‘ಮೂರ್ಖರೇ ಆಗಿರಬೇಕು’: ಜಯಾ ಬಚ್ಚನ್ಗೆ ಮುಲಾಜಿಲ್ಲದೇ ತಿರುಗೇಟು ಕೊಟ್ಟ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಜಯಾ ಬಚ್ಚನ್ ಅವರು ವ್ಯಂಗ್ಯ ಮಾಡಿದ್ದರು. ಅವರಿಗೆ ಈಗ ಅಕ್ಷಯ್ ಕುಮಾರ್ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಕಳಕಳಿ ಇರುವಂತಹ ಸಿನಿಮಾಗಳ ಬಗ್ಗೆ ಜಯಾ ಬಚ್ಚನ್ ಟೀಕೆ ಮಾಡಿದ್ದಕ್ಕೆ ನೆಟ್ಟಿಗರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಟ ಅಕ್ಷಯ್ ಕುಮಾರ್ (Akshay Kumar) ಅವರು ಸಾಮಾಜಿಕ ಕಳಕಳಿ ಇರುವ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಜನರಿಗೆ ಕೂಡ ಅಂಥ ಸಿನಿಮಾಗಳು ಇಷ್ಟ ಆಗಿವೆ. ಆ ರೀತಿಯ ಸಿನಿಮಾಗಳ ಬಗ್ಗೆ ಕಿಂಚಿತ್ತೂ ಜ್ಞಾನ ಇಲ್ಲದೇ ಕೆಲವರು ಟೀಕೆ ಮಾಡಿದಾಗ ಸಹಜವಾಗಿಯೇ ಅಕ್ಷಯ್ ಕುಮಾರ್ ಸಿಟ್ಟಾಗುತ್ತಾರೆ. ಈಗ ಜಯಾ ಬಚ್ಚನ್ (Jaya Bachchan) ವಿಚಾರದಲ್ಲಿ ಹಾಗೆಯೇ ಆಗಿದೆ. ಕೆಲವೇ ದಿನಗಳ ಹಿಂದೆ ಜಯಾ ಬಚ್ಚನ್ ಅವರು ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ (Toilet Ek Prem Katha) ಸಿನಿಮಾವನ್ನು ಟೀಕಿಸಿದ್ದರು. ಇದರಿಂದ ಅಕ್ಷಯ್ ಕುಮಾರ್ ಅವರಿಗೆ ಬೇಸರ ಆಗಿದೆ. ಹಾಗಾಗಿ ಅವರು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.
ಶೌಚಾಲಯ ನಿರ್ಮಾಣ ಮತ್ತು ಗ್ರಾಮ ನೈರ್ಮಲ್ಯದ ಬಗ್ಗೆ ಜಾಗ್ರತೆ ಮೂಡಿಸುವಂತಹ ಪ್ರಯತ್ನವನ್ನು ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಸಿನಿಮಾ ಮಾಡಿತ್ತು. ಬಾಕ್ಸ್ ಆಫೀಸ್ನಲ್ಲಿ ಕೂಡ ಈ ಚಿತ್ರಕ್ಕೆ ಉತ್ತಮ ಗಳಿಕೆ ಆಗಿತ್ತು. ಆದರೆ ಅದರ ಬಗ್ಗೆ ಅರಿವಿಲ್ಲದೇ ಜಯಾ ಬಚ್ಚನ್ ಅವರು ಟೀಕೆ ಮಾಡಿದ್ದರು. ‘ಆ ಸಿನಿಮಾದ ಶೀರ್ಷಿಕೆ ನೋಡಿ. ಅಂಥ ಟೈಟಲ್ ಇರುವ ಸಿನಿಮಾವನ್ನು ನಾನು ನೋಡುವುದೇ ಇಲ್ಲ. ಇಷ್ಟು ಜನರಲ್ಲಿ ಕೇವಲ ನಾಲ್ಕು ಜನ ಮಾತ್ರ ಆ ಸಿನಿಮಾ ನೋಡುತ್ತಾರೆ. ಹಾಗಾಗಿ ಅದು ಫ್ಲಾಪ್ ಸಿನಿಮಾ’ ಎಂದು ಜಯಾ ಬಚ್ಚನ್ ಅವರು ಹೇಳಿದ್ದರು.
akshaykumar’s befitting reply to Jaya bachchan :
“koi bewkoof hi hoga jo padman and TEPK jaisi filmon ko criticize karega”😂#AkshayKumar pic.twitter.com/14XJItQK7m
— 𝙎𝙬𝙚𝙩𝙖 (@Swetaakkian) April 11, 2025
ಅಕ್ಷಯ್ ಕುಮಾರ್ ಹೇಳಿದ್ದೇನು?
‘ಅಂತಹ ಸಿನಿಮಾಗಳನ್ನು ಯಾರೋ ಟೀಕಿಸುತ್ತಾರೆ ಅಂತ ನನಗೆ ಅನಿಸಲ್ಲ. ಒಂದು ವೇಳೆ ಟೀಕೆ ಮಾಡಿದ್ದರೆ ಅವರು ಮೂರ್ಖರೇ ಆಗಿರಬೇಕು. ಪ್ಯಾಡ್ ಮ್ಯಾನ್, ಟಾಯ್ಲೆಟ್ ಏಕ್ ಪ್ರೇಮ್ ಕಥಾ, ಏರ್ಲಿಫ್ಟ್, ಕೇಸರಿ, ಕೇಸರಿ 2 ರೀತಿಯ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇನೆ. ಇಂಥ ಸಿನಿಮಾಗಳನ್ನು ಟೀಕಿಸುವವರು ಖಂಡಿತಾ ಮೂರ್ಖರು. ಹೃದಯಪೂರ್ವಕವಾಗಿ ನಾನು ಆ ಸಿನಿಮಾಗಳನ್ನು ಮಾಡಿದ್ದೇನೆ. ಆ ಸಿನಿಮಾಗಳು ಜನರಿಗೆ ಸಾಕಷ್ಟು ವಿಷಯಗಳನ್ನು ತಿಳಿಸುತ್ತವೆ’ ಎಂದು ಅಕ್ಷಯ್ ಕುಮಾರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಕೇಸರಿ: ಚಾಪ್ಟರ್ 2’ ಸಿನಿಮಾದಲ್ಲಿ ರಿಯಲ್ ಕಹಾನಿ; ಟ್ರೇಲರ್ನಲ್ಲಿ ಅಕ್ಷಯ್ ಕುಮಾರ್ ಅಬ್ಬರ
ಜಯಾ ಬಚ್ಚನ್ ಅವರು ನಿರ್ದಿಷ್ಟವಾಗಿ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಸಿನಿಮಾದ ಟೈಟಲ್ ಬಗ್ಗೆಯೇ ಟೀಕೆ ಮಾಡಿದ್ದರಿಂದ ಅದಕ್ಕೂ ಅಕ್ಷಯ್ ಕುಮಾರ್ ಅವರು ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ. ‘ಈಗ ಅವರು ಹೀಗೆ ಹೇಳಿದ್ದಾರೆ ಎಂದರೆ ಸರಿಯೇ ಇರಬೇಕು. ನನಗೆ ಗೊತ್ತಿಲ್ಲ. ಅವರು ಹೇಳುತ್ತಿದ್ದಾರೆ ಎಂದರೆ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ರೀತಿಯ ಸಿನಿಮಾ ಮಾಡಿ ನಾನು ಏನೋ ತಪ್ಪು ಮಾಡಿದ್ದೇನೆ ಎನಿಸುತ್ತದೆ’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.