಚನ್ಗೆ ಮುಲಾಜಿಲ್ಲದೇ ತಿರುಗೇಟು ಕೊಟ್ಟ ಅಕ್ಷಯ್ ಕುಮಾರ್
‘ಕೇಸರಿ: ಚಾಪ್ಟರ್ 2’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಆರ್. ಮಾಧವನ್, ಅನನ್ಯಾ ಪಾಂಡೆ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ಈಗಾಗಲೇ ವಿಶೇಷ ಪ್ರದರ್ಶನದಲ್ಲಿ ಸಿನಿಮಾ ನೋಡಿದವರು ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.